ಮೈಸೂರು ಪಾಲಿಕೆ ಚುನಾವಣೆ: ಮತದಾರನ ಮನವೊಲಿಕೆಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಜಿಟಿಡಿ ಸಲಹೆ
ಮೈಸೂರು

ಮೈಸೂರು ಪಾಲಿಕೆ ಚುನಾವಣೆ: ಮತದಾರನ ಮನವೊಲಿಕೆಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಜಿಟಿಡಿ ಸಲಹೆ

August 27, 2018

ಮೈಸೂರು:  ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಮೈಸೂರಿನ ಮೂರೂ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ಚುನಾವಣಾ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಸಿ, ಅಗತ್ಯ ಸಲಹೆ ನೀಡಿದರು.

ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಮೈಸೂರು ವಿವಿ ವಿಶ್ರಾಂತ ಕುಲಪತಿ, ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್. ರಂಗಪ್ಪ ನಿವಾಸದಲ್ಲಿ ಚಾಮರಾಜ ಕ್ಷೇತ್ರ ಹಾಗೂ ಖಾಸಗಿ ಹೋಟೆಲ್‍ಗಳಲ್ಲಿ ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಸಿದ ಜಿಟಿಡಿ, ಪಕ್ಷದ ಎಲ್ಲಾ ಅಭ್ಯರ್ಥಿಗಳು ಪ್ರತಿ ಮನೆಗೆ ತೆರಳಿ ಮತಯಾಚಿಸಬೇಕು. ಸುಮ್ಮನೆ ರಸ್ತೆಯಲ್ಲಿ ಪ್ರಚಾರ ನಡೆಸಿದರೆ ಪ್ರಯೋಜನವಿಲ್ಲ ಎಂದು ಕಿವಿಮಾತು ಹೇಳಿದರು.

ಮೈಸೂರು ನಗರದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ವಿಶೇಷ ಕಾಳಜಿಯಿದೆ. ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವತಂತ್ರವಾಗಿ ಪಾಲಿಕೆ ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಒಮ್ಮತದಿಂದ ಪಕ್ಷಕ್ಕಾಗಿ ದುಡಿಯ ಬೇಕು. ಅಬ್ಬರದ ಪ್ರಚಾರಕ್ಕಿಂತ ಮನೆ ಮನೆಗೆ ತೆರಳಿ ಮತಯಾಚಿಸಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದೊಂದಿಗೆ ಪರಿಶ್ರಮಪಡಬೇಕು. ಸಿಎಂ ಕುಮಾರಸ್ವಾಮಿ ಅವರ ಜನಪರ ಕಾರ್ಯ ಕ್ರಮಗಳ ಬಗ್ಗೆ ಜನರಿಗೆ ತಿಳಿಸಿ, ಆಶೀರ್ವದಿ ಸುವಂತೆ ಕೋರಬೇಕೆಂದು ಜಿಟಿಡಿ ತಿಳಿ ಹೇಳಿದರು.

ಸಭೆಯಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಚೆಲುವೇಗೌಡ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪದಾಧಿ ಕಾರಿಗಳು, ಮುಖಂಡರು, ಕಾರ್ಯ ಕರ್ತರು ಉಪಸ್ಥಿತರಿದ್ದರು.

Translate »