ನಿವೇಶನ, ವಸತಿ ರಹಿತರ ಪಟ್ಟಿ ಸಿದ್ದಪಡಿಸಲು ಶಾಸಕ ಅಪ್ಪಚ್ಚು ರಂಜನ್ ಸೂಚನೆ
ಕೊಡಗು

ನಿವೇಶನ, ವಸತಿ ರಹಿತರ ಪಟ್ಟಿ ಸಿದ್ದಪಡಿಸಲು ಶಾಸಕ ಅಪ್ಪಚ್ಚು ರಂಜನ್ ಸೂಚನೆ

August 1, 2018

ಸೋಮವಾರಪೇಟೆ: ಮುಂದಿನ 5 ವರ್ಷದೊಳಗೆ ತಾಲೂಕಿನ ಎಲ್ಲರಿಗೂ ನಿವೇಶನ ಮತ್ತು ಸ್ವಂತ ಮನೆ ಒದಗಿಸುವ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಪಟ್ಟಿ ಸಿದ್ಧಗೊಳಿಸಬೇಕು ಎಂದು ಶಾಸಕ ರಂಜನ್ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹತ್ತಾರು ಎಕರೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ತಹಸೀಲ್ದಾರ್ ಮಹೇಶ್ ಅವರಿಗೆ ಶಾಸಕರು ನಿರ್ದೇಶನ ನೀಡಿದರು.

ಇದರೊಂದಿಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸಬೇಕು ಎಂದು ಸಭೆ ಯಲ್ಲಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ರಂಜನ್ ಸೂಚಿಸಿದರು.
ಸೋಮವಾರಪೇಟೆ ಪಪಂಗೆ ಸಂಬಂಧಿಸಿ ದಂತೆ ಸೆಪ್ಟೆಂಬರ್ ಅಂತ್ಯದೊಳಗೆ ತ್ಯಾಜ್ಯ ವಿಲೇ ವಾರಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವದು ಎಂದು ಮುಖ್ಯಾಧಿ ಕಾರಿ ನಾಚಪ್ಪ ಅವರಿಗೆ ರಂಜನ್ ನಿರ್ದೇಶಿಸಿದರು.
ಸೋಮವಾರಪೇಟೆ, ಕುಶಾಲನಗರ, ಶನಿವಾರ ಸಂತೆ, ಸುಂಟಿಕೊಪ್ಪ ಸೇರಿದಂತೆ ಎಲ್ಲೆಡೆ ವ್ಯಾಪಕ ವಾಗಿ ಗಾಂಜಾ ಸೇವನೆ ನಡೆಯುತ್ತಿದೆ. ಈ ಬಗ್ಗೆ ನಮಗೆ ಹಲವಷ್ಟು ದೂರುಗಳು ಬಂದಿವೆ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ನಿರ್ದೇಶನ ನೀಡಿದರು.

ಸೋಮವಾರಪೇಟೆಯ ಜೂನಿಯರ್ ಕಾಲೇಜು ಬಳಿಯಲ್ಲೇ ವ್ಯಸನಿಗಳ ಅಡ್ಡೆ ಇರುತ್ತದೆ. ಗಾಂಜಾ ಮಾರುವವನ ಮೂಲ ಹುಡುಕಿ ಮಟ್ಟ ಹಾಕ ಬೇಕು. ತಕ್ಷಣ ಇದಕ್ಕೆ ಕಡಿವಾಣ ಹಾಕಿ. ಕ್ರೈಂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಎಂದು ಶಾಸಕ ಅಪ್ಪಚ್ಚುರಂಜನ್ ಸೂಚಿಸಿದರು.

ರಿಕ್ರಿಯೇಷನ್ ಕ್ಲಬ್‍ಗಳ ಹೆಸರಿನಲ್ಲಿ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜು ಆಡು ತ್ತಿರುವ ಬಗ್ಗೆ ದೂರುಗಳು ಬಂದಿವೆ. ಶನಿವಾರ ಸಂತೆಯಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ತಾಪಂ ಸದಸ್ಯರೋರ್ವರೇ ಇದರಲ್ಲಿ ಭಾಗಿಯಾಗಿರುವ ಮಾತುಗಳು ಕೇಳಿಬಂದಿವೆ. ಅಕ್ರಮಗಳಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾ ಜಿಲ್ಲದೇ ಕ್ರಮ ಜರುಗಿಸಿ ಎಂದು ಶಾಸಕರು ಪೊಲೀಸ್ ಇಲಾಖೆಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಕೊಡ್ಲಿಪೇಟೆ ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಅಡುಗೆ ಸಹಾಯಕ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ತಕ್ಷಣ ವಾರ್ಡನ್ ಅವರನ್ನು ಸೇವೆಯಿಂದ ಅಮಾನತು ಗೊಳಿಸಲು ಶಿಫಾರಸ್ಸು ಮಾಡವಂತೆ ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಅವರಿಗೆ ಶಾಸಕರು ಸೂಚಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಕಾರ್ಯನಿರ್ವಹಣಾ ಧಿಕಾರಿ ಸುನಿಲ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ತಹಸೀಲ್ದಾರ್ ಮಹೇಶ್, ನಾಮ ನಿರ್ದೇಶಿತ ಸದಸ್ಯರಾದ ಧರ್ಮಪ್ಪ, ಪ್ರಭಾ ಅವರುಗಳು ಉಪಸ್ಥಿತರಿದ್ದರು.

Translate »