ಸರಿಯಾದ ಸಾಕ್ಷಿ-ಪುರಾವೆ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ
ಮೈಸೂರು

ಸರಿಯಾದ ಸಾಕ್ಷಿ-ಪುರಾವೆ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ

May 16, 2019

ಮೈಸೂರು: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸರಿಯಾದ ಸಾಕ್ಷಿ-ಪುರಾವೆ ಒದಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಅಪರಾಧ) ಡಾ.ಎಂ.ಎ.ಸಲೀಂ, ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಮೈಸೂರಿನ ನಜರ್‍ಬಾದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನಲ್ಲಿರುವ ಡಿಜಿಪಿ ಸೂಟ್ ಸಭಾಂಗಣದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ದಕ್ಷಿಣ ವಲಯ ಐಜಿಪಿ ಉಮೇಶ್ ಕುಮಾರ್, ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಎಸ್ಪಿಗ ಳೊಂದಿಗೆ ಅಪರಾಧ ಪ್ರಕರಣಗಳ ಕುರಿತು ಡಾ.ಸಲೀಂ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮೈಸೂರು ನಗರ ಹಾಗೂ ವಲಯದಾದ್ಯಂತ ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಯುವ ಎಲ್ಲಾ ಬಗೆಯ ಅಪರಾಧಗಳ ಬಗ್ಗೆ ತಡ ಮಾಡದೇ ಪ್ರಕರಣ(FIR) ದಾಖಲಿಸಿ, ಕೃತ್ಯ ನಡೆದ ಸ್ಥಳಕ್ಕೆ ದಾವಿಸಿ ಮಹಜರು ಮಾಡಿ, ಅಲ್ಲಿ ದೊರೆಯುವ ಸಾಂದರ್ಭಿಕ ಸಾಕ್ಷ್ಯಗಳನ್ನು ಪುರಾವೆ ಸಮೇತ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು. ಕೃತ್ಯ ನಡೆದ ತಕ್ಷಣವೇ ಆರೋಪಿ ಗಳನ್ನು ಪತ್ತೆ ಮಾಡಿ ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅವರಿಂದ ವಶಪಡಿಸಿಕೊಂಡ ಮಾಲುಗಳು, ಶಸ್ತ್ರಾಸ್ತ್ರ ಹಾಗೂ ವಾಹನಗಳ ಸ್ವಾಧೀನ ಪ್ರಕ್ರಿಯೆಯನ್ನು ಕಾನೂನಿನ ರೀತ್ಯಾ ಮಾಡಿದರೆ ಮಾತ್ರ ಪ್ರಕರಣದ ತನಿಖೆ ಸರಿಯಾಗಿ ಪೂರ್ಣ ಗೊಳ್ಳುತ್ತದೆ ಎಂದೂ ಎಡಿಜಿಪಿ ಅವರು ಅಧೀನ ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ತನಿಖಾಧಿಕಾರಿಗಳು ಪ್ರಕರಣ ಸಂಬಂಧ ಸಂಗ್ರಹಿಸಿ ರುವ ಸಾಕ್ಷಿ-ಪುರಾವೆಗಳನ್ನು ಸಮಂಜಸವಾಗಿ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಮಂಡಿಸ ದಿದ್ದರೆ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾನೆ. ಆದ್ದರಿಂದ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಿ ಸಾಕ್ಷ್ಯಾಧಾರ ಒದಗಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದು ಡಾ. ಸಲೀಂ ಅವರು ಇದೇ ಸಂಧರ್ಭ ತಿಳಿಸಿದರು.

ವಿಚಾರಣೆಗೆ ಹಾಜರಾಗುವ ಮುನ್ನ ಠಾಣೆಗಳಲ್ಲಿ ರುವ ಕೋರ್ಟ್ ಮಾನಿಟರಿಂಗ್ ಸೆಲ್‍ನಲ್ಲಿ ಚರ್ಚಿಸಿ ಕಲೆ ಹಾಕಿರುವ ಸಾಕ್ಷ್ಯಾಧಾರಗಳನ್ನು ಮಂಡಿಸುವ ಬಗ್ಗೆ ಚರ್ಚಿಸಿ ಸಮಂಜಸವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಸಲ್ಲಿಸಬೇಕು ಎಂದ ಡಾ.ಸಲೀಂ, ಪ್ರಕರಣಗಳ ತನಿಖೆಯನ್ನು ಹೆಡ್ ಕಾನ್‍ಸ್ಟೇಬಲ್ ಹಾಗೂ ಸಹಾಯಕ ಸಬ್ ಇನ್ ಸ್ಪೆಕ್ಟರ್‍ಗಳೂ ನಡೆಸಲು ಅವಕಾಶ ಮಾಡಿ ಕೊಡಿ ಎಂದು ಸೂಚಿಸಿದರು.

ಮೈಸೂರು ನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರ ಚಿನ್ನದ ಸರ ಅಪಹರಣ ಪ್ರಕರಣ ಗಳು ನಡೆಯದಂತೆ ಎಚ್ಚರ ವಹಿಸಿ, ಆರೋಪಿ ಗಳನ್ನು ಹಿಡಿಯುವಲ್ಲಿ ಗಮನಹರಿಸಬೇಕು, ಬೆಳಿಗ್ಗೆ -ಸಂಜೆ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮಾಡಿಸಿ ಸಾರ್ವಜನಿಕರೂ ಸಹ ಜಾಗೃತ ರಾಗಿರುವಂತೆ ಅರಿವು ಮೂಡಿಸಿ ಎಂದೂ ಡಾ.ಸಲೀಂ ಇದೇ ಸಂದರ್ಭ ತಿಳಿಸಿದರು. ಮನೆಗಳವು, ವಂಚನೆ, ಕೊಲೆ, ಸುಲಿಗೆ, ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಕಿರುಕುಳ ನಡೆಯದಂತೆ ಜಾಗೃತಿ ವಹಿಸಿ, ಅಂತಹ ಪ್ರಕರಣಗಳ ಪತ್ತೆಕಾರ್ಯಕ್ಕೂ ಹೆಚ್ಚು ಒತ್ತು ನೀಡಿ ಎಂದ ಅವರು, ಸೈಬರ್ ಕ್ರೈಂಗಳನ್ನು ನೂತನ ತಂತ್ರಜ್ಞಾನದ ವಿಧಾನಗಳ ಮೂಲಕ ಭೇದಿಸುವಂತೆ ಸಲಹೆ ನೀಡಿದರು.

ಮೈಸೂರು ನಗರ ಕೇಂದ್ರ ಸ್ಥಾನದ ಅಪರಾಧ ವಿಭಾಗದ ಡಿಸಿಪಿ ಎಂ.ಮುತ್ತುರಾಜ್, ಮೈಸೂರು ಜಿಲ್ಲಾ ಅಡಿಷನಲ್ ಎಸ್ಪಿ ಸ್ನೇಹಾ, ಚಾಮರಾಜ ನಗರ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಹಾಸನ ಎಸ್ಪಿ ಚೇತನ್‍ಸಿಂಗ್ ರಾಥೋಡ್, ಕೊಡಗು ಎಸ್ಪಿ ಸುಮನ್ ಡಿ. ಪಣ್ಣೇಕರ್ ಹಾಗೂ ಮಂಡ್ಯ ಎಸ್ಪಿ ಶಿವ ಪ್ರಕಾಶ್ ದೇವರಾಜ್ ಸಭೆಯಲ್ಲಿ ಹಾಜರಿದ್ದರು. ಬೆಳಿಗ್ಗೆ 10.45ರಿಂದ ಮಧ್ಯಾಹ್ನ 2 ಗಂಟೆವರೆಗೆ ಅಪರಾಧ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಡಾ.ಸಲೀಂ, ನಂತರ ನಜರ್‍ಬಾದಿನಲ್ಲಿ ರುವ ಜಿಲ್ಲಾ ಫೊರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಈSಐ) ಘಟಕ ಹಾಗೂ ಸೈಬರ್ ಕ್ರೈಂ ಠಾಣೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »