ಕಲಿಯುವ ಆಸಕ್ತಿ ಇದ್ದರೆ ವ್ಯವಸ್ಥೆ ತಾನಾಗೆ ಲಭ್ಯವಾಗುತ್ತದೆ
ಮೈಸೂರು

ಕಲಿಯುವ ಆಸಕ್ತಿ ಇದ್ದರೆ ವ್ಯವಸ್ಥೆ ತಾನಾಗೆ ಲಭ್ಯವಾಗುತ್ತದೆ

June 27, 2018

ಮೈಸೂರು: ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಸ್ನೇಹ ಸಿಂಚನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್.ಎ.ರಾಮದಾಸ್ ಮಾತನಾಡುತ್ತಾ, ಪಾಶ್ಚಿಮಾತ್ಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳುವ ಈ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಜ್ಞಾನದ ಜ್ಯೋತಿಯನ್ನು ಹಚ್ಚುವುದರ ಮೂಲಕ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರನ್ನು ಸ್ವಾಗತಿಸಿದ್ದು ವಿಶೇಷವಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಆಹ್ಲಾದಕರವಾಗಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶ್ರೀಗಳು ಪುಟ್ಟ ಭಾರತವನ್ನೇ ನಿರ್ಮಾಣ ಮಾಡಿದ್ದಾರೆ ಎಂದು ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು.

ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಯುವಜನಾಂಗ ಈ ದೇಶದ ಆಸ್ತಿಯಾಗಿ ಮಾನವ ಸಂಪನ್ಮೂಲವಾಗಿ ಪರಿವರ್ತನೆಯಾಗುತ್ತಿದೆ. ಕಲಿಯುವ ಆಸೆ ಇದ್ದಾಗ ವ್ಯವಸ್ಥೆ ತಾನಾಗೇ ಸಿಗುತ್ತದೆ. ಇದರ ಸದ್ಬಳಕೆಯನ್ನು ಮಾಡಿಕೊಳ್ಳುವುದು ವಿದ್ಯಾರ್ಥಿನಿಯರ ಕರ್ತವ್ಯ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಕಷ್ಟದಲ್ಲಿ ಬಂದು, ಜೀವನವನ್ನು ಸವಾಲಾಗಿ ಸ್ವೀಕರಿಸಿ ಸಮಾಜದ ಕಾರ್ಯವನ್ನು ಮಾಡಬೇಕು. ಜಾತಿ, ಮತಗಳನ್ನು ಮೀರಿ ವಿದ್ಯಾರ್ಥಿಗಳು ಗುರಿ ಮತ್ತು ಸವಾಲುಗಳನ್ನು ಬೆಳೆಸಿಕೊಳ್ಳಬೇಕು. ಬದುಕಿನ ಕಲೆಯನ್ನು ಕಲಿಸುವ ಧರ್ಮದ ಕೇಂದ್ರ ಇದಾಗಿದೆ ಎಂದು ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಮೈಸೂರು ವಿವಿ ಬಸವ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ. ಚಂದ್ರಶೇಖರಯ್ಯ ಪ್ರಧಾನ ಮಾಡಿದರು. ನಂತರ ಅವರು ಮಾತನಾಡುತ್ತಾ, ಯಾವ ವೃತ್ತಿಯು ಕೀಳಲ್ಲ, ಯಾವ ವೃತ್ತಿಯೂ ಮೇಲಲ್ಲ ಅನ್ನುವ ವಿಚಾರದಲ್ಲಿ ಶಿವಶರಣರು ಮಹಾನ್ ಗುರಿಯನ್ನು ಆ ಕಾಲದಲ್ಲಿಯೇ ಸಾಧಿಸಿದ್ದರು. ಅತ್ಯಂತ ಎತ್ತರದ ಆಸೆ, ದುರಾಸೆಯನ್ನು ಇಟ್ಟುಕೊಳ್ಳದೇ ಶಕ್ತಿ, ಸಾಮಥ್ರ್ಯಗಳಿಗೆ ಅನುಸಾರವಾಗಿ ವೃತ್ತಿಯನ್ನು ಆರಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ಒಳ್ಳೆಯ ಗೃಹಿಣಿಯಾಗಿ, ಸಮಾಜ ಸೇವಕಿಯಾಗಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಸಿ.ಎಂ. ಧರ್ಮಪ್ಪ ಮಾತನಾಡುತ್ತಾ, ಕಾಲೇಜಿನಲ್ಲಿ ಓದುವ ವಿಷಯಾವಾರು ವಿಭಾಗದ ವಿದ್ಯಾರ್ಥಿಗಳು ಒಟ್ಟಿಗೆ ಬೆರೆಯುವುದೇ ಸ್ನೇಹ ಸಿಂಚನ. ಭಾಷಾ ಕಲಿಕೆಗೆ ಸತತ ಪ್ರಯತ್ನ ಅಗತ್ಯ. ಬದಲಾಗುವ ಪಠ್ಯಕ್ರಮವನ್ನು ಕಷ್ಟಪಟ್ಟು ಓದಿದರೆ ನಿರುದ್ಯೋಗವನ್ನು ಹೋಗಲಾಡಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಣಿ ಕೆ.ಎನ್. ವಹಿಸಿದ್ದರು. ಶ್ರೀಮತಿ ಸುನೀತಾರಾಣಿ ವಿ.ಡಿ. ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿದರು, ಗುರು ಹೆಚ್.ಆರ್. ವಂದಿಸಿದರು, ಶ್ರೀಮತಿ ರಾಧ.ಬಿ ಕಾರ್ಯಕ್ರಮ ನಿರೂಪಿಸಿದರು.

Translate »