ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನ
ಮೈಸೂರು

ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನ

October 4, 2018

ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‍ಗೂ ಆಮಂತ್ರಣ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿ ಅವರಿಗೆ ಸರ್ಕಾರ ಆಹ್ವಾನ ನೀಡಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸುಧಾಮೂರ್ತಿ ಅವರನ್ನು ಭೇಟಿ ಮಾಡಿ ವಿಧ್ಯುಕ್ತವಾಗಿ ಆಹ್ವಾನ ನೀಡಿದರು.

ನಗರದ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ಆಗಮಿಸಿದ ನಿಯೋಗ, ಸುಧಾ ಮೂರ್ತಿಯವರಿಗೆ ದಸರಾ ಹಬ್ಬ ಉದ್ಘಾಟಕರಾಗಿ ಅಧಿಕೃತ ಆಮಂತ್ರಣ ನೀಡಿದ್ದಲ್ಲದೆ, ಮೈಸೂರು ಪೇಟ, ರೇಷ್ಮೆ ಶಾಲು ಹಾಗೂ ಹೂವಿನ ಹಾರ ಹಾಕಿ ಗೌರವಿಸಿತು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಸುಧಾ ಮೂರ್ತಿ ಅವರು, ಸರ್ಕಾರದ ಈ ದೊಡ್ಡ ಆಮಂತ್ರಣ ನನಗೆ ಬಹಳ ಸಂತಸ ತಂದಿದೆ. ದಸರಾ ನಮ್ಮ ನಾಡಿನ ಹೆಮ್ಮೆಯ ಪ್ರತೀಕ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಇದು ಬಹಳ ದೊಡ್ಡ ಗೌರವ. 60 ವರ್ಷಗಳ ಹಿಂದೆ ನಾನು ದಸರಾ ನೋಡಿದ್ದೆ, ನಾನಾಗ 8 ವರ್ಷದವಳಾಗಿದ್ದೆ. ಈಗ 68ನೇ ವಯಸ್ಸಿಗೆ ದಸರಾ ನೋಡೋಕೆ ಉತ್ಸುಕಳಾಗಿದ್ದೇನೆ. ಈಗ ಬಹಳಷ್ಟು ಬದಲಾಗಿದೆ. ಆದರೂ ನನಗೆ ಇವತ್ತಿಗೂ ದಸರಾ ಅಂದರೆ 10 ದಿನಗಳ ಕಾಲ ಮನೆಯಲ್ಲಿ ಮಾಡುತ್ತಿದ್ದ ಸಿಹಿ, ವಸ್ತುಪ್ರದರ್ಶನ, ಬಣ್ಣದ ರಿಬ್ಬನ್ ಇವೇ ಕಣ್ಣ ಮುಂದೆ ಬರುತ್ತವೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿ.ಟಿ.ದೇವೇಗೌಡ ಮಾತನಾಡಿ, ಸುಧಾಮೂರ್ತಿ ಅವರು ಅದ್ಭುತ ಸಾಧಕಿ. ಈ ಬಾರಿ ದಸರಾ ಉದ್ಘಾಟನೆಗೆ ಅವರನ್ನೇ ಆಹ್ವಾನಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದರು. ಈ ಬಾರಿ ದಸರಾ ಉದ್ಘಾಟನೆ ಸುಧಾಮೂರ್ತಿಅವರಿಂದ ಆಗ್ತಿರೋದು ನಮ್ಮೆಲ್ಲರಿಗೂ ಸಂತಸದ ವಿಚಾರ.

ಇನ್ನು ಈ ಬಾರಿ ಕೊಡಗಿನಲ್ಲಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಗುಡ್ಡಕುಸಿತ ದುರಂತಗಳಿಂದ ಸಾವಿರಾರು ಜನ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಜೃಂಭಣೆಯ ದಸರಾ ಉತ್ಸವ ಆಚರಣೆ ಇಲ್ಲ. ಆದರೆ ಎಂದಿನಂತೆ ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತದೆ ಎಂದರು.

ನಿಯೋಗದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್, ಮಾಜಿ ಸಚಿವ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಇತರರು ಇದ್ದರು.

ಸುಧಾಮೂರ್ತಿ ಅವರಿಗೆ ಆಹ್ವಾನ ನೀಡಿದ ನಂತರ ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ದಸರಾ ಉತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.

ನಿಯೋಗದಿಂದ ಮುಖ್ಯಮಂತ್ರಿ ಅವರ ಭೇಟಿ ನಂತರ ಮಾತನಾಡಿದ ಹುಣಸೂರು ಶಾಸಕ ವಿಶ್ವನಾಥ್, ಮೈಸೂರು ರಾಜಮನೆತನದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಕಾರವನ್ನೂ ಪಡೆಯುತ್ತೇವೆ. ರಾಜಮನೆತನದವರು ನಡೆಸುವ ದಸರಾ ಖಾಸಗಿ ಕಾರ್ಯಕ್ರಮ, ಅದರಲ್ಲಿ ಸೀಮಿತ ಆಹ್ವಾನಿತರಿಗೆ ಮಾತ್ರ ಪ್ರವೇಶ ಇರುತ್ತದೆ ಎಂದರು.

Translate »