ಮೈಷುಗರ್‌ಗೆ ಶಾಸಕ ಎಂ.ಶ್ರೀನಿವಾಸ್ ದಿಢೀರ್ ಭೇಟಿ: ಜನರಲ್ ಮ್ಯಾನೇಜರ್‌ಗೆ ತರಾಟೆ
ಮಂಡ್ಯ

ಮೈಷುಗರ್‌ಗೆ ಶಾಸಕ ಎಂ.ಶ್ರೀನಿವಾಸ್ ದಿಢೀರ್ ಭೇಟಿ: ಜನರಲ್ ಮ್ಯಾನೇಜರ್‌ಗೆ ತರಾಟೆ

September 22, 2018

ಮಂಡ್ಯ:  ಮೈಷುಗರ್ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂ.ಶ್ರೀನಿವಾಸ್ ಅವರು ಜನರಲ್ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗ ಇಂದು ನಡೆಯಿತು.

ಗುರುವಾರ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ರೈತರು ಅಹವಾಲುಗಳನ್ನು ಹೇಳುವಾಗ ಕಬ್ಬು ಬೆಳೆಗಾರರ ದೂರುಗಳೇ ಹೆಚ್ಚಿದ್ದವು. ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ವಿಳಂಬವಾಗುತ್ತಿದ್ದು, ಕಟಾವು ಮಾಡಿ ಕಾರ್ಖಾನೆಗೆ ತಂದ ಕಬ್ಬು ಇಳುವರಿ ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆಗಾರನಿಗೆ ನಷ್ಟವುಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರ್ಖಾನೆಗೆ ಭೇಟಿ ನೀಡಿ ವ್ಯವಸ್ಥಾಪಕರಿಂದ ಮಾಹಿತಿ ಪಡೆಯಲು ಮುಂದಾದರು. ಶಾಸಕರ ಅನಿರೀಕ್ಷಿತ ಭೇಟಿಯಿಂದ ಸೂಕ್ತ ಮಾಹಿತಿ ಒದಗಿಸಲು ತಡಕಾಡಿದ ಜನರಲ್ ಮ್ಯಾನೇಜರ್ ಬೋರೇಗೌಡ ಅವರು ಕಾರ್ಖಾನೆಯಲ್ಲಿ ನಿನ್ನೆ ಕೆಲ ತಾಂತ್ರಿಕ ದೋಷ ಉಂಟಾ ಗಿತ್ತು. ನಿನ್ನೆ ರಾತ್ರಿ 10.30ರಲ್ಲಿ ಕಬ್ಬು ನುರಿಸುವಿಕೆ ಆರಂಭವಾಗಿದೆ ಎಂದರು.

ಹಳೇ ಎಂ.ಸಿ.ರಸ್ತೆ ಬಳಿ ಕಾರ್ಖಾನೆಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಒಡೆದು ಹೋಗಿ ನೀರಿನ ಸಮಸ್ಯೆ ಉಂಟಾಗಿದ್ದು ಅದನ್ನು ಕೂಡಲೇ ಸರಿಪಡಿಸಿ ಕಬ್ಬು ಅರೆಯುವಿಕೆಯನ್ನು ಆರಂಭಿಸಲಾಯಿತು. ಆನಂತರ ಗಂಟೆಗೆ 100 ಟನ್‍ನಷ್ಟು ಕಬ್ಬು ಅರೆಯಲಾಗುತ್ತಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು.

ಇದರಿಂದ ಕೆರಳಿದ ಶಾಸಕರು, `ನೀವು ನನ್ನ ಕರೆಗೆ ಸ್ಪಂದಿಸುತ್ತಿಲ್ಲ. ನಾನು ಕೇಳಿದ ಮಾಹಿತಿಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ನಿಮಗೆ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ ವೆಂದರೆ ಹೇಳಿ ಬಿಡಿ. ಕಾರ್ಖಾನೆಯನ್ನು ನಿಲ್ಲಿಸಿ ಬಿಡೋಣ. ರೈತನೊಬ್ಬ ನನಗೆ ಕರೆ ಮಾಡಿ ಅಣ್ಣ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿಧಾನಗತಿಯಲ್ಲಿ ಸಾಗಿದೆ. ನಮ್ಮ ಗೋಳು ಕೇಳೋರಿಲ್ಲ, ಒಣಗುತ್ತಿರುವ ಕಬ್ಬನ್ನು ಕೂಡಲೆ ನುರಿಸದಿದ್ದರೆ ಶುಕ್ರವಾರ ಬೆಳಿಗ್ಗೆ ಕಾರ್ಖಾನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಅವಲತ್ತುಕೊಂಡಿದ್ದಾನೆ. ಆತನಿಗೆ ಏನು ಉತ್ತರ ಕೊಡುತ್ತೀರೋ? ಕೊಡಿ ಎಂದು ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್ ಬೋರೇಗೌಡ ಅವರು, ಅಂತಹ ಯಾವುದೇ ದೂರು ನನ್ನ ಮುಂದೆ ಬಂದಿಲ್ಲ. ನಾವು ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಗೆ ಆದ್ಯತೆ ನೀಡಿದ್ದೇವೆ. ಇದರಲ್ಲಿ ಸಣ್ಣಪುಟ್ಟ ಲೋಪದೋಷ ಆಗಿರಬಹುದು. ಆದರೆ ಅದು ಗಂಭೀರ ಸಮಸ್ಯೆಯಾಗಿಲ್ಲ. ನಿನ್ನೆ ಗುರುವಾರ ಮಾತ್ರ ಒಂದು ದಿನದ ಮಟ್ಟಿಗೆ ಕಬ್ಬು ಕಟಾವು ಮಾಡದಂತೆ ಒಪ್ಪಿಗೆದಾರ ರಿಗೆ ತಿಳಿಸಿದ್ದೇವೆ. ಸದ್ಯ ಯಾರ್ಡ್‍ನಲ್ಲಿ ಕಬ್ಬು ತುಂಬಿದ 40 ಲಾರಿಗಳು, 15 ಎತ್ತಿನ ಗಾಡಿಗಳಿವೆ. ಇನ್ನು 60 ಟಿಕೆಟ್ ಬಾಕಿ ಇದೆ. ಇದರೊಂದಿಗೆ ಯಾರ್ಡ್‍ನಲ್ಲಿ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿ ವಾಸ್ ಅವರು ತಮಗೆ ಕರೆಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ರೈತನನ್ನು ಸಂಪರ್ಕಿಸಿ ಕಾರ್ಖಾನೆಗೆ ಬರಹೇಳಲು ಪ್ರಯತ್ನಿಸಿದರಾದರೂ ರೈತ ಕರೆ ಸ್ವೀಕರಿಸ ಲಿಲ್ಲ ಎಂದು ತಿಳಿದು ಬಂದಿದೆ.

Translate »