ತುಮಕೂರು: ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ.
ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಸ್ವಾಮೀಜಿಗಳ ರಕ್ತದೊತ್ತಡ ಮತ್ತಿತರ ಪರೀಕ್ಷೆ ನಡೆಸಲಾಗಿದ್ದು, ವೆಂಟಿಲೇಷನ್ ಮೂಲಕ ಶ್ರೀಗಳಿಗೆ ಉಸಿರಾಟ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಬಿಜಿಎಸ್ ಹಾಗೂ ಸಿದ್ದಗಂಗಾ ಮಠದ ಆಸ್ಪತ್ರೆಯಲ್ಲಿನ ವೈದ್ಯರ ತಂಡ ವರದಿಯಲ್ಲಿ ತಿಳಿಸಿದೆ. ಈ ಮಧ್ಯೆ ಸ್ವಾಮೀಜಿಗಳು ಬೇಗ ಚೇತರಿಸಿಕೊಳ್ಳಲಿ ಎಂದು ಕೋರಿ ವಿವಿಧೆಡೆ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದು, ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಶಿವಕುಮಾರ್ ಸ್ವಾಮೀಜಿಗಳದ್ದು ಅಮೋಘ ವ್ಯಕ್ತಿತ್ವ. ಅವರ ಮಹೋನ್ನತ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಟ್ವೀಟ್ ಗೆ 10, 387 ಲೈಕ್ಸ್, 345 ಪ್ರತಿಕ್ರಿಯೆ ಹಾಗೂ 2,150 ಪ್ರತಿ ಟ್ವೀಟ್‍ಗಳು ಬಂದಿವೆ.