ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರಕ್ಕೆ ಕ್ರಮ
ಕೊಡಗು

ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರಕ್ಕೆ ಕ್ರಮ

December 18, 2018

ಗೋಣಿಕೊಪ್ಪಲು:  ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಗೋಣಿಕೊಪ್ಪ ಪಟ್ಟಣದಲ್ಲಿ ಏಕಮುಖ ಸಂಚಾರಕ್ಕೆ ಪ್ರಾಯೋ ಗಿಕವಾಗಿ ಚಾಲನೆ ನೀಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪನ್ನೇಕರ್ ಹೇಳಿದರು.ಇಲ್ಲಿನ ಪರಿಮಳ ಮಂಗಳ ವಿಹಾದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋ ಜಿಸಿದ್ದ ವಾಹನ ಸುರಕ್ಷತೆ ಹಾಗೂ ಸಂಚಾರ ಪಾಲನೆ ಎಂಬ ವಿಷಯ ಕುರಿತು ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಹಾಗೂ ಸಾರ್ವಜನಿಕರು ಪಟ್ಟಣದಲ್ಲಿನ ವಾಹನ ದಟ್ಟಣೆ ನಿಯಂತ್ರಣಕ್ಕೆ ಬೈಪಾಸ್ ಮೂಲಕ ಏಕಮುಖ ಸಂಚಾರಕ್ಕೆ ಕ್ರಮಕ್ಕೆ ಒತ್ತಾಯಿಸಿದ ಸಂದರ್ಭ ಅವರು ಪ್ರತಿಕ್ರಿಯಿ ಸಿದರು. ಪೊಲೀಸ್ ಇಲಾಖೆ ಪ್ರಾಯೋ ಗಿಕವಾಗಿ ಏಕಮುಖ ಸಂಚಾರ ನಡೆಸಲು ಕ್ರಮಕೈಗೊಳ್ಳಲಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಸಾಕಷ್ಟು ಸವಾರರು ಪೊಲೀಸರನ್ನು ಕಾಣುವಾಗ ಮಾತ್ರ ಹೆಲ್ಮೆಟ್ ಧರಿಸುವುದು, ವಾಹನ ವೇಗ ನಿಯಂತ್ರಣ, ಸೀಟ್‍ಬೆಲ್ಟ್ ಇಂತಹ ಸುರಕ್ಷಿತ ಮಾರ್ಗ ಗಳನ್ನು ಅನುಸರಿಸುತ್ತಾರೆ. ಪೊಲೀಸ್ ಸಿಬ್ಬಂದಿ ಎಲ್ಲಾ ಕಡೆಗಳಲ್ಲೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸವಾರರೇ ಸುರಕ್ಷತೆಯ ದೃಷ್ಟಿಯಿಂದ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಸುಮನ ಪನ್ನೇಕರ್ ಸಲಹೆ ನೀಡಿದರು.

ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ಸಮೀಪ ವಿರಾಜಪೇಟೆಗೆ ತೆರಳುವ ಬಸ್ ಗಳಿಗೆ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೆಚ್ಚಿನ ಸಮ ಯಾವಕಾಶ ನೀಡಬೇಕು ಎಂದು ಸ್ಥಳೀಯ ಖಾಸಗಿ ಬಸ್ ನೌಕರರು ಒತ್ತಾಯಿಸಿದರು.

ಪೊನ್ನಂಪೇಟೆ ಪಟ್ಟಣದಲ್ಲಿ ಖಾಸಗಿ ಬಸ್ ನಿಲುಗಡೆಗೆ ಇಲಾಖೆ ಕ್ರಮಕೈಗೊಳ್ಳ ಬೇಕು. ಇದರಿಂದ ವಾಹನ ದಟ್ಟಣೆ ತಪ್ಪಲಿದೆ ಎಂದು ಗ್ರಾಮಸ್ಥ ಎರ್ಮುಹಾಜಿ ಒತ್ತಾಯಿಸಿದರು. ಕೆಟ್ಟು ನಿಂತಿರುವ ಟ್ರಾಫಿಕ್ ಲೈಟ್‍ಗಳನ್ನು ದುರಸ್ತಿ ಪಡೆಸು ವಂತೆ ದಯಾ ಚೆಂಗಪ್ಪ ಒತ್ತಾಯಿಸಿದರು. ಗೋಣಿಕೊಪ್ಪ ಪಟ್ಟಣದಲ್ಲಿನ ಸಿಸಿ ಕ್ಯಾಮೆರಾ ದುರಸ್ತಿ ಪಡಿಸುವಂತೆ ಪೊನ್ನಿ ಮಾಡ ಸುರೇಶ್ ಒತ್ತಾಯಿಸಿದರು.

ಅಪಘಾತ ನಿಯಂತ್ರಣಕ್ಕೆ ಸಾರ್ವಜನಿಕರು, ಯುವ ಸಮೂಹ ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮ, ಸಂಚಾರ ನಿಯಮ ಪಾಲನೆ ಬಗ್ಗೆ ಸ್ಲೈಡ್‍ಶೋ ಮೂಲಕ ಮಾಹಿತಿ ನೀಡಲಾಯಿತು. ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ವಾಹನ ಚಾಲಕರು, ಆಟೋ, ಬಾಡಿಗೆ ವಾಹನ, ಶಾಲಾ ವಾಹನ ಚಾಲಕರು ಪಾಲ್ಗೊಂಡಿದ್ದರು.

ಈ ಸಂದರ್ಭ ಡಿವೈಎಸ್‍ಪಿ ನಾಗಪ್ಪ, ತಹಸೀಲ್ದಾರ್ ಗೋವಿಂದರಜು, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ವೃತ್ತ ನಿರೀಕ್ಷಕರುಗಳಾದ ದಿವಾಕರ್, ಪಿ.ಕೆ. ರಾಜು, ಉಪನಿರೀಕ್ಷಕರುಗಳಾದ ಶ್ರೀಧರ್, ಮಹೇಶ್ ಇತರರು ಉಪಸ್ಥಿತರಿದ್ದರು.

Translate »