ಸಚಿವರಾದ ಜಿಟಿಡಿ, ಮಹೇಶ್ ಪ್ರಶಂಸಿಸಿದ ಭಗವಾನ್
ಮೈಸೂರು

ಸಚಿವರಾದ ಜಿಟಿಡಿ, ಮಹೇಶ್ ಪ್ರಶಂಸಿಸಿದ ಭಗವಾನ್

July 27, 2018

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರಶಂಸೆ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್ಚು ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದ ಜಿ.ಟಿ.ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವ ಖಾತೆ ವಹಿಸಿಕೊಳ್ಳಲು ಆರಂಭದಲ್ಲಿ ಹಿಂಜರಿದಿದ್ದರು. ಆದರೆ ಇದೀಗ ಉತ್ತಮವಾಗಿ ಖಾತೆ ನಿಭಾಯಿಸುತ್ತಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅಪಾರವಾದ ಶಿಕ್ಷಣ ಇಲ್ಲವಾದರೂ ಬುದ್ಧಿವಂತಿಕೆ ಮತ್ತು ಇಚ್ಛಾಶಕ್ತಿ ಇದ್ದರೆ ಸಾಕು ಎಂಬುದನ್ನು ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಲವರು ಆಷಾಢ ಮಾಸ ಕೆಟ್ಟದು ಎಂದು ಭಾವಿಸಿದ್ದಾರೆ. ಆದರೆ ಆಷಾಢ ಮಾಸದಲ್ಲಿಯೇ ಒಳ್ಳೆಯದಾಗುತ್ತದೆ. ಇದೀಗ ಆಷಾಢ ಮಾಸದಲ್ಲೇ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿಲ್ಲವೇ? ಇದನ್ನು ಅರಿತು ಜಿ.ಟಿ. ದೇವೇಗೌಡರು ಆಷಾಢ ಮಾಸದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇದು ಉಳಿದವರ ಮೇಲೂ ಪ್ರಭಾವ ಬೀರಲಿದೆ ಎಂದು ಅವರು ಹೇಳಿದರು.

ಪುಸ್ತಕ ನೋಡಿ ಪರೀಕ್ಷೆ ಬರೆಯುವ ವಿಧಾನ ಸೂಕ್ತ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಯತ್ತ ಚಿಂತನೆ ನಡೆಸಿದ್ದು, ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪಠ್ಯಪುಸ್ತಕ ಓದು ಅಮೃತ ಸಮಾನವಾದ ತಾಯಿ ಎದೆ ಹಾಲು ಕುಡಿದಂತೆ. ಆದರೆ ಗೈಡ್ ಅವಲಂಬನೆ ನೀರಿನ ಹಾಲಿನಂತೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಗೈಡ್ ಪುಸ್ತಕಗಳ ಮೊರೆ ಹೋಗುವುದೇ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಪದ್ಧತಿ ಪೂರಕವಾಗಲಿದೆ ಎಂದು ಪ್ರೊ.ಭಗವಾನ್ ಅಭಿಪ್ರಾಯಪಟ್ಟರು.

ಯಜ್ಞ-ಯಾಗ ಕಂದಾಚಾರದ ಪರಮಾವಧಿ: ಯಜ್ಞ ಮತ್ತು ಯಾಗ ಎಂಬುದು ಕಂದಾಚಾರದ ಪರಮಾವಧಿ. ಇವುಗಳಿಂದ ಯಾವುದೇ ಒಳ್ಳೆಯ ಬದಲಾವಣೆ ಸಾಧ್ಯವಿಲ್ಲ. ಭಗವಾನ್ ಬುದ್ಧರೇ ಇಂತಹ ಧಾರ್ಮಿಕ ಕ್ರಿಯೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಸಮಾಜಕ್ಕೆ ಸಾರಿದ್ದಾರೆ ಎಂದು ಪ್ರೊ.ಭಗವಾನ್ ಹೇಳಿದರು. ಯಜ್ಞ-ಯಾಗದಿಂದ ಸಮಸ್ಯೆ ಬಗೆಹರಿಯುವುದಾದರೆ, ದೇಶದ ಗಡಿಯಲ್ಲಿ ಸೈನಿಕರ ಬದಲು ಯಜ್ಞ-ಯಾಗ ಮಾಡಬಹುದಿತ್ತು. ಕೆಲ ರಾಜಕಾರಣಿಗಳು ಸೇರಿದಂತೆ ಅನೇಕರು ಯಜ್ಞ-ಯಾಗ ಮಾಡಿಸುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜವಿಲ್ಲ ಎಂದು ಪ್ರತಿಪಾದಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಮಾಡಿದ ಯಾಗದಿಂದ ಒಳ್ಳೆಯದಾಗುವುದಾದರೆ ಗಡಿಯಲ್ಲಿ ಮಾಡಿ ಎದುರಾಳಿ ದೇಶಗಳ ಸೈನಿಕರನ್ನು ಸದೆಬಡಿಯಲಿ. ಆಗ ಯಾಗದಿಂದ ಉಪಯೋಗ ಎಂದು ಒಪ್ಪಿಕೊಳ್ಳುತ್ತೇನೆ. ಅಂತೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾಗದಲ್ಲಿ ನಂಬಿಕೆ ಇರಿಸಿರುವುದು ಸರಿಯಲ್ಲ. ಆದರೆ ಅವರಲ್ಲಿ ಜನಪರ ಕೆಲಸ ಮಾಡುವ ಉದ್ದೇಶವಿದೆ. ಪಂಚಾಂಗ ರಾಜ್ಯವನ್ನಾಳಬಾರದು, ಬದಲಾಗಿ ರಾಜ್ಯಾಂಗ ಆಳಬೇಕು ಎಂದು ವಿಶ್ಲೇಷಿಸಿದರು. ಜೆಡಿಎಸ್ ಮುಖಂಡರಾದ ಶ್ರೀನಿವಾಸ್, ನಾಗೇಶ್ ಗೋಷ್ಠಿಯಲ್ಲಿದ್ದರು.

Translate »