ಮೈಸೂರು, ಫೆ.2(ಎಸ್‍ಬಿಡಿ)- ಸರಳ ವಿವಾಹ ಉತ್ತೇಜಿ ಸುವ ಉದ್ದೇಶದಿಂದ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ, ನಂಜನಗೂಡು ಹಾಗೂ ಮುಡುಕುತೊರೆ ದೇವಾ ಲಯಗಳು ಸೇರಿದಂತೆ ರಾಜ್ಯದ 100 ದೇವಾಲಯಗಳಲ್ಲಿ `ಸಪ್ತಪದಿ’ ಯೋಜನೆಯಡಿ ಸಾಮೂಹಿಕ ವಿವಾಹ ನಡೆಸಲು ರಾಜ್ಯ ಸರ್ಕಾರ ತೀರ್ಮಾ ನಿಸಿದೆ ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. `ಸಾಮೂಹಿಕ ವಿವಾಹ’ ಕಾರ್ಯಕ್ರಮ ಅನುಷ್ಠಾನ ಸಂಬಂಧ ಮೈಸೂರು ಡಿಸಿ ಕಚೇರಿ ಸಭಾಂ ಗಣದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಎಷ್ಟೋ ಜನ ಸಾಲ ಮಾಡಿ ವಿವಾಹ ಸಮಾರಂಭಕ್ಕಾಗಿ ದುಂದುವೆಚ್ಚ ಮಾಡುತ್ತಾರೆ. ನಂತರ ಬಡವರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂ ತವೂ ನಡೆದಿದೆ. ಹಾಗಾಗಿ ಸರಳ ವಿವಾಹವನ್ನು ಉತ್ತೇ ಜಿಸಲು ಸರ್ಕಾರ ಮುಂದಾಗಿದ್ದು, ಏ.26 ಹಾಗೂ ಮೇ 24ರಂದು ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಿದೆ. ಬಡವರಿಗಾಗಿ ನಡೆಯುವ ಈ ಕಾರ್ಯಕ್ರಮ ಪಾರದರ್ಶಕ ವಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ವಿವಿಧ ಮಠಾಧಿಪತಿಗಳು, ಸಾಧು-ಸಂತರು ಸಹಕಾರ ನೀಡಿದ್ದಾರೆ ಎಂದು ವಿವರಿಸಿದರು.
ಏ.26ರಲ್ಲಿ ಪ್ರಥಮ ಹಂತದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಲು ಇಚ್ಛಿಸುವವರು ಮಾ.27ರವರೆಗೆ ಆಯ್ದ ದೇಗುಲಗಳಲ್ಲಿ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಆಡಳಿತಾತ್ಮಕ ತೊಂದರೆಯಿದ್ದರೆ ಅಂಥ ಜೋಡಿಗೆ ಮೇ 24ರಂದು ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಬಡವರಿಗಾಗಿ ಏರ್ಪಡಿಸಿರುವ ಸಾಮೂಹಿಕ ಹಾಗೂ ಸರಳ ವಿವಾಹದಲ್ಲಿ ದಂಪತಿ ಯಾಗಲು ಸಾಕಷ್ಟು ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದು, ಸಾಮೂಹಿಕ ವಿವಾಹ ವಿಚಾರವನ್ನು ಹೆಚ್ಚು ಪ್ರಚುರಪಡಿಸುವಂತೆ ಸೂಚಿಸ ಲಾಗಿದೆ. ಜಿಲ್ಲಾಡಳಿತವೂ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ಲೆಕ್ಸ್, ಬ್ಯಾನರ್, ಕರಪತ್ರ ಮೂಲಕ ಎಲ್ಲರಿಗೂ ವಿಷಯ ತಲುಪಿಸಬೇಕು. ನಂಜನಗೂಡು ದೇಗುಲಕ್ಕೆ ಸಂಬಂಧಪಟ್ಟಂತೆ ಚುರುಕಾಗಿ ಕೆಲಸ ಕಾರ್ಯಗಳಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸುವುದರ ಜೊತೆಗೆ ಎಡಿಸಿ, ಎಸಿಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಸಿಬ್ಬಂದಿಯಿಂದ ಬಯೋಮೆಟ್ರಿಕ್ ಹಾಜರಾತಿ ಪಡೆಯುವುದು ಸೇರಿದಂತೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ವಿವಾಹ ಕಾರ್ಯಕ್ರಮಕ್ಕಾಗಿ ಜಮೀನು ಮಾರಾಟ ಮಾಡಿ ಅಥವಾ ಸಾಲ ಮಾಡಿ, ನಂತರ ತೀರಿಸಲಾಗದೆ ಆತ್ಮಹತ್ಯೆ ಮಾಡಿ ಕೊಂಡಿರುವ ನಿದರ್ಶನಗಳಿವೆ. ಹಾಗಾಗಿ ಸರಳ ವಿವಾಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಉತ್ತಮ ಕಾರ್ಯಕ್ರಮ. ಈ ಬಗ್ಗೆ ಮನಮುಟ್ಟುವ ಕರಪತ್ರ ಸಿದ್ಧಪಡಿಸಿ, ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು. ನಂಜನಗೂಡು ಶಾಸಕ ಹರ್ಷವರ್ಧನ್ ಮಾತನಾಡಿ, ನಂಜುಂಡೇಶ್ವರ ದೇವಾಲಯದ ಬಳಿ ಇರುವ ಅನಧಿಕೃತ ಅಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಬೇಕು. ದೇವರ ಅಭಿಷೇಕಕ್ಕೆ ನೀರು ತರಲು ಬಾವಿ ತೆಗೆಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಉಪ ವಿಭಾಗಾಧಿಕಾರಿ ಎನ್.ವೆಂಕಟರಾಜು, ಮುಜರಾಯಿ ತಹಸಿಲ್ದಾರ್ ಯತಿರಾಜï ಸೇರಿದಂತೆ ಹಲವು ತಹಸಿಲ್ದಾರ್‍ಗಳು, ಮುಜರಾಯಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
`ದೇಗುಲಗಳ ಹುಂಡಿ ಹಣ ದೇಗುಲ ಅಭಿವೃದ್ಧಿಗೇ ಬಳಕೆ’: ಹಿಂದೂ ದೇವಾಲಯಗಳಲ್ಲಿ ಸಂಗ್ರಹವಾಗುವ ಹುಂಡಿ ಹಣವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಮಾತ್ರವೇ ಬಳಸಲಾಗುವುದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹೇಗಿತ್ತೋ ಗೊತ್ತಿಲ್ಲ. ಆದರೆ, ನಮ್ಮ ಸರ್ಕಾರದಲ್ಲಿ ಹಿಂದೂ ದೇವಾಲಯಗಳ ಆದಾಯವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಖರ್ಚು ಮಾಡುತ್ತೇವೆ. ಬೇರೆ ಧರ್ಮದ ಅಥವಾ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಹಿಂದೂ ದೇವಾಲಯಗಳ ಹಣವನ್ನು ಬಳಕೆ ಮಾಡೋದಿಲ್ಲ ಎಂದು ತಿಳಿಸಿದ್ದಾರೆ. ಮುಜರಾಯಿ ಧಾರ್ಮಿಕ ದತ್ತಿ ಸಚಿವನಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಬೇರೆ ಧರ್ಮದ ಯಾವುದೇ ಯೋಜನೆಗೆ ಹಿಂದೂ ದೇವಾಲಯದ ಒಂದೂ ಪೈಸೆಯನ್ನೂ ಬಳಸುವುದಿಲ್ಲ ಎಂದರು.