ಇಡಿಯಿಂದ ಸತತ 5.30ಗಂಟೆ ಡಿಕೆಶಿ ವಿಚಾರಣೆ
ಮೈಸೂರು

ಇಡಿಯಿಂದ ಸತತ 5.30ಗಂಟೆ ಡಿಕೆಶಿ ವಿಚಾರಣೆ

August 31, 2019

ನವದೆಹಲಿ, ಆ.30- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ಆಯುಕ್ತೆ ಮೋನಿಕಾ ಶರ್ಮಾ ನೇತೃತ್ವದ ಐವರು ಅಧಿಕಾರಿಗಳು ಐದೂವರೆ ಗಂಟೆ ಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದರು.

ವಿಚಾರಣೆ ಮುಗಿಸಿ ಹೊರಬಂದ ಡಿಕೆಶಿ ಸುದ್ದಿಗಾರರ ಜೊತೆ ಮಾತನಾಡಿ, ವಿಚಾ ರಣೆ ಈಗ ತಾನೇ ಆರಂಭವಾಗಿದೆ. ಇಂದು ಸಂಜೆ 6 ಗಂಟೆಯಿಂದ ರಾತ್ರಿ 11.30ರವ ರೆಗೆ ಅಧಿಕಾರಿಗಳು ನನ್ನನ್ನು ವಿಚಾರಣೆ ನಡೆಸಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ವಿಚಾ ರಣೆಗೆ ಸಂಪೂರ್ಣವಾಗಿ ಸಹಕಾರ ನೀಡು ತ್ತೇನೆ ಎಂದು ಹೇಳಿದ್ದೇನೆ. ಮಾತು ಕೊಟ್ಟಂತೆ ಸಹಕರಿಸುತ್ತೇನೆ ಎಂದರು. ಬೆಂಗಳೂರಿ ನಿಂದ ಇಂದು ಸಂಜೆ 4.50ರ ವೇಳೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಸಂಜೆ 6 ಗಂಟೆಗೆ ಲೋಕ ನಾಯಕ ಭವನದಲ್ಲಿರುವ ಇಡಿ ಕಚೇರಿಗೆ ತೆರಳಿದರು. ಅಧಿಕಾರಿಗಳು ಅವರ ವಿಚಾ ರಣೆ ಆರಂಭಿಸಿ, ರಾತ್ರಿ 9 ಗಂಟೆ ಸುಮಾರಿ ನಲ್ಲಿ ಊಟದ ನಂತರ ಕೆಲ ಸಮಯ ಶಿವಕುಮಾರ್ ಅವರಿಗೆ ವಿಶ್ರಾಂತಿಗೆ ಅವ ಕಾಶ ನೀಡಿದ್ದರು. ಆ ವೇಳೆ ಕಚೇರಿ ಹೊರಗೆ ಬಂದ ಡಿಕೆಶಿ, ಅಲ್ಲಿ ಕಾಯುತ್ತಿದ್ದ ತಮ್ಮ ಸಹೋದರ ಡಿ.ಕೆ.ಸುರೇಶ್, ಮಾಜಿ ಸಂಸದ ಶಿವರಾಮೇಗೌಡ ಮತ್ತಿತರರೊಂದಿಗೆ ಮಾತನಾಡಿದರು.
ದೆಹಲಿಯ ಅವರ ನಿವಾಸದಲ್ಲಿ ದೊರೆತ ಕೋಟ್ಯಾಂತರ ರೂ. ಅಕ್ರಮ ಹಣದ ಬಗ್ಗೆ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಇಡಿ ಕಚೇರಿಗೆ ಮೂವರು ವಕೀಲರನ್ನು ಡಿ.ಕೆ.ಶಿವಕುಮಾರ್ ಕರೆಸಿಕೊಂಡಿದ್ದು, ಆದರೆ ವಿಚಾರಣೆ ವೇಳೆ ವಕೀಲರ ಸಹಕಾರ ಪಡೆಯಲು ಅಧಿಕಾರಿಗಳು ಅವಕಾಶ ನೀಡಿಲ್ಲ. ಅಲ್ಲದೇ ಮೊಬೈಲ್ ಮೂಲಕ ಡಿ.ಕೆ.ಶಿವಕುಮಾರ್ ತಮ್ಮ ಚಾರ್ಟೆಡ್ ಅಕೌಂಟೆಂಟ್ ಸಹಕಾರ ಪಡೆಯಲು ಕೇಳಿದ್ದಕ್ಕೂ ಅವಕಾಶವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಸಂಜೆ 4.50ರಲ್ಲಿ ದೆಹಲಿಗೆ ವಿಮಾನದಲ್ಲಿ ಬಂದಿಳಿದ ಡಿ.ಕೆ.ಶಿವಕುಮಾರ್, ಸುದ್ದಿಗಾರರೊಂದಿಗೆ ಮಾತನಾಡಿದರು. `ನಾವೂ ಮನುಷ್ಯರೇ. ಇಡಿ ಅಧಿಕಾರಿಗಳು ಬುದ್ಧಿವಂತರು. ಮೊದಲು ನ್ಯಾಯಾಲಯಕ್ಕೆ ಹೋಗಿ ಈಗ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದಾರೆ. ನಾನು ಎಲ್ಲೂ ಓಡಿ ಹೋಗುವುದಿಲ್ಲ ಎನ್ನುವುದು ಅವರಿಗೂ ತಿಳಿದಿದೆ. ನಾನು ಅವರನ್ನು ಗೌರವಿಸುತ್ತೇನೆ’ ಎಂದರು. ನಂತರ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನಕ್ಕೆ ತೆರಳಿದರು.

ಡಿಕೆಶಿ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರು ಕರ್ನಾಟಕ ಭವನದಿಂದ ಡಿಕೆಶಿ ಅವರನ್ನು ತಮ್ಮ ನಿವಾಸಕ್ಕೆ ಕರೆದೊಯ್ದರು. ಅಲ್ಲಿಂದ ಸಂಜೆ 6.30ರ ವೇಳೆಗೆ ಶಿವಕುಮಾರ್ ಇಡಿ ಕಚೇರಿಗೆ ಆಗಮಿಸಿದರು. ಈ ಸಂದರ್ಭ ಕಚೇರಿಗೆ ಎರಡು ಕೈ ಜೋಡಿಸಿ ಮುಗಿದು ಅವರು ಒಳ ಪ್ರವೇಶಿಸಿದರು. ಅವರ ಜೊತೆ ಡಿ.ಕೆ.ಸುರೇಶ್ ಕಚೇರಿ ಒಳಗೆ ಪ್ರವೇಶಿಸಲು ಮುಂದಾದಾಗ ಅಧಿಕಾರಿಗಳು ಅವರನ್ನು ತಡೆದರು. ರಾತ್ರಿ 11.30ರ ಸುಮಾರಿನಲ್ಲಿ ಇಂದಿನ ವಿಚಾರಣೆ ಅಂತ್ಯಗೊಳಿಸಿದ ಅಧಿಕಾರಿಗಳು, ನಾಳೆ (ಆ.31) ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಏನಿದು ಪ್ರಕರಣ?: 2017ರ ಆಗಸ್ಟ್ 2 ರಂದು ದೆಹಲಿಯ ಡಿ.ಕೆ.ಶಿವಕುಮಾರ್, ಅವರ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದೆಹಲಿ ಅಪಾರ್ಟ್‍ಮೆಂಟ್ ನಿವಾಸದಲ್ಲಿ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಡಿಕೆಶಿಯ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾದ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿ.ಕೆ.ಶಿವಕುಮಾರ್ ಕೋಟ್ಯಾಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

ದೆಹಲಿಯ ನನ್ನ ನಿವಾಸದಲ್ಲಿ ದೊರೆತ 8.6 ಕೋಟಿ ನನ್ನದೇ
ಬೆಂಗಳೂರು, ಆ. 30(ಕೆಎಂಶಿ)- ದೆಹಲಿಯ ನನ್ನ ನಿವಾಸಗಳಲ್ಲಿ ದೊರೆತ 8.6 ಕೋಟಿ ರೂ. ನನ್ನದೇ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸಿದೆ. ಇ.ಡಿ., ಐ.ಟಿ. ಸೇರಿದಂತೆ ಇನ್ನಿತರ ಇಲಾಖೆಗಳು ನನ್ನ ಗುರಿಯಾಗಿಸಿಕೊಂಡು ದಾಳಿ ಮಾಡಿ, ನನ್ನದೇ ಹಣ ಎಂದರೂ ಅದನ್ನು ರಾಜಕೀಯವಾಗಿ ಬಳಸಿಕೊಂಡು ನನ್ನನ್ನು ಜೈಲಿಗೆ ಕಳುಹಿಸಲು ಹೊರಟಿವೆ ಎಂದು ದೂರಿದರು.

ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಸದಾಶಿವನಗರದ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಯಾರು ಬೇಕಾದರೂ ನನ್ನನ್ನು ಟಾರ್ಗೆಟ್ ಮಾಡಲಿ, ಕಾನೂನು ಮತ್ತು ರಾಜಕೀಯವಾಗಿ ಎದುರಿಸುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ, ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಗುಜರಾತ್ ಹಾಗೂ ಮಹಾರಾಷ್ಟ್ರ ಶಾಸಕರನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲಿತ್ತು. ಪಕ್ಷ ನೀಡಿದ್ದ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ನನ್ನ, ನನ್ನ ಕುಟುಂಬ, ನೆಂಟರು, ಸ್ನೇಹಿತರ ಮೇಲೆ ದಾಳಿ ನಡೆಸಿದೆ. ಪಕ್ಷದ ಇತರ ಕಾರ್ಯಕರ್ತರ ಮೇಲೂ ದಾಳಿ ನಡೆಸಿದ್ದನ್ನು ಗಮನಿಸಿದ್ದೀರಿ, ತಮ್ಮ ಬಳಿ ಇರುವ ಎಲ್ಲ ಆಸ್ತಿ ಬೇನಾಮಿ ಎಂಬ ಸ್ಥಿತಿ ನಿರ್ಮಾಣ ಮಾಡಲು ಹೊರಟಿದ್ದು, ಈ ಬಗ್ಗೆ ಕಾನೂನು ಹೋರಾಟ ಆರಂಭಿಸಿದ್ದೇನೆ. ನಾನು ಕಾನೂನಿಗೆ ಗೌರವ ಕೊಡುವ ಶಾಸಕ, ನ್ಯಾಯಾಂಗ ಮತ್ತು ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. 84-85 ವರ್ಷದ ತಾಯಿಗೆ ಒಬ್ಬ ಸಂಸದ ಮಗನಿದ್ದಾನೆ, ಒಬ್ಬ ಮಗ ಶಾಸಕನಾಗಿದ್ದಾನೆ, ನಮ್ಮ ತಾಯಿಯ ಎಲ್ಲಾ ಆಸ್ತಿ ಬೇನಾಮಿ ಎಂದು ಹೇಳುತ್ತಿದ್ದಾರೆ. ನಮ್ಮ ತಂದೆಯ ನಿಧನದ ನಂತರ ನನ್ನ ತಾಯಿ ಮಕ್ಕಳ ಮೇಲೆ ಅವಲಂಬಿತರಾಗಿದ್ದಾರೆ, ತಾಯಿ ತನ್ನ ಮಕ್ಕಳನ್ನು ನಂಬಬೇಕಾ ಬೇರೆಯವರನ್ನು ನಂಬಬೇಕಾ, ನ್ಯಾಯವಾಗಿ ಸಂಪಾದಿಸಿದ ಆಸ್ತಿಯನ್ನು ಬೇನಾಮಿ ಎನ್ನುತ್ತಾರೆ ಎಂದು ಆರೋಪಿಸಿದರು.

ನಾನೇನು ಕೊಲೆ, ಲೂಟಿ ಮಾಡಿಲ್ಲ, ಪ್ರಾಮಾಣಿಕವಾಗಿ ದುಡಿದಿ ದ್ದೇನೆ. ನಮ್ಮ ಸ್ನೇಹಿತರ ಮನೆ, ಕುಟುಂಬದವರ ಮನೆಯಲ್ಲಿ ಸಿಕ್ಕಿದ ಹಣ ನಮ್ಮದೇ ಅಂತ ಹೇಳಿದ್ದೇವೆ, ಬೇರೆಯವರದ್ದು ಅಂತ ಹೇಳಿಲ್ಲ. ಅದಕ್ಕೆ ಆದಾಯ ತೆರಿಗೆಯನ್ನೂ ಪಾವತಿಸಿದ್ದೇವೆ. ಆದರೂ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಗೌಪ್ಯ ವಿಚಾರಗಳ ಬಗ್ಗೆ ನಾನು ಸದ್ಯಕ್ಕೆ ಮಾತನಾಡುವುದಿಲ್ಲ. ಏನೇ ಇದ್ದರೂ ಕಾನೂನು ರೀತಿ ನಡೆದುಕೊಳ್ಳುತ್ತೇನೆ. ಎಲ್ಲ ರೀತಿಯಿಂದಲೂ ಚಿತ್ರಹಿಂಸೆ ಅನುಭವಿಸಿ ದ್ದೇನೆ. ಇ.ಡಿ. ವಿಚಾರಣೆಗೆ ಹಾಜರಾಗುತ್ತೇನೆ. ಹೆದರಿಕೊಂಡು ಓಡಿಹೋಗುವ ಕೆಂಪೇಗೌಡರ ಮಗ ಅಲ್ಲ. ಕಾನೂನು ರೀತ್ಯ ರಕ್ಷಣೆ ಪಡೆದುಕೊಳ್ಳಲು ತಯಾರಿ ನಡೆಸಿದ್ದೇನೆ. ನನ್ನ, ನನ್ನ ಕುಟುಂಬ, ನನ್ನ ಪಕ್ಷದ ತೇಜೋವಧೆ ಮಾಡುವ ಕೆಲಸ ಉತ್ತಮವಾಗಿ ನಡೆಯುತ್ತಿದೆ.

ಸಮನ್ಸ್‍ನಂತೆ ಇಂದು ಒಂದು ಗಂಟೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲ್ಲ. ಆದರೆ ಇಂದೇ ಇಡಿ ವಿಚಾರಣೆಗೆ ಹಾಜರಾಗುತ್ತೇನೆ. ಹೊರದೇಶಗಳಲ್ಲಿ ಯಾವುದೇ ಆಸ್ತಿ ಹೊಂದಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ.
ನಮ್ಮ ಅವಧಿಯಲ್ಲಿ ಜಾರಿಯಾಗಿದ್ದ ಯೋಜನೆ, ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಲು ಪ್ರತಿ ದಿನ ಸೂಚಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಸೇಡಿನ ರಾಜಕಾರಣ ಮಾಡಲ್ಲ ಎಂದಿದ್ದರೂ, ಇದೀಗ ಅವರು ನಡೆದುಕೊಳ್ಳುವ ರೀತಿಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕನಕಪುರದಲ್ಲಿ ಆರಂಭವಾಗಬೇಕಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿ, ಮುಖ್ಯಮಂತ್ರಿ ಅವರು ಆದೇಶ ಹೊರಡಿಸಿದ್ದಾರೆ. ಶನಿವಾರದೊಳಗೆ ಈ ಆದೇಶ ರದ್ದುಪಡಿಸದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Translate »