ಅಕ್ವೇರಿಯಂ ಕಟ್ಟಡ ಪರಿಶೀಲಿಸಿದ ಶಾಸಕ ಎಸ್.ಎ.ರಾಮದಾಸ್
ಮೈಸೂರು

ಅಕ್ವೇರಿಯಂ ಕಟ್ಟಡ ಪರಿಶೀಲಿಸಿದ ಶಾಸಕ ಎಸ್.ಎ.ರಾಮದಾಸ್

July 27, 2018
  • ಪ್ರವಾಸಿಗರ ಆಕರ್ಷಣೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ

ಮೈಸೂರು: ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ಸಾಗಾರ (ಅಕ್ವೇರಿಯಂ) ದ ಕಟ್ಟಡವನ್ನು ಗುರುವಾರ ಶಾಸಕ ಎಸ್.ಎ.ರಾಮದಾಸ್ ಅವರು ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಸಮರ್ಪಿಸುವಂತೆ ಸಲಹೆ ನೀಡಿದರು.

ಮೃಗಾಲಯ ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಇಂದು ಮಧ್ಯಾಹ್ನ ಅಕ್ವೇರಿಯಂ ಕಟ್ಟಡಕ್ಕೆ ಆಗಮಿಸಿದ ಎಸ್.ಎ.ರಾಮದಾಸ್ ಮೃಗಾಲಯದ ಅಧಿಕಾರಿಗಳಿಂದ ಅಕ್ವೇರಿಯಂನ ನಕ್ಷೆಯನ್ನು ವೀಕ್ಷಿಸಿದರು. ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರವಾದ ಮೈಸೂರಿಗೆ ಬೃಹತ್ ಗಾತ್ರದ ಅಕ್ವೇರಿಯಂ ಅವಶ್ಯಕತೆಯಿತ್ತು. ಈ ಹಿನ್ನೆಲೆಯಲ್ಲಿ ಬಾಕಿ ಉಳಿದ ಕಾಮಗಾರಿಯನ್ನು ಬಿರುಸಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಇದೇ ವೇಳೆ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, 125 ವರ್ಷಗಳ ಇತಿಹಾಸವಿರುವ ಮೈಸೂರಿನ ಮೃಗಾಲಯ ಪ್ರಸಿದ್ಧ ಪ್ರವಾಸಿತಾಣವೂ ಆಗಿದೆ. ಸುಮಾರು 165ಕ್ಕೂ ಹೆಚ್ಚು ಜಾತಿಗಳ ಪ್ರಾಣಿ ಪಕ್ಷಿಗಳಿವೆ. ಅಪರೂಪದ ತಳಿ ಹಾಗೂ ಪ್ರಭೇದಗಳ ಪ್ರಾಣಿ ಮತ್ತು ಪಕ್ಷಿಗಳನ್ನು ಪಾಲನೆ ಮಾಡುತ್ತಿರುವುದರೊಂದಿಗೆ ವನ್ಯಜೀವಿ ಸಂರಕ್ಷಣೆಯಿಂದಾಗಿ ದೇಶದ ಗಮನ ಸೆಳೆದಿದೆ.

ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಆಕರ್ಷಣೆ ಮಾಡುವುದಕ್ಕಾಗಿ ಕಳೆದ 6 ವರ್ಷಗಳ ಹಿಂದೆ ಮಲೇಷಿಯನ್ ಅಕ್ವೇರಿಯಂ ಮಾದರಿಯಲ್ಲಿ ಮೃಗಾಲಯಕ್ಕೆ ಹೊಂದಿಕೊಂಡಂತೆ ದೊಡ್ಡ ಗಾತ್ರದಲ್ಲಿ ಅಕ್ವೇರಿಯಂ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿಗಳ ನಿಧಿಯಿಂದ 5 ಕೋಟಿ ರೂಗಳಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ಕಳೆದ ಆರು ವರ್ಷದಿಂದ ಅಕ್ವೇರಿಯಂ ಕಟ್ಟಡ ನೆನೆಗುದಿಗೆ ಬಿದ್ದಿದೆ. ಇದೀಗ ಬಾಕಿಯಿರುವ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕಾಗಿ ಅಕ್ವೇರಿಯಂ ಅನ್ನು ಮೃಗಾಲಯದ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಇದರ ಕಾಮಗಾರಿ ಪೂರ್ಣಗೊಳಿಸುವುದರೊಂದಿಗೆ ಅಕ್ವೇರಿಯಂ ಸ್ಥಾಪನೆಗೆ ಸಂಬಂಧಿಸಿದಂತೆ ಆಗಸ್ಟ್ 6ರಂದು ವಿವಿಧ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದೆ ಎಂದರು.

ಮೃಗಾಲಯಕ್ಕೆ ಬರುವ ಪ್ರವಾಸಿಗರು ಪ್ರಾಣಿಗಳನ್ನು ವೀಕ್ಷಿಸಿದ ಬಳಿಕ ಅಲ್ಲಿಂದಲೇ ಕಾರಂಜಿ ಕೆರೆಗೆ ಹೋಗುವುದಕ್ಕೆ ವಾಕಿಂಗ್ ಪಾಥ್ ನಿರ್ಮಿಸಬೇಕು. ಕಾರಂಜಿಕೆರೆಗೆ ಒಳ ಚರಂಡಿಯ ಕಲುಷಿತ ನೀರು ಹರಿದು ಬರುತ್ತಿದ್ದು, ಇದರಿಂದ ಕೆರೆಯಲ್ಲಿರುವ ಮೀನುಗಳು, ಪಕ್ಷಿಗಳು ಸಾವನ್ನಪ್ಪುತ್ತಿವೆ. ಇದನ್ನು ತಡೆಗಟ್ಟುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರಲ್ಲದೆ, ಈ ಸಂಬಂಧ ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ಕರೆಯುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಹಾಗೂ ಇನ್ನಿತರರು ಉಪಸ್ಥಿರಿದ್ದರು.

ಪಾದಯಾತ್ರೆ: ಇದಕ್ಕೂ ಮುನ್ನ 65ನೇ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಸಮಸ್ಯೆ ಆಲಿಸಿದರು. ಇದೇ ವೇಳೆ ಲಲಿತಮಹಲ್ ಬಳಿ ಇರುವ ಉದ್ಯಾನವನವನ್ನು ಅಭಿವೃದ್ಧಿ ಮಾಡುವಂತೆ, ವಿದ್ಯುತ್ ಕಂಬಗಳ ಕೆಳಗೆ ನೆಟ್ಟಿರುವ ಗಿಡಗಳನ್ನು ತೆರವು ಮಾಡುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಮಾಜಿ ಉಪ ಮೇಯರ್ ವನಿತಾ ಪ್ರಸನ್ನ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »