ದುಷ್ಕರ್ಮಿಗಳಿಂದ ವ್ಯಾಪಾರಿ ಸುಲಿಗೆ
ಮೈಸೂರು

ದುಷ್ಕರ್ಮಿಗಳಿಂದ ವ್ಯಾಪಾರಿ ಸುಲಿಗೆ

June 15, 2019

ಮೈಸೂರು: ಅಪರಿಚಿತರಿಬ್ಬರು ನನ್ನನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದನ್ನು ದೋಚಿದರೆಂದು ವ್ಯಕ್ತಿಯೊಬ್ಬರು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ಕೆ.ಟಿ.ಸ್ಟ್ರೀಟ್-ಕೆ.ಆರ್.ಆಸ್ಪತ್ರೆ ರಸ್ತೆಯ ಬಟ್ಟೆ ವ್ಯಾಪಾರಿ ಸೋಹನ್‍ಲಾಲ್ ದೂರು ನೀಡಿದ್ದು, ಅಪರಿಚಿತರಿಬ್ಬರು ನನ್ನನ್ನು ಬೆದರಿಸಿ 25 ಗ್ರಾಂ ಚಿನ್ನದ ಸರ, 23 ಗ್ರಾಂ ಬ್ರಾಸ್‍ಲೇಟ್, 20 ಗ್ರಾಂ ಉಂಗುರ ಹಾಗೂ 1,500ರೂ. ಹಣವನ್ನು ಬಲವಂತವಾಗಿ ನನ್ನ ಕೈಯಿಂದಲೇ ಬ್ಯಾಗ್‍ನಲ್ಲಿ ತುಂಬಿಸಿಕೊಂಡು ಪರಾರಿ ಯಾದರೆಂದು ತಿಳಿಸಿದ್ದಾನೆ. ಕಳೆದ ಮೇ 31ರಂದು ಬೆಳಿಗ್ಗೆ ಕೆ.ಆರ್.ಹೆಚ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಾದ ಅಪರಿಚಿತರಿಬ್ಬರು ಪಂಡಿತರೊಬ್ಬರ ಮನೆಯ ವಿಳಾಸ ಕೇಳಿದರು. ವಿಳಾಸ ತಿಳಿಸಿದ ಬಳಿಕ ಗಂಧದ ಕಡ್ಡಿ ತೆಗೆದುಕೊಳ್ಳಬೇಕು. ಎಲ್ಲಿ ಸಿಗುತ್ತದೆ ತೋರಿಸಿ ಎಂದರು. ಸರಿ ಎಂದು ನಾನೇ ಅಂಗಡಿ ಬಳಿ ಕರೆದುಕೊಂಡು ಹೋಗಿ, ಗಂಧದ ಕಡ್ಡಿ ಕೊಡಿಸಿದೆ. ಬಳಿಕ ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ತಡೆದು ನಿಲ್ಲಿಸಿ, ತಲೆ ಮೇಲೆ ಕೈಯಿಟ್ಟು ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆಂದು ಹೇಳುತ್ತಲೇ ನನ್ನನ್ನು ಸುತ್ತುವರಿದು ಕೈಗೆ ಬ್ಯಾಗ್ ಕೊಟ್ಟು, ನಿನ್ನ ಬಳಿ ಇರುವ ಚಿನ್ನಾಭರಣ ಹಾಗೂ ಹಣ ವನ್ನು ಇದರಲ್ಲಿ ಹಾಕುವಂತೆ ಬೆದರಿಸಿದರು. ಭಯಗೊಂಡು ಆಭರಣ ಹಾಗೂ ಹಣವನ್ನು ಕರವಸ್ತ್ರದಲ್ಲಿ ಹಾಕಿ, ಅವರು ನೀಡಿದ್ದ ಬ್ಯಾಗ್‍ನಲ್ಲಿಟ್ಟೆ. ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾ ದರು. ಹಾಗಾಗಿ ತಡವಾಗಿ ದೂರು ನೀಡಿದ್ದಾಗಿ ಸೋಹನ್‍ಲಾಲ್ ದೂರಿನಲ್ಲಿ ತಿಳಿಸಿದ್ದಾರೆ. ಅಪರಿಚಿತರ ಜೊತೆ ಸೋಹನ್‍ಲಾಲ್ ಅರ್ಧ ಗಂಟೆ ಮಾತನಾಡಿರುವುದಲ್ಲದೆ, ಚಿನ್ನಾಭರಣ ವನ್ನು ತಾವೇ ಬಿಚ್ಚಿ ಅವರಿಗೆ ನೀಡಿರುವುದು ಘಟನಾ ಸ್ಥಳದ ಆಸುಪಾಸಿನಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »