ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆ ಸಂಪೂರ್ಣ ಬಂದ್
ಮೈಸೂರು

ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆ ಸಂಪೂರ್ಣ ಬಂದ್

August 31, 2019

ಮಂಡ್ಯ, ಆ.30(ನಾಗಯ್ಯ)-ಕೃಷ್ಣರಾಜಸಾಗರ ಅಣೆ ಕಟ್ಟೆಯ ಸುತ್ತಮುತ್ತ 20 ಕಿಲೋಮೀಟರ್ ಗಣಿಗಾರಿಕೆಯನ್ನು ಬಂದ್ ಮಾಡಲಾಗಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಸೇರಿದಂತೆ ಕೆಆರ್‍ಎಸ್ ಸುತ್ತ್ತಮುತ್ತ ನಡೆಯುತ್ತಿದ್ದ ಎಲ್ಲಾ ಗಣಿಗಾರಿಕೆಗಳನ್ನು ಪೂರ್ಣ ಬಂದ್ ಮಾಡಿ ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಅವರು ಸಂಸತ್‍ನಲ್ಲಿ ಇದರ ಬಗ್ಗೆ ದನಿ ಎತ್ತಿದ್ದರು. ಅಲ್ಲದೆ ಸ್ಥಳೀಯವಾಗಿಯೂ ರೈತರು, ಪ್ರಗತಿಪರರು, ಕೆಆರ್‍ಎಸ್ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡರು ಸೇರಿದಂತೆ ಹಲವು ಮಂದಿ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯಕಾರಿಯಾಗಿರುವ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ನಿರಂತರವಾಗಿ ಹೋರಾಟ ರೂಪಿಸಿದ್ದರು.

ಅಲ್ಲದೇ ಆಗಸ್ಟ್ ಎರಡನೇ ವಾರದಲ್ಲೂ ಕೆಆರ್‍ಎಸ್ ಸುತ್ತಮುತ್ತ ಭಾರೀ ಪ್ರಮಾಣದ ಸರಣಿ ಶಬ್ದಗಳು ಕೇಳಿ ಬಂದು ಗಣಿಕಾರಿಕೆಯಿಂದಾಗಿ ಕೆಆರ್‍ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗುವ ಸಾಧ್ಯತೆ ಇದೆ ಎನ್ನುವ ಮಾತು ಬಲವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಸೆ.4ರವರೆಗೆ ಕಲ್ಲು ಗಣಿ ಚಟುವಟಿಕೆ ನಿಬರ್ಂಧಿಸಿ ನಿಷೇಧಾಜ್ಞೆ ಜಾರಿ ಮಾಡಿತ್ತು. ಆದರೆ ಇದೀಗ ಈ ನಿಷೇಧಾಜ್ಞೆಯನ್ನು, ಅನಿರ್ಧಿಷ್ಟಾವಧಿಗೆ ವಿಸ್ತರಿಸಿ ಮಂಡ್ಯ ಡಿಸಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಅಣೆಕಟ್ಟೆ ಸುರಕ್ಷತಾ ದೃಷ್ಟಿಯಿಂದ ಆ.28ರಿಂದ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.

ಈ ಆದೇಶದ ಪ್ರಕಾರ ಬೇಬಿಬೆಟ್ಟ ಸೇರಿದಂತೆ ಪಾಂಡವಪುರ ತಾಲೂಕಿನ ಚಿನಕುರುಳಿ, ಹೊನಗಾನಹಳ್ಳಿ, ದೊಡ್ಡಭೋಗನಹಳ್ಳಿ, ಮೊಳೆಸಂದ್ರ, ಅಲ್ಪಳ್ಳಿ, ಕಟ್ಟೇರಿ, ಕಣಿವೆಕೊಪ್ಪಲು, ಚಂದ್ರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆಗೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್, ಕೆಆರ್‍ಎಸ್ ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟೆ ಸುತ್ತಮುತ್ತಲಿನ ಗಣಿಗಾರಿಕೆಗಳ ಸ್ಥಗಿತಕ್ಕೆ ಆದೇಶ ಮಾಡಿದ್ದೇನೆ. ಗಣಿಗಾರಿಕೆಗೆ ಸಹಕಾರಿಯಾಗದಿರುವಂತೆ ಎಲ್ಲಾ ಗಣಿಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಕ್ಕೆ ಚೆಸ್ಕಾಂಗೆ ಸೂಚಿಸಲಾಗಿದೆ. ಗಣಿಗಾರಿಕೆ ತಡೆಗೆ ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ. ಎಸಿ, ತಹಸೀಲ್ದಾರ್, ಗಣಿ ಇಲಾಖೆ, ತಮ್ಮ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಈ ಕಮಿಟಿಯಲ್ಲಿರುತ್ತದೆ. ಅಲ್ಲದೆ ಪ್ರತಿ ದಿನ ಒಬ್ಬ ಅಧಿಕಾರಿ ಗಣಿಗಾರಿಕಾ ಸ್ಥಳಗಳಿಗೆ ಭೇಟಿ ಕೊಟ್ಟು ವಾಸ್ತವದ ವರದಿ ನೀಡಬೇಕೆಂದು ಈ ಆದೇಶದಲ್ಲಿ ತಿಳಿಸಲಾಗಿದೆ ಎಂದರು.

ಕ್ರಿಮಿನಲ್ ಕೇಸ್: ಈ ಹಿಂದೆ ಯಾವ ಜಿಲ್ಲಾಧಿಕಾರಿಗಳೂ ಗಣಿ ಗಾರಿಕೆಗಳಿಗೆ ಅನಿರ್ದಿಷ್ಟಾವಧಿ ನಿಷೇಧಾಜ್ಞೆ ಆದೇಶ ಹೊರಡಿಸಿರಲಿಲ್ಲ. ಹೀಗಾಗಿ ಅಲ್ಲಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಈಗ ಹಾಗೆಲ್ಲ ನಡೆಯಲು ಬಿಡುವುದಿಲ್ಲ. ಒಂದು ವೇಳೆ ನಮ್ಮ ಆದೇಶ ಉಲ್ಲಂಘಿಸುವ ಗಣಿಗಾರಿಕೆ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾ ಗುವುದು. ಗಣಿಗಾರಿಕೆಗೆ ಬಳಸುವ ಪರಿಕರಗಳನ್ನು ಜಪ್ತಿ ಮಾಡಲಾಗು ವುದು ಎಂದು ತಿಳಿಸಿದರು. ಕೆಆರ್‍ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಶಬ್ದ ಕೇಳಿ ಬಂದಿತ್ತು. ಇದರಿಂದ ಅಣೆಕಟ್ಟೆ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದರು. ಈ ಶಬ್ದಕ್ಕೆ ಕಲ್ಲು ಗಣಿಗಾರಿಕೆ ಕಾರಣ ಇರಬಹುದು ಎಂದು ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ತಹಸೀಲ್ದಾರ್ ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಣೆಕಟ್ಟೆ ಸುರಕ್ಷತೆಗಾಗಿ ನಿಷೇಧಾಜ್ಞೆ ಜಾರಿಗೊಳಿ ಸಿದ್ದೇವೆ ಎಂದರು. ಮುಖ್ಯಮಂತ್ರಿಗಳು ಸಹ ಕೆಆರ್‍ಎಸ್ ಅಣೆಕಟ್ಟೆಗೆ ಯಾವುದೇ ಅಪಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಕೆಆರ್‍ಎಸ್ ಅಣೆಕಟ್ಟೆ ಪಕ್ಕದ ಬೇಬಿ ಬೆಟ್ಟದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯಿಂದ ಕೆಆರ್‍ಎಸ್‍ಗೆ ಆಪತ್ತು ಇದೆ ಎಂದು ಇತ್ತೀಚೆಗಷ್ಟೇ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಂಡ ವರದಿ ನೀಡಿತ್ತು. ಅದರಂತೆ ಕೆಆರ್‍ಎಸ್ ಅಣೆಕಟ್ಟೆ ಸುರಕ್ಷತೆ ದೃಷ್ಠಿಯಿಂದ ಗಣಿಗಾರಿಕೆ ನಿಷೇಧಿಸಲಾಗಿದೆ.

ಸರ್ಕಾರಕ್ಕೆ ಪತ್ರ: ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ನಿಷೇಧ, ಅಣೆಕಟ್ಟೆ ಸುರಕ್ಷತೆ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನೋಡಬೇಕಿದೆ. ಒಂದು ವೇಳೆ ಸರ್ಕಾರ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಇದೆಯೇ ಎಂಬ ಬಗ್ಗೆ ವಿಶ್ವಾಸಾರ್ಹ ತನಿಖಾ ತಂಡದಿಂದ ತನಿಖೆ ನಡೆಸಲು ನಿರ್ಧರಿಸಿದ್ದೇ ಆದರೆ, ಈ ವರದಿ ಬಂದ ಬಳಿಕ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮುಂದುವರೆಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು. ಕಾವೇರಿ ಕೊಳ್ಳದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಣೆಕಟ್ಟೆ ಕೂಡ ಸಂಪೂರ್ಣ ತುಂಬಿದ್ದು ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಕಾವೇರಿಗೆ ಬಾಗಿನ ಅರ್ಪಿಸಿದ್ದರು. ಇದೀಗ ಭರ್ತಿಯಾಗಿರುವ ಕೆಆರ್‍ಎಸ್ ಜಲಾಶಯದ ಸುರಕ್ಷತೆಗಾಗಿ ಕೆಆರ್‍ಎಸ್ ಸುತ್ತಮುತ್ತಲಿನ ಗಣಿಗಾರಿಕೆಯನ್ನು ನಿಷೇಧಿಸುವುದರೊಂದಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ. ಆದರೆ ಇದು ಎಲ್ಲಿಯವರೆಗೆ ಮುಂದುವರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Translate »