ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ
ಮೈಸೂರು

ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ

May 3, 2019

ಬೆಂಗಳೂರು: ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅನಾರೋಗ್ಯದಿಂದ ಇಂದಿಲ್ಲಿ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಹಿರಣ್ಣಯ್ಯ ಅವರು ಪತ್ನಿ ಹಾಗೂ ಐವರು ಮಕ್ಕಳು, ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಶ್ರೀನಾಥ್, ದೇವರಾಜ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರೋದ್ಯಮದ ಅನೇಕ ಗಣ್ಯರು ಮಾಸ್ಟರ್ ಹಿರಣ್ಣಯ್ಯ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಕಲ ವಿಧಿ-ವಿಧಾನಗಳೊಂದಿಗೆ ಹಿರಣ್ಣಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಂಜೆ ನೆರವೇರಿತು. ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಏಕೈಕ ಪುತ್ರರಾಗಿ ಮೈಸೂರಿನಲ್ಲಿ 1934ರ ಫೆಬ್ರವರಿ 15ರಂದು ಜನಿಸಿದ ಮಾಸ್ಟರ್ ಹಿರಣ್ಣಯ್ಯ ಅವರ ಮೂಲ ನಾಮಧೇಯ ನರಸಿಂಹಮೂರ್ತಿ. ಇಂಟರ್ ಮೀಡಿಯಟ್‍ವರೆಗೆ ವಿದ್ಯಾಭ್ಯಾಸ ನಂತರ 1952ರಲ್ಲಿ ತಂದೆ ಯೊಂದಿಗೆ ಸೇರಿಕೊಂಡು ರಂಗಶಿಕ್ಷಣ ಪಡೆದರು.

ಅವರ ತಂದೆ ಬದುಕನ್ನರಸಿ ಕುಟುಂಬವನ್ನೂ ಮದರಾಸಿಗೆ ಕರೆದೊಯ್ದ ಕಾರಣ ತಮಿಳು, ತೆಲುಗು, ಇಂಗ್ಲಿಷ್ ಭಾಷೆಗಳೂ ಹಿರಣ್ಣಯ್ಯ ಅವರಿಗೆ ಕರಗತವಾದವು. ಮನೆಯಲ್ಲಿ ಕನ್ನಡದ ಬಾಯಿಪಾಠ, ಸಂಸ್ಕøತ ಸ್ತೋತ್ರ ಪಾಠ ನಡೆಯುತ್ತಿತ್ತು.

ನಂತರ ಮೈಸೂರಿಗೆ ಬಂದ ಅವರು ಅಲ್ಲಿನ ಡಿ.ಬನುಮಯ್ಯ ಮಾಧ್ಯಮಿಕ ಶಾಲೆಗೆ ಸೇರ್ಪಡೆಗೊಂಡರು. ಮೈಸೂರಿನಲ್ಲಿ ಮುದ್ರಣಗೊಳ್ಳುತ್ತಿದ್ದ ಸಾಧ್ವಿ ಪತ್ರಿಕೆ, ಮೈಸೂರು ಪತ್ರಿಕೆಗಳನ್ನು ಮನೆ ಮನೆಗೆ ಹಂಚಿ ಅದರ ಆದಾಯವನ್ನು ಪರೀಕ್ಷಾ ಶುಲ್ಕಕ್ಕೆ ಭರಿಸುತ್ತಿದ್ದರು. ತಂದೆ ನಿರ್ಮಿಸಿದ `ವಾಣಿ’ ಚಿತ್ರದಲ್ಲಿ ಪಾತ್ರ ವಹಿಸಿದಾಗ, ಮಾಸ್ಟರ್ ನರಸಿಂಹಮೂರ್ತಿ ಎಂಬ ಹೆಸರು ಬಂದಿತು, ನಂತರ ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರಿನಿಂದ ಖ್ಯಾತರಾದರು. ಮಾಸ್ಟರ್ ಹಿರಣ್ಣಯ್ಯ ಅಭಿನಯದ ನಾಟಕ ಗಳೆಂದರೆ ಜನ ದೂರದ ಊರುಗಳಿಂದ ಆಗಮಿಸಿ ವೀಕ್ಷಿಸಿ, ಆನಂದಿಸುತ್ತಿದ್ದರು.

ಮಾಸ್ಟರ್ ಹಿರಣ್ಣಯ್ಯ ತಮ್ಮ ಮಾತಿನ ಶೈಲಿಯಿಂದಲೇ ಜನಮನ ಗೆದ್ದಿದ್ದರು. ನಾಟಕದ ವೇದಿಕೆ ಮೇಲೆಯೇ ತಮ್ಮ ಮೊನಚು ಮಾತುಗಳಿಂದ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರಲ್ಲದೆ, ಭ್ರಷ್ಟಾಚಾರವನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದರು. ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಮುಂತಾದ ನಾಟಕಗಳು ಜನಮಾನಸದಲ್ಲಿ ಭಾರೀ ಪ್ರಶಂಸೆ ಪಡೆದಿದ್ದವು. ಲಂಚಾವತಾರ ನಾಟಕದಿಂದ ಹಿರಣ್ಣಯ್ಯ ರಾಜ್ಯದಲ್ಲಷ್ಟೆ ಅಲ್ಲದೆ ದೇಶದಲ್ಲೇ ಮನೆ ಮಾತಾದರು, ಲಂಚಾವತಾರ ನಾಟಕ 10 ಸಾವಿರ ಪ್ರದರ್ಶನ ಕಂಡು ವಿಶ್ವದಾಖಲೆಯನ್ನೇ ನಿರ್ಮಿಸಿದೆ. ತಂದೆ ನಿಧನದ ನಂತರ ಅನಕೃ ಮತ್ತು ಮಿತ್ರರ ಸಹಕಾರದಿಂದ ನಾಟಕ ಕಂಪೆನಿ ಸ್ಥಾಪಿಸಿದ ಹಿರಣ್ಣಯ್ಯ, ಅಲ್ಲೂ ನಷ್ಟ ಅನುಭವಿಸಿ, ಹಿರಣ್ಣಯ್ಯ ಮಿತ್ರ ಮಂಡಳಿ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಅವರ ನಾಟಕಗಳು ಒಂದಾದ ಮೇಲೆ ಒಂದು ಹಿಟ್ ಆದವು.

ಮೈಸೂರು ಮಹಾರಾಜರು 1962ರಲ್ಲಿ ಹಿರಣ್ಣಯ್ಯ ಅವರನ್ನು ಸನ್ಮಾನಿಸಿದ್ದರು. ನಟ ರತ್ನಾಕರ, ಕಲಾ ಗಜಸಿಂಹ ಬಿರುದನ್ನು ಪಡೆದುಕೊಂಡಿದ್ದ ಅವರು, ಜಯಚಾಮರಾಜೇಂದ್ರ ಒಡೆಯರ್ ಸಮ್ಮುಖದಲ್ಲಿ ಜಗನ್ಮೋಹನ ಪ್ಯಾಲೇಸ್‍ನಲ್ಲಿ ನಾಟಕ ಪ್ರದರ್ಶಿಸಿ ಭೇಷ್ ಎನಿಸಿಕೊಂಡಿದ್ದರು.

ಹಿರಣ್ಣಯ್ಯ ಅವರನ್ನು ಅರಸಿ, ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ನವರತ್ನ ರಾಮ್ ಪ್ರಶಸ್ತಿಗಳು ಅಲ್ಲದೆ, ನ್ಯೂಜೆರ್ಸಿ, ವಾಷಿಂಗ್ಟನ್ ಡಿಸಿ, ಬಾಸ್ಟನ್, ಹೂಸ್ಟನ್, ನ್ಯೂಯಾರ್ಕ್ ಮತ್ತಿತರೆಡೆಯಿಂದ ಸನ್ಮಾನಗಳ ಪೂರವೇ ಹರಿಯಿತು. ಚಲನಚಿತ್ರ ರಂಗದಲ್ಲೂ ಛಾಪು ಮೂಡಿಸಿರುವ ಅವರು, ಆನಂದ ಸಾಗರ, ಗಜ, ರೇ, ಶಾಂತಿ ನಿವಾಸ ಚಿತ್ರಗಳಲ್ಲಿ ಅಭಿನಯಿಸಿದ್ದರು.

Translate »