ದಲಿತರೊಂದಿಗೆ ಬಹಿರಂಗ ಸಂವಾದ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ
ಮಂಡ್ಯ

ದಲಿತರೊಂದಿಗೆ ಬಹಿರಂಗ ಸಂವಾದ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ

July 2, 2018

ಮಂಡ್ಯ: ಇದೇ ಪ್ರಥಮ ಬಾರಿಗೆ ಪರಿಶಿಷ್ಠ ಜಾತಿ ಮತ್ತು ಪಂಗಡದವರೊಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ನಡೆಸಿದ ಸಂವಾದದಲ್ಲಿ ಸಮಸ್ಯೆಗಳ ಮಹಾ ಪೂರವೇ ಹರಿದು ಬಂತು..!

ನಗರದ ಗಾಂಧಿ ಭವನದಲ್ಲಿಂದು ಆಯೋ ಜಿಸಲಾಗಿದ್ದ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದವರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಕಾವೇರಿ ನದಿ ದಡದಲ್ಲಿದ್ದರೂ ಮಹದೇವಪುರಕ್ಕೆ ಶುದ್ಧ ಕುಡಿಯುವ ನೀರೇ ಇಲ್ಲಾ…. ಸ್ಮಶಾನ ಒತ್ತುವರಿಯಾಗಿದ್ದು ಹೆಣ ಹೂಳಲು ಜಾಗವೇ ಇಲ್ಲ…ರಸ್ತೆ, ಚರಂಡಿ ಮಾಡಿಸಿ ಕೊಡಿ… ನಿರಂತರ ದೌರ್ಜನ್ಯ ನಡೆಯುತ್ತಿವೆ.. ಸರಿಯಾಗಿ ಸೌಲಭ್ಯಗಳೇ ಸಿಗುತ್ತಿಲ್ಲ.. ಇತ್ಯಾದಿ ದೂರುಗಳು ಶಾಸಕರ ಎದುರಿಗೆ ಕೇಳಿ ಬಂದವು…

ಎಸ್‍ಡಿಜೆ ಬಳಿಕ ನೀವೇ ಮೊದಲು: ಸಂವಾದದಲ್ಲಿ ತಾಪಂ ಮಾಜಿ ಸದಸ್ಯ ಗುರು ಸಿದ್ದಯ್ಯ ಮಾತನಾಡಿ, 1985ರಲ್ಲಿ ಎಸ್.ಡಿ. ಜಯರಾಂ ಅವರು ದಲಿತರೊಂದಿಗೆ ಸಂವಾದ ನಡೆಸಿ ಸಮಸ್ಯೆ ತಿಳಿದುಕೊಂಡಿ ದ್ದರು. ಈಗ ನೀವು ಈ ಕಾರ್ಯಕ್ರಮ ಮಾಡು ತ್ತಿರುವುದು ನಮಗೆ ಅಭಿವೃದ್ಧಿಗೆ ದಾರಿ ಸಿಕ್ಕಂತಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲದೆ ತೊಂದರೆಯಾಗಿದೆ. ದಯವಿಟ್ಟು ಪ್ರತಿ ಗ್ರಾಮಕ್ಕೂ ದಲಿತರಿಗೆ ಸ್ಮಶಾನ ಮೀಸಲಿಟ್ಟು, ಒತ್ತುವರಿ ಮಾಡದಂತೆ ಕ್ರಮವಹಿಸಬೇಕು. ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ರಾಪಂಗಳು ಖರ್ಚು ಮಾಡದೆ ಮರಳಿ ಸರ್ಕಾರಕ್ಕೆ ಹೋಗುತ್ತಿದೆ ಈ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಯಾವ್ಯಾವ ಗ್ರಾಮಗಳಲ್ಲಿ ಸ್ಮಶಾನದ ಜಾಗದ ಸಮಸ್ಯೆ ಯಿದೆ ಮಾಹಿತಿ ಕೊಡಿ, ಅಳತೆ ಮಾಡಿಸಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ, ಸ್ಮಶಾನವಿಲ್ಲದ ಗ್ರಾಮಗಳಿಗೆ ಸರ್ಕಾರದಿಂದ ಜಾಗ ನೀಡುವಂತೆ ಕ್ರಮವಹಿಸುತ್ತೇನೆ ಎಂದರು.

ಕಾವೇರಿ ಹೊಳೆ ಪಕ್ಕದಲ್ಲಿದ್ದರೂ ಶುದ್ಧ ನೀರಿಲ್ಲ: ಕಾವೇರಿ ನದಿ ಪಕ್ಕದಲ್ಲಿಯೇ ಇದ್ದರೂ ಮಹದೇವಪುರ ಗ್ರಾಮಕ್ಕೆ ಶುದ್ಧ ಕುಡಿ ಯುವ ನೀರಿಲ್ಲ. ದಲಿತ ಕೇರಿಗಳು ಮೂಲ ಸೌಕರ್ಯಗಳನ್ನು ಪಡೆಯದೆ ಹಿಂದುಳಿದಿವೆ. ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಮಾಡಿಕೊಡಬೇಕು. ಜೊತೆಗೆ ಬಹು ತೇಕ ಪರಿಶಿಷ್ಟ ಯುವಕರು ಜಮೀನು ಇಲ್ಲದೆ ಸರ್ಕಾರಿ ಉದ್ಯೋಗ ಪಡೆಯಲಾಗದೇ ಅವರ ಜೀವನ ಅತಂತ್ರವಾಗಿದೆ. ಸರ್ಕಾರದ ಗೋಮಾಳ ಜಾಗವನ್ನು ಭೂಮಿ ಇಲ್ಲದವರಿಗೆ ನೀಡಿ ಕೃಷಿ ಕೆಲಸ ಮಾಡಲು ಅನುಕೂಲ ಮಾಡಿ ಕೊಡಬೇಕು ಎಂದು ಗ್ರಾಮದ ಮಹದೇವ ಸ್ವಾಮಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸರ್ಕಾರ 1963ರಲ್ಲಿ ಪರಿ ಶಿಷ್ಟರಿಗೆ ಜಮೀನಿನ ಹಕ್ಕು ಪತ್ರ ನೀಡಿದ್ದರೂ, ಆ ಜಮೀನು ಪಡೆದುಕೊಳ್ಳಲಾಗದೇ ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಮೂಲಕ ಹಕ್ಕುಪತ್ರ ಹೊಂದಿದವರಿಗೆ ಭೂಮಿ ಕೊಡುವಂತೆ ಮಾಡುತ್ತೇನೆ. ಮಹದೇವ ಪುರಕ್ಕೆ ಶುದ್ಧ ನೀರು ಕೊಡಿಸಲು ಬದ್ದನಾ ಗಿದ್ದೇನೆ. ನಂತರ ಸರ್ಕಾರದ ಗೋಮಾಳ ಭೂಮಿಯನ್ನು ಭೂರಹಿತ ದಲಿತರಿಗೆ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸು ತ್ತೇನೆ ಎಂದು ಭರವಸೆ ನೀಡಿದರು.
ಜಕ್ಕನಹಳ್ಳಿ ಗ್ರಾಮದ ದೇವರಾಜು ಮಾತನಾಡಿ 2014ರಲ್ಲಿ ಯುಗಾದಿ ಹಬ್ಬ ದಂದು ದಲಿತರು ದೇವಸ್ಥಾನಕ್ಕೆ ಪ್ರವೇಶ ಮಾಡಿ ದರು ಎಂಬ ಕಾರಣಕ್ಕೆ ನಮ್ಮ ಮೇಲೆ ತೀವ್ರ ವಾದ ಹಲ್ಲೆ ಮಾಡಿದ್ದಾರೆ. ಈ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗಿದ್ದು, ನಮಗೆ ಇನ್ನೂ ಸಾಮಾಜಿಕ ನ್ಯಾಯ ಸಿಗದೆ ಪರಿತಪಿ ಸುವಂತಾಗಿದೆ. ಈ ಕುರಿತು ಶಾಸಕರು ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಗ್ರಾಮದ ದಲಿತರಿಗೆ ಹೆಚ್ಚಿನ ರಕ್ಷಣೆ ಒದಗಿಸಿ ಭಯಮುಕ್ತ ಜೀವನ ನಡೆಸಲು ಭದ್ರತೆ ಒದಗಿಸುವುದಾಗಿ ಹೇಳಿದರು.

ಬಾಬುರಾಯನಕೊಪ್ಪಲಿನ ಕುಮಾರ್ ಮಾತನಾಡಿ ಗ್ರಾಪಂ, ಪುರಸಭೆ, ತಾಪಂಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಸಫಾಯಿ ಕರ್ಮ ಚಾರಿಗಳಿಗೆ ಸರ್ಕಾರ 12 ಸಾವಿರ ವೇತನ ನಿಗದಿ ಮಾಡಿದ್ದರೂ ಗ್ರಾಪಂಗಳಲ್ಲಿ ಕೇವಲ ನಾಲ್ಕರಿಂದ ಎಂಟು ಸಾವಿರ ಹಣ ನೀಡುತ್ತಾರೆ. ಮಾಸಿಕ ಆರೋಗ್ಯ ತಪಾಸಣೆಗೆ 1,500 ಹಣ ನೀಡಬೇಕು ಇದನ್ನು ಕೂಡ ಕೊಡು ವುದಿಲ್ಲ. ಯಾವುದಾದರೂ ಸಂಘ ಸಂಸ್ಥೆ ಗಳು ನಡೆಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿ ಸುತ್ತಾರೆ. ಬಹುತೇಕ ಸಫಾಯಿ ಕರ್ಮಚಾರಿ ಗಳು ನಿವೃತ್ತಿ ವಯಸ್ಸಿನವರೆಗೆ ಕೆಲಸ ಮಾಡಲು ಸಾಧ್ಯವಾಗದೆ ಅರ್ಧದಲ್ಲೇ ರೋಗದಿಂದ ಸಾವನ್ನಪ್ಪುತ್ತಾರೆ ಇದಕ್ಕೆ ನ್ಯಾಯ ಒದಗಿ ಸಬೇಕು ಎಂದರು.

ಶಾಸಕರು ಮಾತನಾಡಿ ಯಾವುದೇ ಸಫಾಯಿ ಕರ್ಮಾಚಾರಿಗಳು ಕನಿಷ್ಟ ಏಳನೇ ತರಗತಿ ಉತ್ತೀರ್ಣರಾಗಿದ್ದರೆ ಅವರಿಗೆ ನೇರ ವಾಗಿ ಸರ್ಕಾರವೇ ಸಂಬಳ ನೀಡುತ್ತದೆ. ಇನ್ನು ಆರೋಗ್ಯ ವಿಚಾರ ಗಂಭೀರವಾಗಿದ್ದು, ಈ ಕುರಿತು ಸದನದಲ್ಲಿ ಚರ್ಚಿಸಿ ಸೂಕ್ತ ಆರೋಗ್ಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಮುಖಂಡರಾದ ಸಂತೆಕಸಲಗೆರೆ ಸಿದ್ದಯ್ಯ, ಟಿ.ಡಿ.ಬಸವರಾಜು, ಎಸ್.ಡಿ.ಜಯರಾಂ, ಶಿವಕುಮಾರ್ ಇದ್ದರು.

Translate »