ಬೆಂಗಳೂರು, ಜು.4- ಮಾಜಿ ಸಚಿವ, ಹಾಲಿ ಶಾಸಕರೂ ಆದ ದಲಿತ ನಾಯಕ ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾ ಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯ ಘಟಕವನ್ನು ಪುನರ್ ರಚಿಸಿದ್ದು, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಯುವ ಜನತಾ ದಳದ ಸಾರಥ್ಯ ವಹಿಸಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ಮಧು ಬಂಗಾರಪ್ಪ ಅವರಿಗೆ ಕಾರ್ಯಾಧ್ಯಕ್ಷ ಜವಾಬ್ದಾರಿ ವಹಿಸಿ ರಾಜ್ಯದ ಎಲ್ಲಾ ಭಾಗ ಹಾಗೂ ಸಮುದಾಯಗಳಿಗೆ ಪದಾಧಿಕಾರಿ ಗಳ ಹುದ್ದೆಯಲ್ಲಿ ಪಾಲು ನೀಡಿದ್ದಾರೆ.
ಎಚ್.ವಿಶ್ವನಾಥ್ ಅವರಿಂದ ತೆರವಾದ ರಾಜ್ಯಾಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷರ ಮೂಲಕ ವಹಿಸಿಕೊಂಡರು. ಪದಾಧಿಕಾರಿ ಗಳ ನೇಮಕ ಪ್ರಕಟಣೆ ಮೂಲಕ ದೇವೇ ಗೌಡರು, ಪಕ್ಷ ಸಂಘಟನೆ ಜೊತೆಗೆ ಚುನಾ ವಣೆ ಎದುರಿಸಲೂ ಸಜ್ಜಾಗಿದ್ದೇವೆ ಎಂಬ ಸಂದೇಶ ರವಾನಿಸಿದರು. ಒಂದೆಡೆ ಮೈತ್ರಿ ಪಕ್ಷಗಳ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಬಿಜೆಪಿ ಕಸರತ್ತು ನಡೆಸಿದ್ದರೆ, ಮತ್ತೊಂದೆಡೆ ಗೌಡರು, ಸಮ್ಮಿಶ್ರ ಸರ್ಕಾರ ಭದ್ರಗೊಳಿಸುವ ಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಟ್ಟಿದ್ದಾರೆ.
ಇದಲ್ಲದೆ ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿ ಮಾಜಿ ಸಚಿವ ಎನ್.ಎಂ.ನಬಿ ಹಾಗೂ ಶಾಸಕರಾದ ಕೆ.ಗೋಪಾಲಯ್ಯ ಅವರನ್ನು ನೇಮಕ ಮಾಡಲಾಗಿದ್ದು, ಹನೂರಿನ ಆರ್.ಮಂಜುನಾಥ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಎನ್.ಎಂ.ನೂರ್ ಅಹ್ಮದ್ ಅವರನ್ನು ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಆಪರೇಷನ್ ಕಮಲ ಕಾರ್ಯಾಚರಣೆಯ ಆಡಿಯೋ ಬಾಂಬ್ ಸಿಡಿಯಲು ಪ್ರಮುಖ ಕಾರಣರಾಗಿದ್ದ ಶರಣಗೌಡ ಕಂದಕೂರ್ ಅವರನ್ನು ಯುವ ಜೆಡಿಎಸ್ ಘಟಕದ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ನರಸಿಂಹಮೂರ್ತಿ ಅವರನ್ನು ಜೆಡಿಎಸ್ ಯುವ ಘಟಕದ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಮಾಜಿ ಶಾಸಕ ಸುರೇಶ್ ಬಾಬು ಅವರನ್ನು ರಾಜ್ಯ ಬೂತ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ ನಾಸಿರ್ ಭಗವಾನ್ ಅವರನ್ನು ನೇಮಕ ಮಾಡಿದ್ದಲ್ಲದೆ, ಇಂದೇ ಅವರುಗಳಿಗೆ ಅಧಿಕಾರ ಹಸ್ತಾಂತರ ಆಗುವಲ್ಲಿಯೂ ದೇವೇಗೌಡರು ಆಸಕ್ತಿ ವಹಿಸಿದರು.
ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ಸೋತರೂ ನಾವು ಹತಾಶರಾಗಿಲ್ಲ, ಸೋಲು ಯಾರಿಗೂ ಶಾಶ್ವತವಲ್ಲ, ಪಕ್ಷದ ಸಂಕಷ್ಟ ದಿನಗಳಲ್ಲೂ ದೇವೇಗೌಡರು ಎದೆಗುಂದಲಿಲ್ಲ ಎಂದರು.
ವಿಧಾನಸಭೆಯಲ್ಲಿ ಇದ್ದ ಎರಡು ಸ್ಥಾನದಿಂದ ಪಕ್ಷವನ್ನು ಅಧಿಕಾರಕ್ಕೆ ತಂದರು, ಮತ್ತೆ 2004ರಲ್ಲಿ ಪಕ್ಷ ಸಂಘಟಿಸಿ ಅಧಿಕಾರ ಹಂಚಿಕೊಂಡಿದ್ದೆವು. ದೇವೇಗೌಡರ ಸ್ಫೂರ್ತಿ ನನ್ನ ಕಾರ್ಯಕ್ಕೆ ಚೈತನ್ಯ ನೀಡಲಿದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿಖಿಲ್‍ಕುಮಾರಸ್ವಾಮಿ, ಮಂಡ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ಪಕ್ಷದ ಪರ ನಿಂತಿದ್ದಾರೆ, ನನಗೆ ಮತ ಹಾಕದವರ ಮನಸ್ಸು ಗೆಲ್ಲುವ ಕೆಲಸ ಮಾಡುತ್ತೇನೆ ಎಂದರು.