ಮೊಬೈಲ್ ಕ್ರೇಜ್ ತಂದ ಕುತ್ತು ಲಾರಿ ಹರಿದು ತೋಟದ ಕಾರ್ಮಿಕನಿಗೆ ಗಾಯ
ಕೊಡಗು

ಮೊಬೈಲ್ ಕ್ರೇಜ್ ತಂದ ಕುತ್ತು ಲಾರಿ ಹರಿದು ತೋಟದ ಕಾರ್ಮಿಕನಿಗೆ ಗಾಯ

February 2, 2019

ಮಡಿಕೇರಿ: ಕಾಂಕ್ರೀಟ್ ಮಿಶ್ರಣವನ್ನು ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದು ತೋಟ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಮಾದಾಪುರ ದಲ್ಲಿ ನಡೆದಿದೆ. ಬಳ್ಳಾರಿ ಮೂಲದ ರಾಮಣ್ಣ(40) ಎಂಬಾತನೇ ಅಪಘಾತಕ್ಕೊಳಗಾಗಿ ಜೀವ ನ್ಮರಣದ ಸ್ಥಿತಿಯಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಾಗಿರುವ ನತದೃಷ್ಟನಾಗಿದ್ದಾನೆ.

ಮೊಬೈಲ್ ತಂದ ಕುತ್ತು: ಚಿತ್ರನಟಿ ಶ್ವೇತಾ ಚಂಗಪ್ಪ ಅವರ ಸಂಬಂಧಿಯಾಗಿರುವ ಕಾವೇರಪ್ಪ ಕಾಶಿ ಎಂಬವರು ಗರ್ವಾಲೆಯಲ್ಲಿ ತೋಟ ಹೊಂದಿದ್ದು, ಬಳ್ಳಾರಿಯ ರಾಮಣ್ಣ ಎಂಬಾತ ಕಳೆದ ಒಂದು ತಿಂಗಳ ಹಿಂದೆ ಆ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಫೆ.2ರಂದು ಮಾದಾಪುರ ಸಂತೆಗೆಂದು ಬಂದವನು ಹೊಸ ಮೊಬೈಲನ್ನು ಖರೀದಿಸಿದ್ದ ಎನ್ನ ಲಾಗಿದೆ. ಹೊಸ ಮೊಬೈಲ್ ಸಿಕ್ಕಿದ ಸಂಭ್ರಮದಲ್ಲಿ ಈತ ಮಾದಾಪುರ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಬಯಲುಕೊಪ್ಪದಿಂದ ಮಾದಾಪುರ ಸಮೀಪದ ಜಂಬೂರು ವಿನಲ್ಲಿ ನಿರಾಶ್ರಿತರಿಗೆ ನಿರ್ಮಾಣವಾಗುತ್ತಿರುವ ಮನೆಯ ಕೆಲಸಕ್ಕೆಂದು ಕಾಂಕ್ರೀಟ್ ಮಿಶ್ರಣ ಸಾಗಿಸುತ್ತಿದ್ದ ಲಾರಿಯ ಹಿಂಬದಿ ಚಕ್ರ ರಾಮಣ್ಣನ ತೊಡೆಯ ಭಾಗದ ಮೇಲೆ ಹರಿದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ರಾಮಣ್ಣನನ್ನು ಮಾದಾಪುರ ಆಸ್ಪತ್ರೆಗೆ ದಾಖಲಿಸಿ ಪ್ರತಮ ಚಿಕಿತ್ಸೆ ನೀಡಿ, ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗೂಗಲ್ ಮ್ಯಾಪ್ ದುರಂತ?: ಅಪಘಾತಕ್ಕೆ ಕಾರಣವಾದ ಕಾಂಕ್ರೀಟ್ ಮಿಶ್ರಣವನ್ನು ಸಾಗಿಸುತ್ತಿದ್ದ ಲಾರಿಯ ಚಾಲಕ ಕೂಡ ಮೊಬೈಲ್ ವೀಕ್ಷಣೆಯಲ್ಲಿದ್ದು ಮಾರ್ಗದ ಮಾಹಿತಿಗಾಗಿ ಗೂಗಲ್ ಮ್ಯಾಪ್ ಅನ್ನು ನೋಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಈ ಪ್ರಮಾದದಿಂದಾಗಿಯೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕ ರಾಮಣ್ಣನ ಮೇಲೆ ಲಾರಿಯ ಚಕ್ರ ಹರಿಯುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Translate »