ನೀರು, ಬೀದಿ ದೀಪಗಳಿಲ್ಲ.. ಜೀವ ತಿನ್ನುವ ಮ್ಯಾನ್‍ಹೋಲ್…
ಮೈಸೂರು

ನೀರು, ಬೀದಿ ದೀಪಗಳಿಲ್ಲ.. ಜೀವ ತಿನ್ನುವ ಮ್ಯಾನ್‍ಹೋಲ್…

July 27, 2018
  • ಮೇಟಗಳ್ಳಿ, ಬಿಎಂಶ್ರೀನಗರ ಪ್ರದೇಶದಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ ವೇಳೆ ಜನರಿಂದ ದೂರಿನ ಸುರಿಮಳೆ
    ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ತಾಕೀತು

ಮೈಸೂರು: ನರ್ಮ್ ಮನೆಗಳಿಗೆ ನೀರು ಬರುತ್ತಿಲ್ಲ. ಬೀದಿ ದೀಪಗಳಿಲ್ಲ. ಜನರ ಜೀವ ತಿನ್ನಲು ಕುಸಿದಿರುವ ಮ್ಯಾನ್‍ಹೋಲ್ ಸರಿಪಡಿಸಿ, ಮಾಂಸದ ಅಂಗಡಿಗಳ ಗಲೀಜನ್ನು ಮ್ಯಾನ್‍ಹೋಲ್‍ಗಳಿಗೆ ಹಾಕಲಾಗುತ್ತಿದೆ. ಇಂಥ ಅನೇಕ ದೂರುಗಳು ಗುರುವಾರ ಮೇಟಗಳ್ಳಿ ಬಿ.ಎಂ.ಶ್ರೀನಗರ ಬಡಾವಣೆಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರಿಗೆ ಕೇಳಿಬಂದವು.

ಮೈಸೂರಿನ ಬಿ.ಎಂ.ಶ್ರೀನಗರ ನರ್ಮ್ ಮನೆಗಳಿಗೆ ಕುಡಿಯುವ ನೀರಿನ ತೊಂದರೆ ಇರುವ ಬಗ್ಗೆ ಅಲ್ಲಿನ ನಿವಾಸಿಗಳು ದೂರಿದರು.

ನರ್ಮ್ ಮನೆಗಳಿಗೆ ನೀರಿನ ಸಮಸ್ಯೆ ಇದೆ. ಮೇಲಿನ ಮನೆಗಳಲ್ಲಿ ವಯಸ್ಸಾದವರೇ ಹೆಚ್ಚಾಗಿದ್ದು, ನೀರಿಗಾಗಿ ಹತ್ತಿ ಇಳಿದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ನಮಗೆ ನೀರಿನ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಸ್ಥಳ ಪರಿಶೀಲಿಸಿದ ಶಾಸಕ ಎಲ್.ನಾಗೇಂದ್ರ, ನರ್ಮ್ ಮನೆಗಳಿಗೆ ಹೊಸ ಟ್ಯಾಂಕ್ ಅಳವಡಿಸಿ, ಸಂಪಿನಿಂದ ಮೇಲಿನ ಮನೆಗಳಿಗೆ ನೀರೆತ್ತಲು ಪಂಪ್ ಅಳವಡಿಸಿಕೊಡುವಂತೆ ಸ್ಥಳದಲ್ಲಿಯೇ ಸ್ಲಂಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.

ನಿವಾಸಿಗಳ ದೂರುಗಳೆಲ್ಲವನ್ನೂ ಆಲಿಸಿದ ಶಾಸಕರು, ರಸ್ತೆ ಡಾಂಬರೀಕರಣ, ಅಲ್ಲಲ್ಲಿ ಹಂಪ್‍ಗಳನ್ನು ಅಳವಡಿಕೆ, ಮ್ಯಾನ್‍ಹೋಲ್‍ಗೆ ಗಲೀಜು ಬಿಸಾಡುವ ಮಾಂಸದ ಅಂಗಡಿಯವರಿಗೆ ನೋಟಿಸ್ ಕೊಟ್ಟು ಗಲೀಜು ಹಾಕಿದರೆ ಅಂಗಡಿ ತೆರವು ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀದಿ ದೀಪದ ಕಂಬಗಳಿದ್ದರೂ ದೀಪಗಳಿಲ್ಲದೆ ಕಗ್ಗತ್ತಲು ಆವರಿಸಿ ಜನರು ಓಡಾಡಲು ತೊಂದರೆಯಾಗಿರುವ ಬಗೆಗಿನ ದೂರಿಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಇಬಿ ಅಧಿಕಾರಿಗೆ ಹಾಗೂ ಕುಸಿದಿರುವ ಮ್ಯಾನ್‍ಹೋಲ್‍ಗಳನ್ನು ತಕ್ಷಣ ದುರಸ್ಥಿಗೊಳಿಸಲು ಕಾಮಗಾರಿ ಕೈಗೊಳ್ಳುವಂತೆ ಯುಜಿಡಿ ಅಧಿಕಾರಿಗೆ ತಾಕೀತು ಮಾಡಿದರು.

ನರ್ಮ್ ಯೋಜನೆಯ ಮನೆಗಳ ಮುಂಭಾಗದಲ್ಲಿಯೇ ಗುಡಿಸಲುಗಳು ತಲೆ ಎತ್ತಿರುವ ಬಗ್ಗೆ ಅಸಮಾಧಾನಗೊಂಡ ಶಾಸಕರು, ಗುಡಿಸಲು ಮುಕ್ತಗೊಳಿಸುವ ಉದ್ದೇಶದಿಂದ ನರ್ಮ್ ಮನೆಗಳನ್ನು ನಿರ್ಮಿಸಿ ಮನೆಗಳನ್ನು ವಿತರಿಸಿದ್ದರೂ, ಇಲ್ಲಿ ಗುಡಿಸಲುಗಳಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಕ್ಷಣವೇ ಇಲ್ಲಿರುವ ನಿವಾಸಿಗಳ ಮಾಹಿತಿ ಪಡೆದು ಗುಡಿಸಲುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು.

ಮೇಟಗಳ್ಳಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಯಿಂದ ಪಾದಯಾತ್ರೆ ಕೈಗೊಂಡ ಶಾಸಕ ನಾಗೇಂದ್ರ, ಮಧ್ಯಾಹ್ನದವರೆಗೆ ಮೇಟಗಳ್ಳಿ, ಹರಿಜನ ಕಾಲೋನಿ, ಬಿಎಂಶ್ರೀ ನಗರ, ನರ್ಮ್ ಮನೆಗಳು, ಅಂಬೇಡ್ಕರ್ ಜ್ಞಾನಲೋಕ, ಕರಕುಶಲನಗರ ಇನ್ನಿತರ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡರು.

ಈ ವೇಳೆ ರಸ್ತೆ ಅಗಲೀಕರಣ, ಶಿಥಿಲ ವಿದ್ಯುತ್ ಕಂಬಗಳ ತೆರವು, ಶೇ.18ರ ಅಡಿಯಲ್ಲಿ ರಾಮಮಂದಿರ ದುರಸ್ಥಿ, ಚರಂಡಿಗಳಲ್ಲಿ ಸೊಳ್ಳೆಗಳ ಕಾಟ, ಪಾರ್ಥೇನಿಯಂ ಗಿಡಗಳ ತೆರವು, ಮನೆಗಳಿಗೆ ಖಾತೆ ಮಾಡಿಸಬೇಕು. ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಅರ್ಧಕ್ಕೆ ಸ್ಥಗಿತಗೊಂಡಿರುವ 60ರಿಂದ 70 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು.

ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ, ವಿದ್ಯುತ್ ಸಂಪರ್ಕ, ಅತ್ಯಂತ ಕಿರಿದಾಗಿರುವ ಮೇಟಗಳ್ಳಿ -ರೈಲ್ವೆ ಗೇಟ್ ರಸ್ತೆ, ರಸ್ತೆ ಅತಿಕ್ರಮಣ ತೆರವುಗೊಳಿಸಬೇಕು ಎಂಬಿತ್ಯಾದಿ ದೂರುಗಳನ್ನು ಪರಿಶೀಲಿಸಿ ಶೀಘ್ರ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.

ಭಾರತ್ ಆಯಿಲ್ ಕಾರ್ಪೋರೇಷನ್‍ನವರು ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿರುವ ಬಗ್ಗೆ ದೂರುಗಳಿದ್ದು, ಜಾಗದ ಬಗ್ಗೆ ಸರ್ವೆ ಮಾಡಿಸಿ, ಅದು ಸಾರ್ವಜನಿಕ ರಸ್ತೆಯಾಗಿದ್ದರೆ ತಕ್ಷಣವೇ ತೆರವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಹಲವು ಕಡೆಗಳಲ್ಲಿ ಚರಂಡಿ ಇದ್ದರೂ ಪ್ರಯೋಜನವಿಲ್ಲ. ರಸ್ತೆ ಇದೆ ಓಡಾಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಮುಡಾದಿಂದ 25 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಚರಂಡಿಗಳನ್ನು ನಿರ್ಮಿಸಲು 25 ಲಕ್ಷ ರೂ. ಅಂದಾಜು ಪಟ್ಟಿ ಸಿದ್ಧವಾಗಿದೆ. ನಗರಪಾಲಿಕೆಯಿಂದ 2 ಪ್ರಸ್ತಾವನೆಗಳನ್ನು ಈಗಾಗಲೇ ಸಲ್ಲಿಸಿದ್ದು, ಅವುಗಳಿಗೆ ಅನುಮೋದನೆ ದೊರೆತಿದೆ. ಇದರಲ್ಲಿ 130 ಮೀಟರ್, 200 ಎಂಎಂನ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಇನ್ನೊಂದು ವಾರದಲ್ಲಿ ಪ್ರಾರಂಭಿಸುವುದಾಗಿ ಹೇಳಿದರು.

ಮೈನಾರಿಟಿ ಫಂಡ್‍ನಿಂದ ಎರಡು ರಸ್ತೆಗಳಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ಪ್ರಾರಂಭವಾಗಿದೆ. ಚಾಮರಾಜ ಕ್ಷೇತ್ರವನ್ನು ಗುಡಿಸಲು ರಹಿತ ಮಾಡುವ ನಿಟ್ಟಿನಲ್ಲಿ ಗುಡಿಸಲು ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕರಕುಶಲ ನಗರದಲ್ಲಿ ಸಂಸದರ ನಿಧಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ನೆಲಕ್ಕೆ ಟೈಲ್ಸ್ ಹಾಕುವ ಕಾಮಗಾರಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಬಿಡುಗಡೆಗೊಳಿಸಲು ಮನವಿ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಮೇಟಗಳ್ಳಿ ಹರಿಜನ ಕಾಲೋನಿಯಲ್ಲಿ ಕಾಲು ಮುರಿದುಕೊಂಡು ಅತಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಪದ್ಮ ಎಂಬುವರಿಗೆ 2500 ರೂ.ಧನ ಸಹಾಯ ನೀಡಿದರು. ಸರ್ಕಾರದ ಯೋಜನೆಯಿಂದ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸುವ ಭರವಸೆ ನೀಡಿದರು. ಬಿಎಂಶ್ರೀನಗರ ನರ್ಮ್ ಯೋಜನೆ ಸಮುದಾಯ ಭವನದಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ 100 ಮಂದಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್‍ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ವಲಯ 5ರ ಸಹಾಯಕ ಆಯುಕ್ತ ನಾಗರಾಜು, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಪಾಲಿಕೆ ಮಾಜಿ ಸದಸ್ಯ ದೇವರಾಜ್, ಮುಖಂಡರಾದ ಸೋಮಶೆಖರ ರಾಜು, ಚಿಕ್ಕವೆಂಕಟು, ನಂಜಪ್ಪ, ಮಧು, ಮೂರ್ತಿ, ರವಿ, ಪುಟ್ಟ, ಶೋಭಾ, ಗೋವಿಂದರಾಜು, ಕಿರಣ್‍ಗೌಡ ಇನ್ನಿತರರು ಇದ್ದರು.

Translate »