ವೀರಪ್ಪನ್ ಸಹಚರನ ಪತ್ನಿ ಬಂಧನ
ಮೈಸೂರು

ವೀರಪ್ಪನ್ ಸಹಚರನ ಪತ್ನಿ ಬಂಧನ

February 3, 2020

ಕೊಳ್ಳೇಗಾಲ, ಫೆ.2(ಎಸಿಪಿ) ಕಳೆದ 27 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆ ಮರೆಸಿ ಕೊಂಡಿದ್ದ ನರ ಹಂತಕ ವೀರಪ್ಪನ್ ಸಹಚರನ ಪತ್ನಿ ಯನ್ನು ಶನಿವಾರ ಕೊಳ್ಳೇಗಾಲ ಪೊಲೀ ಸರು ಬಂಧಿಸಿದ್ದಾರೆ.

1992ರಲ್ಲಿ ನಡೆದ ರಾಮಾಪುರ ಪೊಲೀಸ್ ಠಾಣೆ ಮೇಲಿನ ದಾಳಿ ಮತ್ತು 1993ರಲ್ಲಿ ನಡೆದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿ ರುವ ಸ್ಟೆಲ್ಲಾ ಮೇರಿ ವಿರುದ್ಧ ಟಾಡಾ ಪ್ರಕರಣದಡಿ ಕೇಸ್ ದಾಖಲಾಗಿದೆ. ವೀರಪ್ಪನ ಸಹಚರ ಸುಂಡವಲಯನ್ ಎಂಬಾತನ ಪತ್ನಿಯಾದ ಈಕೆ ಪೊಲೀ ಸರಿಗೆ ಸಿಗದೆ ತಲೆ ಮರೆಸಿಕೊಂಡಿ ದ್ದಳು. ಈಕೆಯ ಬಂಧನದಿಂದಾಗಿ 27 ವರ್ಷಗಳ ಹಿಂದಿನ ಟಾಡಾ ಪ್ರಕರಣಕ್ಕೆ ಮರು ಜೀವ ದೊರೆತಂತಾಗಿದೆ.

ಸ್ಟೆಲ್ಲಾ ಮೇರಿ ಯಾರು?: ಮಾರ್ಟಳ್ಳಿ ಗ್ರಾಮ ದವಳಾದ ಸ್ಟೆಲ್ಲಾ ಮೇರಿ 13ನೇ ವಯಸ್ಸಿ ನಲ್ಲಿ ವೀರಪ್ಪನ್‍ನಿಂದ ಅಪಹರಿಸಲ್ಪಟ್ಟ ವಳು. ಮಾರ್ಟಳ್ಳಿ ಸಮೀಪದ ಅರಣ್ಯ ದಲ್ಲಿ ವೀರಪ್ಪನ್ ಹುದುಗಿಸಿಟ್ಟಿದ್ದ ಹಣ ವನ್ನು ಸ್ಟೆಲ್ಲಾಮೇರಿ ತಂದೆ ಮತ್ತು ಆಕೆಯ ಭಾವ ಶೇಷರಾಜ್ ಅವರುಗಳಿಗೆ ದೊರಕಿತ್ತು. ಗ್ರಾಮದಲ್ಲಿ ಐಷಾರಾಮಿ ಜೀವನ ನಡೆಸಲು ಇವರು ಆರಂಭಿಸಿದಾಗ ತನ್ನ ಹಣವನ್ನು ಇವರೇ ಲಪಟಾಯಿಸಿದ್ದಾರೆ ಎಂದು ಸಂಶಯಪಟ್ಟ ವೀರಪ್ಪನ್ ತಂಡ, ಶೇಷರಾಜ್‍ನನ್ನು ಅಪಹರಿಸಿತ್ತು. ಈ ವೇಳೆ ಹಣವನ್ನು ತಾವೇ ತೆಗೆದುಕೊಂಡಿದ್ದಾಗಿ ಶೇಷರಾಜ್ ವೀರಪ್ಪನ್ ಬಳಿ ಒಪ್ಪಿಕೊಂಡಿದ್ದ. ಆಗ ವೀರಪ್ಪನ್ ಹಣಕ್ಕಾಗಿ 13 ವರ್ಷದ ಬಾಲಕಿ ಸ್ಟೆಲ್ಲಾ ಮೇರಿಯನ್ನು ಅಪಹರಿಸಿ ತನ್ನ ತಂಡದಲ್ಲೇ ಇರಿಸಿಕೊಂಡಿದ್ದ. ಕೊನೆಗೂ ವೀರಪ್ಪನ್‍ಗೆ ಹಣ ಸೇರದೇ ಇದ್ದಾಗ ತನ್ನ ಸಹಚರ ಸುಂಡವಲಯನ್‍ಗೆ ಸ್ಟೆಲ್ಲಾ ಮೇರಿಯನ್ನು ವೀರಪ್ಪನ್ ಮದುವೆ ಮಾಡಿದ್ದ. ಸುಮಾರು ಒಂದೂವರೆ ವರ್ಷ ಕಾಲ ವೀರಪ್ಪನ್ ತಂಡದಲ್ಲಿದ್ದ ಸ್ಟೆಲ್ಲಾ ಮೇರಿ ಮೇಲೆ ಪಾಲಾರ್ ಬಾಂಬ್ ಸ್ಫೋಟ ಹಾಗೂ ರಾಮಾಪುರ ಠಾಣೆ ಮೇಲಿನ ದಾಳಿ ಪ್ರಕರಣಗಳಲ್ಲಿ ಟಾಡಾ ಕೇಸ್ ದಾಖಲಾಗಿತ್ತು. ಆದರೆ ಆಕೆ ಪೊಲೀಸರಿಗೆ ಸಿಕ್ಕದೆ ತಲೆ ಮರೆಸಿಕೊಂಡಿದ್ದಳು.

ಸಿಕ್ಕಿಬಿದ್ದಿದ್ದು ಹೇಗೆ?: ವೀರಪ್ಪನ್ ಸಹಚರ ಸುಂಡವಲಯನ್ ಮೃತಪಟ್ಟ ನಂತರ ಸ್ಟೆಲ್ಲಾ ಮೇರಿ ಕೊಳ್ಳೇಗಾಲ ಸಮೀಪವಿರುವ ಜಾಗೇರಿಯ ಚಿನ್ನಿಪುರದೊಡ್ಡಿಯ ವೇಲು ಸ್ವಾಮಿ ಎಂಬಾತನನ್ನು ವಿವಾಹವಾಗಿದ್ದಳು. ವಿಚಿತ್ರವೆಂದರೆ ಕೊಳ್ಳೇಗಾಲದಿಂದ ಕೇವಲ 14 ಕಿ.ಮೀ. ಅಂತರದಲ್ಲಿರುವ ಜಾಗೇರಿಯದಲ್ಲಿ ರಾಜಾರೋಷವಾಗಿ ಸ್ಟೆಲ್ಲಾ ಮೇರಿ ಬದುಕು ಸಾಗಿಸುತ್ತಿದ್ದರೂ, ಆಕೆಯನ್ನು ಪೊಲೀಸರು ಗುರುತಿಸುವಲ್ಲಿ ವಿಫಲರಾಗಿದ್ದರು. ವೇಲುಸ್ವಾಮಿಯನ್ನು ವಿವಾಹ ಮಾಡಿಕೊಂಡು ಸುಖೀ ಜೀವನ ಸಾಗಿಸುತ್ತಿದ್ದ ಈಕೆ, 6 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಕಬ್ಬು ಬೆಳೆದಿದ್ದಳು. ಕಳೆದ ನಾಲ್ಕು ದಿನದ ಹಿಂದೆ ಕಾಡಾನೆ ಹಿಂಡು ಈಕೆಯ ಜಮೀನಿಗೆ ಲಗ್ಗೆ ಇಟ್ಟಾಗ ಅದನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಫೈರ್ ಮಾಡಿದ್ದಾರೆ. ಅಗ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿ ಕೊಂಡಿತು. ಈ ವೇಳೆ ಪೊಲೀಸರು ಜಾಗೇರಿ ಗ್ರಾಮಕ್ಕೆ ತೆರಳಿ, ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಈಕೆ ವೀರಪ್ಪನ್ ಸಹಚರ ಸುಂಡವಲಯನ್‍ನ ಪತ್ನಿ ಹಾಗೂ ಈಕೆ ಟಾಡಾ ಕೇಸ್‍ನ ಆರೋಪಿ ಎಂಬುದು ಬೆಳಕಿಗೆ ಬಂದಿದೆ. ಕೊಳ್ಳೇಗಾಲ ಡಿವೈಎಸ್‍ಪಿ ನವೀನ್‍ಕುಮಾರ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳ ಸಿಬ್ಬಂದಿಯಾದ ಗೋವಿಂದರಾಜು, ವೆಂಕಟೇಶ್, ದೊರೆಸ್ವಾಮಿ, ವಸಂತ ಅವರು ಈಕೆಯನ್ನು ಬಂಧಿಸಿ ಚಾಮರಾಜನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Translate »