ಶಾಸಕ ರಾಮದಾಸ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಶಾಸಕ ರಾಮದಾಸ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ

May 16, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಒಳಗೊಂಡಂತೆ ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ಪರಿಹರಿಸುವ ಸಂಬಂಧ ಪಾಲಿಕೆ ಆಡಳಿತ ವರ್ಗ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪಾಲಿಕೆ ಬಿಜೆಪಿ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಮಹಾ ನಗರ ಪಾಲಿಕೆ ಮುಖ್ಯ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, `ಖಾತೆ ಬದಲಾ ವಣೆ, ಹೊಸ ಖಾತೆ, ನಕ್ಷೆ ಅನುಮೋದನೆ ಹಾಗೂ ಕಂದಾಯ ಪಾವತಿಗೆ ಆನ್‍ಲೈನ್ ವ್ಯವಸ್ಥೆ ಮಾಡಿ’, `ಸೂಯೆಜ್ ಫಾರಂನಲ್ಲಿ ನಡೆಯು ತ್ತಿರುವ ಅಕ್ರಮಗಳನ್ನು ನಿಲ್ಲಿಸಿ’, `ಪ್ರತಿ ವಾರ್ಡ್ ಗಳಲ್ಲಿ ಶುದ್ಧ ನೀರಿನ ಸರಬರಾಜು ಸಮರ್ಪಕ ಗೊಳಿಸಿ’ ಎಂಬಿತ್ಯಾದಿ ಘೋಷಣೆ ಒಳಗೊಂಡ ಫಲಕಗಳನ್ನು ಹಿಡಿದು ಕಿಡಿಕಾರಿದರು. ಸ್ಥಳದಲ್ಲಿ ಏಳೆಂಟು ಹಸುಗಳನ್ನು ಕಟ್ಟಿ ಮೇಯಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಎಸ್.ಎ.ರಾಮ ದಾಸ್, ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಂತೆ ಕಳೆದ 1 ವರ್ಷದಿಂದ ಹಲವು ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ. ನಾಲ್ಕು ಬಾರಿ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ನಾಯಿ-ಹಂದಿ, ಹಾವುಗಳ ತಾಣವಾಗಿ ಪರಿಣಮಿಸಿವೆ. ಇಲ್ಲಿನ ಅನೈರ್ಮಲ್ಯ ದಿಂದ ಸೊಳ್ಳೆಗಳು ಹೆಚ್ಚಾಗುತ್ತಿವೆ. ಖಾಲಿ ನಿವೇ ಶನಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಒಂದು ಚದರ ಅಡಿಗೆ 2 ರೂ.ನಂತೆ ಸೆಸ್ ಸಂಗ್ರಹ ಮಾಡಿದ್ದು, ಇದರ ಒಟ್ಟು ಮೊತ್ತ 7 ಕೋಟಿ ರೂ. ದಾಟಿದ್ದರೂ ಟೆಂಡರ್ ಕರೆದು ಸ್ವಚ್ಛತೆ ಗೊಳಿಸುವ ಸಂಬಂಧ ಕ್ರಮ ವಹಿಸಿಲ್ಲ. ಪರಿಣಾಮ ಖಾಲಿ ನಿವೇಶನಗಳಲ್ಲಿ ಅನೈರ್ಮಲ್ಯ ತಾಂಡವ ವಾಡುತ್ತಿದ್ದು, ರೋಗ-ರುಜಿನಗಳು ಹರಡುವ ಆತಂಕ ಎದುರಾಗಿದೆ ಎಂದು ಕಿಡಿಕಾರಿದರು.

ಮಳೆ ಬಂದರೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಲಿದ್ದು, ಇದನ್ನು ಸರಿಪಡಿಸುವ ಸಂಬಂಧ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೆಲಸ ಪ್ರಾರಂಭಿಸಿದ್ದರೂ ಪೂರ್ಣಗೊಳಿಸಿಲ್ಲ. ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಈಗ ಪುನಃ ಅದೇ ಸಮಸ್ಯೆ ಮರುಕಳಿಸಲಿದೆ. ಈ ಹಿಂದೆ ಪಾಲಿಕೆ ವಲಯ ಕಚೇರಿಗಳಿಗೆ ನಾನು ಭೇಟಿ ನೀಡಿದ್ದಾಗ ವರ್ಷಕ್ಕೂ ಹೆಚ್ಚು ಕಾಲ ಖಾತೆ ಬದಲಾವಣೆ ಸಂಬಂಧ ಕಡತ ವಿಲೇವಾರಿ ಮಾಡದೇ ಲಂಚಕ್ಕೆ ಪೀಡಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಸಂಬಂಧ ಈವರೆಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಖಾತೆ ಬದಲಾವಣೆ, ಹೊಸ ಖಾತೆ, ನಕ್ಷೆ ಅನುಮೋದನೆ ಹಾಗೂ ಕಂದಾಯ ಪಾವತಿಗೆ ಆನ್‍ಲೈನ್ ವ್ಯವಸ್ಥೆ ಮಾಡಲು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬೀದಿಬದಿ ವ್ಯಾಪಾರಿಗಳು ಆನ್‍ಲೈನ್‍ನಲ್ಲಿ ವಹಿವಾಟು ನಡೆಸುವ ಈ ಸಂದರ್ಭದಲ್ಲೂ ಪಾಲಿಕೆ ಹಳೇ ಪದ್ಧತಿಗೆ ಜೋತು ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನನ, ಮರಣ ಪತ್ರಕ್ಕೆ ಲಂಚ: ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಒಂದು ಪ್ರಮಾಣ ಪತ್ರಕ್ಕೆ 500 ರೂ.ನಿಂದ 2 ಸಾವಿರ ರೂ.ವರೆಗೆ ಲಂಚಕ್ಕೆ ಪೀಡಿಸಲಾಗುತ್ತಿದೆ. ಇಂತಹ ಅವ್ಯವಸ್ಥೆಯನ್ನು ಹಿಂದಿನ ಪಾಲಿಕೆ ಆಯುಕ್ತರಿಗೆ ಖುದ್ದು ಕರೆತಂದು ತೋರಿಸಿದ್ದಾಗ ಕ್ಷಮೆ ಯಾಚಿಸಿ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಲಂಚಗುಳಿತ ಮಾತ್ರ ಇನ್ನೂ ನಿಂತಿಲ್ಲ ಎಂದು ಎಸ್.ಎ.ರಾಮದಾಸ್ ಆಪಾದಿಸಿದರು.

ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಎಲ್‍ಇಡಿ ಬಲ್ಬುಗಳನ್ನು ಅಳವಡಿಸುವ ಯೋಜನೆ ನೆಪವಾಗಿಟ್ಟುಕೊಂಡು ಬೀದಿ ದೀಪಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಪರಿಣಾಮ ಕಳ್ಳಕಾಕರು ಅಟ್ಟ ಹಾಸ ಮೆರೆಯುವಂತಾಗಿದೆ. ಸೂಯೆಜ್ ಫಾರಂ ನಲ್ಲಿ ಏಳೂವರೆ ಲಕ್ಷ ಟನ್ ಕಸ ವಿಲೇವಾರಿ ಆಗದೇ ಹಾಗೆಯೇ ಬಿದ್ದಿದೆ. ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಾಲಿಕೆಗೆ ನೋಟಿಸ್ ನೀಡ ಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ವಾರೆಂಟ್ ನೀಡಿದೆ. ಇಷ್ಟಾದರೂ ಕಸ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಅಧಿಕಾರಿ ವರ್ಗ ತಮ್ಮ ಇಚ್ಛಾನುಸಾರ ನಡೆದುಕೊಳ್ಳುವ ಮೂಲಕ ಪಾಲಿಕೆ ಸದಸ್ಯರನ್ನೂ ಕಡೆಗಾಣಿಸಲಾಗುತ್ತಿದೆ. ಸೂಯೆಜ್ ಫಾರಂನ 350 ಎಕರೆ ಪ್ರದೇಶವನ್ನು ಮಹಾರಾಜರು ಹಸುಗಳ ಮೇವಿಗಾಗಿ ನೀಡಿದ್ದರು. ಕಾನೂನಿನಂತೆ ನೋಡಿದರೆ ಅದು ಹಸುಗಳ ಆಸ್ತಿ. ಕೂಡಲೇ ಇಲ್ಲಿನ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳು ಈಡೇರದಿದ್ದರೆ ಹೈಕೋರ್ಟ್‍ನಲ್ಲಿ ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂದು ಎಸ್.ಎ. ರಾಮದಾಸ್ ಎಚ್ಚರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಎಸ್.ಎ.ರಾಮದಾಸ್ ಶಾಸಕ ಎಲ್.ನಾಗೇಂದ್ರ ಜೊತೆಗೂಡಿ ಸಮಸ್ಯೆ ಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು. ಬಿಜೆಪಿ ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸುನಂದ ಪಾಲನೇತ್ರ, ಶಿವಕುಮಾರ್, ಗೋಪಾಲಕರ ಸಂಘದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಮದಾಸರಿಗೆ ಅಧಿಕಾರಿಗಳ ಪ್ರಶ್ನಿಸಲು ಅಧಿಕಾರವಿದೆ
ಮೈಸೂರು: ಶಾಸಕ ಎಸ್.ಎ.ರಾಮದಾಸ್ ಪಾಲಿಕೆಯ ಗೌರವಾನ್ವಿತ ಸದಸ್ಯರಾಗಿದ್ದು, ಪಾಲಿಕೆಯಿಂದ ಆಗಬೇಕಿರುವ ಕೆಲಸ-ಕಾರ್ಯಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಲು ಅವರಿಗೆ ಅಧಿಕಾರವಿದೆ. ಹೀಗಾಗಿ ಈ ರೀತಿ ಪ್ರತಿಭಟನೆ ನಡೆಸುವ ಅಗತ್ಯತೆ ಇರ ಲಿಲ್ಲ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರತಿಕ್ರಿಯಿಸಿದರು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಎದುರು ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಮದಾಸ್ ಅವರು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಾತನಾಡಬಹುದಿತ್ತು. ಪಾಲಿಕೆ ವಿರುದ್ಧ ಪ್ರತಿಭಟನೆ ಎಂದರೆ ಅದಕ್ಕೆ ಮೇಯರ್ ಹೊಣೆಗಾರರಾಗಬೇಕಾಗುತ್ತದೆ. ಹೀಗಾಗಿ ಖುದ್ದು ನನ್ನನ್ನೇ ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿಸಬಹುದಿತ್ತು. ಎರಡು ಬಾರಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದಿದ್ದಾರೆ. ಆದರೆ ಅದು ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬು ಅಳವಡಿಸುವುದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದರಿಂದ ಪ್ರಸ್ತುತ ಆಗುತ್ತಿರುವ ಸಮಸ್ಯೆಗಳನ್ನು ರಾಮದಾಸ್ ಅವರು ವಿಧಾನಸಭಾ ಕಲಾಪದಲ್ಲೇ ದನಿ ಎತ್ತಬಹುದು. ಕಂದಾಯ ಪಾವತಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಆನ್‍ಲೈನ್ ವ್ಯವಸ್ಥೆ ಅಳವಡಿಸಿಕೊಳ್ಳಲು ಈಗಾಗಲೇ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸೂಯೆಜ್ ಫಾರಂ ಸಮಸ್ಯೆ ಇಂದು ನೆನ್ನೆಯದಲ್ಲ. ಇವರ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಯೆಜ್ ಫಾರಂ ಇರುವ ಹಿನ್ನೆಲೆಯಲ್ಲಿ ಇವರೇ ಪರಿಹಾರೋಪಾಯ ಕಂಡು ಹಿಡಿಯಲು ಸಾಧ್ಯವಿದೆ. ಅಲ್ಲದೆ, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆಯಲ್ಲೇ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಲು ಅವರಿಗೆ ಅವಕಾಶವಿತ್ತು ಎಂದು ಹೇಳಿದರು.

Translate »