`ಆಧಾರ್’ ಮಾನದಂಡದಡಿ ಆರ್‍ಟಿಇ ಮಕ್ಕಳ ಆಯ್ಕೆಯಿಂದ ಅರ್ಹರಿಗೆ ಅನ್ಯಾಯ: ಪೋಷಕರ ಆಕ್ಷೇಪ
ಮೈಸೂರು

`ಆಧಾರ್’ ಮಾನದಂಡದಡಿ ಆರ್‍ಟಿಇ ಮಕ್ಕಳ ಆಯ್ಕೆಯಿಂದ ಅರ್ಹರಿಗೆ ಅನ್ಯಾಯ: ಪೋಷಕರ ಆಕ್ಷೇಪ

May 16, 2019

ಮೈಸೂರು: ಖಾಸಗಿ ಶಾಲೆ ಗಳಿಗೆ ಆರ್‍ಟಿಇ ಕಾಯ್ದೆಯಡಿ ಮಕ್ಕಳನ್ನು ಆಯ್ಕೆ ಮಾಡುವಾಗ ಆಧಾರ್ ಕಾರ್ಡನ್ನು ಮಾತ್ರವೇ ಪರಿಗಣಿಸಬೇಕೆಂದು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.

ಆರ್‍ಟಿಇ ವ್ಯಾಪ್ತಿಗೆ ಬರುವ ಶಾಲೆ ಗಳಲ್ಲಿ ಮಕ್ಕಳನ್ನು ಆಯ್ಕೆ ಮಾಡಲು ನಗರ ಪ್ರದೇಶಗಳಲ್ಲಿ ವಾರ್ಡ್‍ಗಳ ವ್ಯಾಪ್ತಿಯನ್ನು ಗುರುತಿಸಲಾಗಿದೆ. ಈ ವಾರ್ಡ್ ವ್ಯಾಪ್ತಿ ಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದಿರುವ ಕಡೆ ಮಾತ್ರ ಅನುದಾನ ರಹಿತ ಶಾಲೆಗಳನ್ನು ಗುರುತಿಸಿ ಶೇ.25ರಷ್ಟು ಮಕ್ಕಳನ್ನು ಆರ್‍ಟಿಇ ಕಾಯ್ದೆಯಡಿ ದಾಖಲು ಮಾಡಿಕೊಳ್ಳ ಬೇಕು ಎಂದು ಹೇಳಲಾಗುತ್ತಿದೆ.

ಫಲಾನುಭವಿಗಳನ್ನು ಆಯ್ಕೆ ಮಾಡು ವಾಗ ವಾಸ ಸ್ಥಳ ಗುರುತಿಸಲು ಆಧಾರ್ ಕಾರ್ಡನ್ನು ಮಾತ್ರ ಮಾನದಂಡವಾಗಿ ಸೂಚಿಸಲಾಗಿದೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿರುವ ವಿಳಾಸ ಹಾಗೂ ಆಧಾರ್ ಕಾರ್ಡ್‍ನಲ್ಲಿ ಇರುವ ವಿಳಾಸಕ್ಕೆ ಹೊಂದಾಣಿಕೆಯಾಗದಿದ್ದರೂ, ಆಧಾರ್ ಕಾರ್ಡನ್ನೇ ಮಾನದಂಡವಾಗಿಟ್ಟುಕೊಂಡು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಶಿಕ್ಷಣ ಸಂಸ್ಥೆಗಳ ಮೇಲೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ.

ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶಾಲೆಗಳವರು ಆಧಾರ್ ಹೊರತುಪಡಿಸಿ ಬೇರೆ ಯಾವುದೇ ದಾಖಲೆ ಗಳನ್ನು ಪರಿಶೀಲಿಸಬಾರದು ಎಂದು ಕಟ್ಟಪ್ಪಣೆ ವಿಧಿಸಿರುವ ಕಾರಣ ಅರ್ಹ ಫಲಾ ನುಭವಿಗಳು ವಂಚಿತರಾಗುವ ಸಾಧ್ಯತೆ ಗಳೇ ಹೆಚ್ಚಾಗಿವೆ ಎಂದು ಹೇಳಲಾಗಿದೆ.

ತಾವು ವಾಸಿಸುವ ವಾರ್ಡ್ ವ್ಯಾಪ್ತಿ ಯಲ್ಲಿ ಆರ್‍ಟಿಇಗೆ ಒಳಪಡುವ ಶಾಲೆ ಗಳು ಇಲ್ಲದಿದ್ದರೆ ಅಂತಹ ಶಾಲೆಗಳಿರುವ ವಾರ್ಡ್ ವ್ಯಾಪ್ತಿ ವಿಳಾಸಕ್ಕೆ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಶಯವುಂಟಾಗಿ ಬೇರೆ ಯಾವುದಾದರೂ ದಾಖಲಾತಿ ಪರಿಶೀಲಿ ಸಬೇಕು ಎಂದರೆ ಶಿಕ್ಷಣ ಇಲಾಖೆಯ ಆದೇಶವನ್ನು ಮುಂದಿಟ್ಟುಕೊಂಡು ಬೇರೆ ದಾಖಲೆ ಪರಿಶೀಲಿಸದಂತೆ ಅನರ್ಹ ಫಲಾನುಭವಿಗಳ ಪೋಷಕರು ಶಾಲೆ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುತ್ತಿರುವ ನಿದರ್ಶನಗಳು ಕಂಡುಬರುತ್ತಿವೆ.

ಈಗಾಗಲೇ ಬಾಂಗ್ಲಾ ಸೇರಿದಂತೆ ಇತರ ದೇಶಗಳ ವಲಸಿಗರು ಭಾರತದ ಯಾವುದಾದರೂ ವಿಳಾಸದಲ್ಲಿ ಆಧಾರ್ ಕಾರ್ಡ್ ಪಡೆಯುವುದು ಅತ್ಯಂತ ಸುಲಭವಾಗಿದೆ ಹಾಗೂ ಹಲವಾರು ವಲಸಿಗರು ಇದೇ ರೀತಿ ಆಧಾರ್ ಕಾರ್ಡ್ ಪಡೆದಿದ್ದಾರೆ.

ಆರ್‍ಟಿಇ ಕಾಯ್ದೆಯ ಈ ತಿದ್ದುಪಡಿ ಯಿಂದಾಗಿ ಕೇವಲ ಆಧಾರ್ ಕಾರ್ಡ್ ಮಾನದಂಡದಡಿ ಶಾಲೆಗಳಿಗೆ ದಾಖಲಾತಿ ನೀಡುವುದಾದರೆ ಇಂತಹ ವಲಸಿಗರೂ ಕೂಡ ಫಲಾನುಭವಿಗಳಾಗಿ ಮಾರ್ಪ ಡುವ ಅಪಾಯವಿದೆ.

ಆದ್ದರಿಂದ ಶಿಕ್ಷಣ ಇಲಾಖೆಯ ಜವಾ ಬ್ದಾರಿಯನ್ನೂ ಹೊತ್ತಿರುವ ಮುಖ್ಯ ಮಂತ್ರಿಗಳು, ಆರ್‍ಟಿಇ ಫಲಾನುಭವಿಗಳ ಆಯ್ಕೆ ನಿಯಮಗಳನ್ನು ಬಿಗಿಗೊಳಿಸ ಬೇಕೆಂದು ನೈಜ ಆರ್‍ಟಿಇ ವಂಚಿತ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

Translate »