ಅಧಿಕಾರದಿಂದ ಬಿಜೆಪಿ ದೂರವಿಡಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು
ಚಾಮರಾಜನಗರ

ಅಧಿಕಾರದಿಂದ ಬಿಜೆಪಿ ದೂರವಿಡಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು

March 21, 2019

ಸಂಸದ, ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್
ಚಾಮರಾಜನಗರ: ಜಾತ್ಯತೀತ ಶಕ್ತಿಗಳು ಒಂದಾಗಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಹಾಲಿ ಸಂಸದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಹೇಳಿದರು.

ನಗರದ ವರ್ತಕರ ಭವನದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಎಸ್ಪಿ ಮೈತ್ರಿ ಸರ್ಕಾರವಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿದೆ. ರಾಜ್ಯ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 8 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ನಾನು ಮತ್ತೆ ಕಾಂಗ್ರೆಸ್‍ನಿಂದ ಸ್ಫರ್ಧೆ ಮಾಡುತ್ತಿದ್ದೇನೆ. ಮೈತ್ರಿ ಪಕ್ಷಗಳ ವರಿಷ್ಠರ ಆದೇಶದಂತೆ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಭಿನ್ನಾಭಿಪ್ರಾಯ ಬಿಟ್ಟು ತಮ್ಮನ್ನು ಬೆಂಬಲಿಸಿ ಅತ್ಯಧಿಕ ಮತದಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು 9 ತಿಂಗಳ ಉತ್ತಮ ಆಡಳಿತ ನೀಡಿದ್ದು, ರೈತರ ಸಾಲಮನ್ನಾ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹೆಚ್ಚಿನ ಅನುದಾನ ನೀಡಿದ್ದು, ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒಮ್ಮತದಿಂದ ಚುನಾವಣೆಯಲ್ಲಿ ಬೆಂಬಲಿಸುವಂತೆ ಇದೇ ವೇಳೆ ಕೋರಿದರಲ್ಲದೆ, ಸಹಾಯ ಮಾಡಿದವರ ಋಣ ತೀರಿಸುವುದು ನನ್ನ ಕೆಲಸ. ಅಧಿಕಾರ ಶಾಶ್ವತವಲ್ಲ. ಸ್ನೇಹ ಮುಖ್ಯ. ಸ್ನೇಹಕ್ಕಾಗಿ ರಾಜಕಾರಣ ಮಾಡುತ್ತೇನೆ ಹೊರತು ಅಧಿಕಾರಕ್ಕಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಸಂಸದ ಆರ್.ಧ್ರ್ರುವನಾರಾಯಣ್‍ರನ್ನು ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬೆಂಬಲಿಸುವಂತೆ ಮನವಿ ಮಾಡಿದರು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ನೀರಾವರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಜನಪರ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜ್ ಮಾತನಾಡಿ, ಸಂಸದ ಆರ್.ಧ್ರ್ರುವನಾರಾಯಣ್ ಜಿಲ್ಲೆಯಲ್ಲಿ ಹತ್ತು ಹಲವು ಅಭಿವೃದ್ದಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದ ವರಿಷ್ಠರ ಆದೇಶದಂತೆ ಹೆಚ್ಚಿನ ಮತಗಳಿಂದ ಧ್ರುವನಾರಾಯಣ್‍ರನ್ನು ಮತ್ತೊಮ್ಮೆ ಸಂಸದರಾಗಿ ಆಯ್ಕೆ ಮಾಡಲು ಶ್ರಮಿಸಲಾಗವುದು ಎಂದರು.

ಸಭೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಪಿ.ಮರಿಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಂಗರಾಮ್, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಮಹೇಶ್‍ಗೌಡ, ಸೈಯದ್‍ಪುರ್ಖಾನ್, ಎನ್.ಶಿವಮಲ್ಲು, ಸೈಯದ್‍ನಜೀಬುಲ್ಲಾ, ಇಮ್ತಿಯಾಜ್ ಇತರರಿದ್ದರು.

Translate »