ಖಾಯಂಮಾತಿಗೆ ಆಗ್ರಹಿಸಿ ಮೈಸೂರು ಪಾಲಿಕೆ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಮೈಸೂರು

ಖಾಯಂಮಾತಿಗೆ ಆಗ್ರಹಿಸಿ ಮೈಸೂರು ಪಾಲಿಕೆ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

October 4, 2018

ಮೈಸೂರು: ಸೇವಾ ಖಾಯಂಮಾತಿ ಹಾಗೂ ಇತರ ಸೌಲಭ್ಯಗಳಿಗೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ ಸುಮಾರು 2000 ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ತಮ್ಮ ಬೇಡಿಕೆಯನ್ನು ಈಡೇರಿಸಿ ಸರ್ಕಾರ ಲಿಖಿತ ಆದೇಶ ಹೊರಡಿ ಸುವವರೆಗೂ ತಾವು ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಪೌರಕಾರ್ಮಿಕರು ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಾಲಿಕೆ ಪ್ರಧಾನ ಕಚೇರಿ ಎದುರು ಫುಟ್‍ಪಾತ್‍ನಲ್ಲಿ ಪೆಂಡಾಲ್ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ-ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷರಾದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಪದಾಧಿಕಾರಿಗಳಾದ ಎನ್.ಮಾರ, ಮಂಚಯ್ಯ, ಶ್ರೀನಿವಾಸ್, ಆರ್.ಶಿವಣ್ಣ, ಪಳನಿ, ಎಸ್.ಗಣೇಶ್, ಕುಮಾರಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

2017ರ ಜುಲೈ 12ರಂದು ಸಚಿವ ಸಂಪುಟದಲ್ಲಿ ಕೈಗೊಂಡಿರುವ ತೀರ್ಮಾನದಂತೆ ಗುತ್ತಿಗೆ ರದ್ದುಪಡಿಸಿ ಸ್ಥಳೀಯ ಸಂಸ್ಥೆಗಳಿಂದಲೇ ಸಂಬಳ ಹಾಗೂ ಇತರ ಸೌಲಭ್ಯ ನೀಡಬೇಕೆಂದು ಒತ್ತಾಯಿಸುತ್ತಿರುವ ಪ್ರತಿಭಟನಾ ಕಾರರು, ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ಹಾಗೂ ಪಾಲಿಕ ಅಧಿಕಾರಿ ಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ಸ್ಥಳಿಯ ಸಂಸ್ಥೆಗಳೇ ವೇತನ ನೀಡಬೇಕು. ಬೆಂಗಳೂರು ಬೃಹತ್ ನಗರ ಪಾಲಿಕೆಯಂತೆ ಮೈಸೂರು ಮಹಾನಗರ ಪಾಲಿಕೆಯೂ ಪ್ರತೀ ವರ್ಷ ತಲಾ 20,000 ರೂ. ಬೋನಸ್ ನೀಡಬೇಕು, ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿರುವ ಹಣವನ್ನು ಖರ್ಚು ಮಾಡಿ ಆ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಬೇಕು, ಸ್ವಚ್ಛತೆಯಲ್ಲಿ ತೊಡಗಿರುವ ಲೋಡರ್, ಕ್ಲೀನರ್, ಡ್ರೈವರ್‍ಗಳು, ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ವಾಟರ್‍ಮ್ಯಾನ್, ವಾಲ್‍ಮ್ಯಾನ್‍ಗಳ ಗುತ್ತಿಗೆ ಪದ್ಧತಿಯನ್ನು ಶೀಘ್ರ ರದ್ದುಪಡಿಸಿ ನೇರವಾಗಿ ವೇತನ ನೀಡಬೇಕೆಂಬುದೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಮುಷ್ಕರ ಆರಂಭಿಸಿರುವ ಪೌರಕಾರ್ಮಿಕರು, ಸರ್ಕಾರದಿಂದ ಆದೇಶ ಹೊರ ಬರುವವರೆಗೂ ತಾವು ಸ್ವಚ್ಛತಾ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ದಲಿತ ಸಂಘರ್ಷ ಸಮಿತಿ ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳೂ ಪೌರಕಾರ್ಮಿಕರ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿರುವುದರಿಂದ ಕೆ.ಆರ್.ಸರ್ಕಲ್, ಮಕ್ಕಾಜಿ ಚೌಕ, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಜೆಎಲ್‍ಬಿ ರಸ್ತೆ, ಅಶೋಕ ರಸ್ತೆ, ದೇವರಾಜ ಅರಸು ರಸ್ತೆ, ಕೆ.ಆರ್.ಮಾರುಕಟ್ಟೆ, ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ ಸೇರಿದಂತೆ ಮೈಸೂರು ನಗರಾದಾದ್ಯಂತ ಎಲ್ಲಾ 65 ವಾರ್ಡುಗಳಲ್ಲಿ ಸ್ವಚ್ಛತೆ ಇಲ್ಲದೆ ಕಸ ನಿಧಾನವಾಗಿ ಕಾಣಿಸತೊಡಗಿದೆ.

ಪೌರಕಾರ್ಮಿಕರು ಕಸ ಸಂಗ್ರಹಣೆ ಮಾಡದಿರುವ ಕಾರಣ, ಮನೆ-ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಹಾಗೂ ಹಸಿ ಕಸ ವಿಲೇವಾರಿಯಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಸ್ವಚ್ಛ ನಗರಿ ಎಂದು ಖ್ಯಾತಿಯಾಗಿರುವ ಮೈಸೂರು ಕಸದ ರಾಶಿಗಳ ನಗರಿ ಎಂಬ ಹಣೆಪಟ್ಟಿಗೆ ಕಾರಣವಾಗಲಿದೆ. ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭ ವಾಗಿರುವ ಸಂದರ್ಭದಲ್ಲಿ ಸ್ವಚ್ಛತಾ ಕೆಲಸ ಸಂಪೂರ್ಣ ಸ್ಥಗಿತಗೊಂಡಿರುವುದು ಜಿಲ್ಲಾಡಳಿತ, ಪಾಲಿಕೆ ಹಾಗೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Translate »