ಮಾತಿನಲ್ಲಿ ಮಾತ್ರ ಮೋದಿ ಮೋಡಿ, ಅಭಿವೃದ್ಧಿಯಲ್ಲಿ ಶೂನ್ಯ
ಚಾಮರಾಜನಗರ

ಮಾತಿನಲ್ಲಿ ಮಾತ್ರ ಮೋದಿ ಮೋಡಿ, ಅಭಿವೃದ್ಧಿಯಲ್ಲಿ ಶೂನ್ಯ

March 21, 2019

ಗುಂಡ್ಲುಪೇಟೆ: ಪ್ರಧಾನಿ ನರೇಂದ್ರ ಮೋದಿ ಕೇವಲ ಮಾತಿನಲ್ಲಿ ಮಾತ್ರ ಮೋಡಿ ಮಾಡುತ್ತಿದ್ದಾರೆ. ಆದರೆ ಅಭಿವೃದ್ಧಿಯಲ್ಲಿ ಶೂನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಟೀಕಿಸಿದರು.

ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಬ್ಲಾಕ್ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಜನರಿಗೆ ಅಚ್ಚೇ ದಿನ್ ಬರುತ್ತದೆ ಎಂದು ಬಾಯಿ ಮಾತಿನಲ್ಲಿ ಹೇಳುತ್ತಿದ್ದು, ಸಾಧನೆ ಮಾತ್ರ ಶೂನ್ಯ. ನೋಟು ಅನಾಮಾನ್ಯೀಕರಣ ಮಾಡಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿ, ಯುವಜನತೆಯನ್ನು ನಿರುದ್ಯೋಗಿಯಾಗಿಸಿದ್ದೇ ಇವರ ಸಾಧನೆ ಎಂದು ವ್ಯಂಗ್ಯವಾಡಿದರು.
ಹನೂರು ಶಾಸಕ ನರೇಂದ್ರ ಮಾತನಾಡಿ, ನಟನೆಯಲ್ಲಿ ಮೋದಿ ನಂ.1 ಆಗಿದ್ದಾರೆ. ರಾಜಕೀಯ ಬಿಟ್ಟು ನಟನೆ ಮಾಡಿದರೆ ಹಾಲಿವುಡ್‍ನಲ್ಲಿ ಉತ್ತಮ ನಟರಾಗುತ್ತಿದ್ದರು. ಮಾತಿನಲ್ಲಿ ಮರುಳು ಮಾಡಿ ದೇಶದ ಜನರನ್ನು ವಂಚಿಸಿದ್ದಾರೆ ಎಂದು ಛೇಡಿಸಿದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಎಲ್ಲರ ನಾಯಕರಾಗಿದ್ದ ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವಪ್ರಸಾದ್ ನಿಧನರಾದ್ದರಿಂದ ಈ ಬಾರಿ ಕ್ಯಾಪ್ಟನ್ ಇಲ್ಲದೆ ಚುನಾವಣೆ ಎದುರಿಸಬೇಕಾಗಿದೆ ಎಂದು ವಿಷಾದಿಸಿದರಲ್ಲದೆ, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಹಲವಾರು ಬಡವರ ಹಿತಕಾಪಾಡುವ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅಲ್ಲದೆ ಹಿಂದಿನಿಂದಲೂ ಜಿಲ್ಲೆಯು ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಈ ಬಾರಿಯೂ ಜನತೆ ತಮ್ಮ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಹೆದ್ದಾರಿಗಳು, ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಅನುದಾನವನ್ನು ಪಡೆದು ಉತ್ತಮವಾದ ಸೇವೆಯನ್ನು ನೀಡಿದ್ದೇನೆ. ಈ ಬಾರಿಯೂ ಜನತೆ ಅಭಿವೃದ್ಧಿಯನ್ನು ಮನಗಂಡು ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ವಿನಂತಿಸಿದರು.

ಕೇಂದ್ರದಿಂದ ಹೆಚ್ಚಿನ ಅನುದಾನ ತರುವಲ್ಲಿ ಹಾಗೂ ಜಿಲ್ಲೆಯ ಸಮಗ್ರ ಅಭಿವದ್ಧಿಗೆ ತಾವು ಹೆಚ್ಚಿನ ಶ್ರಮ ವಹಿಸಿದ್ದರಿಂದ ಜನತೆಯಲ್ಲಿ ಉತ್ತಮ ಅಭಿಪ್ರಾಯವಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಮತರಾದರಿಗೆ ಮನವರಿಕೆ ಮಾಡಿಕೊಡುವ ಮೂಲಕ ಹೆಚ್ಚು ಮತಗಳು ದೊರಕುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಯುವ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಯತೀಂದ್ರ, ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಮಾಜಿ ಸಂಸದ ಎ.ಸಿದ್ದರಾಜು, ವಿಧಾನಪರಿಷತ್ ಸದಸ್ಯ ಧರ್ಮಸೇನಾ, ಮುಖಂಡರಾದ ಹೆಚ್.ಎಸ್.ನಂಜುಂಡಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಕೆ.ಎಸ್.ಮಹೇಶ್, ನವೀನ್, ಬೊಮ್ಮಯ್ಯ, ಚನ್ನಪ್ಪ, ಅಶ್ವಿನಿವಿಶ್ವನಾಥ್, ತಾಪಂ ಅಧ್ಯಕ್ಷ ಜಗದೀಶಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕಿಸಾನ್ ಸೆಲ್ ಅಧ್ಯಕ್ಷ ಮಂಚಳ್ಳಿಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಮಾಜಿ ಶಾಸಕ ಬಾಲರಾಜು, ಎಲ್.ಸುರೇಶ್, ಪಿ.ಲಿಂಗರಾಜು, ವೆಂಕಟಾಚಲ, ಭಾಗ್ಯಮ್ಮ, ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿದ್ದರು.

Translate »