ಚುನಾವಣಾ ನಿರತ ಅಧಿಕಾರಿಗಳಿಗೆ ತರಬೇತಿ, ಕಿರುಪರೀಕ್ಷೆ
ಚಾಮರಾಜನಗರ

ಚುನಾವಣಾ ನಿರತ ಅಧಿಕಾರಿಗಳಿಗೆ ತರಬೇತಿ, ಕಿರುಪರೀಕ್ಷೆ

March 21, 2019

ಚಾಮರಾಜನಗರ: ಯಾವುದೇ ಚುನಾವಣೆ ಯಶಸ್ಸು ಕಾಣಬೇಕಾದರೆ ಅಧಿಕಾರಿಗಳಿಗೆ ಸಮರ್ಪಕ ಹಾಗೂ ಪರಿಣಾಮಕಾರಿ ತರಬೇತಿ ಬಹಳ ಮುಖ್ಯವಾಗಿದೆ. ಚುನಾವಣೆ ಸುಗಮವಾಗಿ ನಡೆಯಲು ತರಬೇತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿಂದು ಚಾಮರಾಜನಗರ ಲೋಕಸಭಾ ಚುನಾವಣೆಯ ಕ್ಷೇತ್ರ ವ್ಯಾಪ್ತಿಗೆ ಬರುವ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿತರಾಗಿರುವ ಜಿಲ್ಲಾ ಮಟ್ಟದ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೈನರ್‍ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಕಿರುಪರೀಕ್ಷೆ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆಯ ಕÀರ್ತವ್ಯ ಅತ್ಯಂತ ಜವಾಬ್ದಾರಿಯುತವಾಗಿದೆ ಅಧಿಕಾರಿಗಳಿಗೆ ಮಾಹಿತಿಗಳ ಕೊರತೆ ಆಗಬಾರದು. ತರಬೇತಿಯನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು. ನಿಮ್ಮ ಮೂಲಕ ಮುಕ್ತ ಶಾಂತಿಯುತ, ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಇಂತಹ ತರಬೇತಿ ಸಹಾಯಕವಾಗಲಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಭಾರಿಯೂ ಇದೇ ರೀತಿ ಹೆಚ್ಚಿನ ತರಬೇತಿ ಕಾರ್ಯಾಗಾರಗಳು ನಡೆದು ಜಿಲ್ಲೆಯಲ್ಲಿ ಯಶಸ್ವಿ ಮತದಾನವಾಗಲಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಕೃ.ಪ.ಗಣೇಶ್ ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಿದರು.

ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ವಿದ್ಯಾಯಿನಿ ಅವರು ಮಾತನಾಡಿ ಅಂಚೆ ಮತ ಪತ್ರ ಮತ್ತು ಇ.ಡಿ.ಸಿ ಕುರಿತಂತೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಸವೀನ್ ಅವರು ವಿದ್ಯುನ್ಮಾನ ಮತಯಂತ್ರದ ಕುರಿತು ಪ್ರಾತ್ಯಕ್ಷಕೆ ನೀಡಿದರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಸಮ್ಮುಖದಲ್ಲಿ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೈನರ್‍ಗಳಿಗೆ ಕಿರು ಪರೀಕ್ಷೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ವೃಷಬೇಂದ್ರ ಉಪಸ್ಥಿತರಿದ್ದರು.

Translate »