ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ಭಾರೀ ಅವ್ಯವಹಾರ ಅನಾವರಣ
ಮೈಸೂರು

ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ಭಾರೀ ಅವ್ಯವಹಾರ ಅನಾವರಣ

September 30, 2018

ಮೈಸೂರು: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಆಶ್ರಯ ಪಡೆದಿರುವ ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ದುಸ್ಥಿತಿ ಕಂಡು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸಿಇಓ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಚ್ಚಿಬಿದ್ದರು.

ಮೈಸೂರಿನ ಜಿಪಂ ಕಚೇರಿ ಸಭಾಂಗಣ ದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ. ನಂದೀಶ್ ಅವರು ಜಿಲ್ಲೆಯ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳ ದುಸ್ಥಿತಿ ಬಗ್ಗೆ ಸಾಕ್ಷ್ಯ ಸಮೇತ ಪ್ರದರ್ಶಿಸಿದ್ದು, ಇಡೀ ಸಭೆ ಕೆಲ ಕ್ಷಣ ಸ್ತಬ್ಧವಾಯಿತು.

ಸಮಾಜ ಕಲ್ಯಾಣ ಇಲಾಖೆ, ಹಿಂದು ಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಗೂ ಬುಡಕಟ್ಟು ಇಲಾಖೆಗಳು ನಡೆಸುತ್ತಿರುವ ಹಾಸ್ಟೆಲ್‍ಗಳಲ್ಲಿ ನಡೆಯುತ್ತಿ ರುವ ಭಾರೀ ಅವ್ಯವಹಾರಗಳನ್ನು ಪುರಾವೆ ಸಮೇತ ಪ್ರದರ್ಶಿಸಿದ ಸಾ.ರಾ.ನಂದೀಶ್, ತಾವು ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಂಡು ಬಂದ ದೃಶ್ಯಾವಳಿ ಗಳನ್ನು ಸಭೆಯಲ್ಲೇ ಎಲ್‍ಇಡಿ ಪರದೆ ಮೂಲಕ ಅನಾವರಣಗೊಳಿಸಿದರು.

ಒಬ್ಬ ಜನಪ್ರತಿನಿಧಿ, ಹಾಸ್ಟೆಲ್‍ಗಳಿಗೆ ಪ್ರತ್ಯಕ್ಷ ವಾಗಿ ಭೇಟಿ ನೀಡಿ ಸಂಗ್ರಹಿಸಿದ ಕಳಪೆ ವಸ್ತುಗಳು, ಅವ್ಯವಸ್ಥೆಯ ಸಾಕ್ಷ್ಯಗಳನ್ನು ಕಲೆ ಹಾಕಿದ್ದಲ್ಲದೆ, ವೀಡಿಯೋಗ್ರಾಫ್ ಮಾಡಿ ತುಂಬಿದ ಸಭೆಗೆ ತೋರಿಸಿ ಸಾಬೀತು ಮಾಡಿದ ಪ್ರಸಂಗ ಮೈಸೂರು ಭಾಗದಲ್ಲಿ ಇದೇ ಮೊದಲು ಎನಿಸಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದು ಳಿದ ಮತ್ತು ಅಲ್ಪಸಂಖ್ಯಾತರ ಮಕ್ಕಳಿಗಾಗಿ ಸರ್ಕಾರ ವ್ಯಯಿಸುತ್ತಿರುವ ಸಾರ್ವಜನಿಕರ ತೆರಿಗೆ ಹಣ ಯಾವ ರೀತಿ ಪೋಲಾಗುತ್ತಿದೆ ಎಂಬುದನ್ನು ನಂದೀಶ್ ಸಾಕ್ಷ್ಯ ಸಮೇತ ಸಾಬೀತು ಪಡಿಸುವ ಮೂಲಕ ಅಧಿಕಾರಿಗಳ ಕಣ್ತೆರೆ ಸುವಲ್ಲಿ ಯಶಸ್ವಿಯಾದರಲ್ಲದೆ, ಜನಪ್ರತಿ ನಿಧಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಆಗಸ್ಟ್ 22ರಂದು ಕೆ.ಆರ್.ನಗರದ ಕಂಟೇನಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯ ಹಾಗೂ ಆಗಸ್ಟ್ 30ರಂದು ತಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿರುವ ಬಿಸಿಎಂ ಹಾಸ್ಟೆಲ್‍ಗೆ ಖುದ್ದು ಭೇಟಿ ನೀಡಿದಾಗ ಕಂಡು ಬಂದ ಸ್ಥಿತಿಯನ್ನು ಅಲ್ಲಿ ಸಂಗ್ರಹಿಸಿದ ಕಲುಷಿತ ನೀರು, ಕಳಪೆ ಆಹಾರ ಪದಾರ್ಥಗಳು, ಸ್ಥಗಿತಗೊಂಡಿರುವ ಸಿಸಿ ಕ್ಯಾಮರಾಗಳನ್ನು ಅವರು ಸಭೆಗೆ ಸಾದರಪಡಿಸಿದರು.

ಕೆಟ್ಟು ನಿಂತಿರುವ ಕ್ಯಾಮರಾಗಳು: ವಿದ್ಯಾರ್ಥಿ ಗಳ ಹಾಜರಾತಿ, ಸಿಬ್ಬಂದಿಗಳ ಕೆಲಸ, ಅಡುಗೆ ಮನೆ, ಊಟದ ಹಾಲ್‍ನ ಚಟುವಟಿಕೆಗಳ ಮೇಲೆ ನಿಗಾ ಇರಿಸಲೆಂದು ಪ್ರತಿ ಹಾಸ್ಟೆಲ್‍ಗೆ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕೆಟ್ಟು ನಿಂತಿವೆ. ಅವ್ಯವಹಾರಕ್ಕೆಂದೇ ಕ್ಯಾಮರಾಗಳನ್ನು ಬಾಗಿಲಿನ ಹಿಂಭಾಗ ಅಳವಡಿಸಲಾಗಿದೆ. ಉದ್ದೇಶಪೂರ್ವಕವಾಗಿಯೇ ಕೆಟ್ಟಿರುವ ಕ್ಯಾಮರಾಗಳನ್ನು ರಿಪೇರಿ ಮಾಡಿಸಿಲ್ಲ ಎಂದು ನಂದೀಶ್ ದೂರಿದರು.

ಫಿಲ್ಟರ್‍ನಲ್ಲಿ ಕಲುಷಿತ ನೀರು: ಹಾಸ್ಟೆಲ್ ಗಳಲ್ಲಿ ಅಳವಡಿಸಿರುವ ವಾಟರ್ ಫಿಲ್ಟರ್ ನಿರ್ವಹಣೆ ಮಾಡದ ಕಾರಣ ಮಣ್ಣು ಮಿಶ್ರಿತ ನೀರು ಬರುತ್ತಿದ್ದು, ಅದನ್ನೇ ಹಾಸ್ಟೆಲ್ ವಿದ್ಯಾರ್ಥಿಗಳು ಕುಡಿಯುತ್ತಿದ್ದಾರೆ. ಹೀಗೆ ಹೇಳಿ, ಸ್ಥಳದಿಂದ ಸಂಗ್ರಹಿಸಿ ಬಾಟಲಿನಲ್ಲಿ ತಂದಿದ್ದ ನೀರನ್ನು ಸಭೆಗೆ ತೋರಿಸಿದರು. ಅದೇ ರೀತಿ ಹಾಸ್ಟೆಲ್‍ಗಳ ಓವರ್‍ಹೆಡ್ ಟ್ಯಾಂಕ್‍ಗಳಲ್ಲಿ ಸಂಗ್ರಹವಾಗಿದ್ದ ಕೆಸರು, ಕಸಕಡ್ಡಿಯನ್ನೂ ಸಹ ನಂದೀಶ್ ಪ್ಲಾಸ್ಟಿಕ್ ಪ್ಯಾಕೆಟ್‍ನಲ್ಲಿ ಹಾಕಿಕೊಂಡು ತಂದು ಪ್ರದರ್ಶಿಸಿದರಲ್ಲದೆ, ತಾವು ಭೇಟಿ ನೀಡಿದ್ದಾಗ ಕಂಡ ದೃಶ್ಯಾ ವಳಿಯನ್ನು ಪರದೆಯಲ್ಲಿ ಬಿತ್ತರಿಸಿದರು.

ಕಳಪೆ ಆಹಾರ ಪದಾರ್ಥಗಳು: 10ರೂ. ಬೆಲೆಯ 250ಗ್ರಾಂ ಕಳಪೆ ಟೀ ಪೌಡರ್, ಕಲ್ಲು ಮಣ್ಣು ಮಿಶ್ರಿತ, ಹುಳು-ಉಪ್ಪಟ್ಟೆ ಇರುವ ಕಡಲೆಕಾಳು, ಬೇಳೆ, ದ್ರಾಕ್ಷಿ-ಗೋಡಂಬಿ, ಕೊಳೆತ ತರಕಾರಿಗಳನ್ನು ಹಾಸ್ಟೆಲ್ ಅಡುಗೆ ಮನೆ ಸ್ಟೋರ್‌ನಿಂದ ಪೊಟ್ಟಣ ಕಟ್ಟಿಕೊಂಡು ತಂದು ತೋರಿಸಿದರು.

ನಿಯಮಾನುಸಾರ ಟೆಂಡರ್‌ದಾರ ಮೆನು ಪ್ರಕಾರ ಆಹಾರ ಪದಾರ್ಥಗಳು ಹಾಗೂ ತರಕಾರಿಯನ್ನು ಪೂರೈಸಬೇಕು. ಆದರೆ ಆಯಾಯ ಹಾಸ್ಟೆಲ್ ವಾರ್ಡನ್‍ಗಳೇ ಆ ದಿನಕ್ಕೆ ಬೇಕಾದಷ್ಟು ಪದಾರ್ಥ ವನ್ನು ಕಡಿಮೆ ಬೆಲೆಗೆ ತರುತ್ತಿದ್ದಾರೆ ಎಂಬುದೂ ತಾವು ಭೇಟಿ ನೀಡಿದಾಗ ಕಂಡು ಬಂದಿತು ಎಂದು ನಂದೀಶ್ ಆರೋಪಿಸಿದರು.

ಶುಭ ಸಂಭ್ರಮ ಕಿಟ್: ಪ್ರತೀ ತಿಂಗಳಿಗೊಮ್ಮೆ ವಿದ್ಯಾರ್ಥಿಗಳಿಗೆ ಕೊಡಬೇಕಾದ 2 ಬಟ್ಟೆ ಸೋಪು, 1 ಮೈಸೂರು ಸ್ಯಾಂಡಲ್ ಮೈಸೋಪು, ಟೂತ್‍ಪೇಸ್ಟ್ ಒಳಗೊಂಡ ‘ಶುಭ ಸಂಭ್ರಮ’ ಕಿಟ್ ಅನ್ನು 3 ತಿಂಗಳಿಗೊಮ್ಮೆಯೂ ಕೊಡು ತ್ತಿಲ್ಲ. ಅದನ್ನು ವಾರ್ಡನ್‍ಗಳೇ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಅವರು ಸಭೆ ಮುಂದೆ ಪ್ರಸ್ತುತಪಡಿಸಿದರು.

ವಾರ್ಡನ್‍ಗಳೇ ಸೇರಿಸಿಕೊಳ್ತಾರೆ: ನಿಯ ಮಾನುಸಾರ ಸೀಟು ಸಿಗದ ವಿದ್ಯಾರ್ಥಿಗಳನ್ನು ವಾರ್ಡನ್‍ಗಳೇ 2000-3000 ರೂ. ಹಣ ಪಡೆದು ಹಾಸ್ಟೆಲ್‍ಗಳಿಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಸಾ.ರಾ.ನಂದೀಶ್ ಗಂಭೀರ ಆರೋಪ ಮಾಡಿದರು.

ಎರಡು-ಮೂರು ದಿನಕ್ಕಾಗುವಷ್ಟು ಆಹಾರ ಪದಾರ್ಥಗಳನ್ನು ಅಡುಗೆಯವರಿಗೆ ಕೊಟ್ಟು ಸ್ಟೋರ್ ರೂಂಗೆ ಬೀಗ ಹಾಕಿಕೊಂಡು ಹೋಗುತ್ತಿರುವ ವಾರ್ಡನ್‍ಗಳು, ಶನಿವಾರ ರಾತ್ರಿ, ಭಾನುವಾರ ಹಾಗೂ ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಹೋಗುವುದರಿಂದ ಊಟ-ತಿಂಡಿ ಮಾಡದಿರುವುದರಿಂದ ಉಳಿತಾಯವಾಗುವ ಹಣವನ್ನೂ ಕಬಳಿಸುತ್ತಿದ್ದಾರೆ ಎಂದು ಸಾ.ರಾ. ನಂದೀಶ್ ಆಪಾದಿಸಿದರು.

ಜಿಪಂ ಸಿಇಓ ಜ್ಯೋತಿ, ಯೋಜ ನಾಧಿಕಾರಿ ಪ್ರಭುಸ್ವಾಮಿ, ಎಲ್ಲಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿದ್ದರು.

Translate »