ಅಲ್ಲಿ 500 ರೂ! ಇಲ್ಲಿ 1000 ರೂ. ಹಂಚಲಾಗುತ್ತಿದೆ! ಮತ್ತಿಲ್ಲಿ ಬೆಳ್ಳಿ ಪದಾರ್ಥ ಉಡುಗೊರೆ!!!
ಮೈಸೂರು

ಅಲ್ಲಿ 500 ರೂ! ಇಲ್ಲಿ 1000 ರೂ. ಹಂಚಲಾಗುತ್ತಿದೆ! ಮತ್ತಿಲ್ಲಿ ಬೆಳ್ಳಿ ಪದಾರ್ಥ ಉಡುಗೊರೆ!!!

August 31, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಚಾಣದ ಕುಣಿತ ಜೋರಾಗಿದೆ. ಒಂದು ಮತಕ್ಕೆ 500 ರೂ., ಸಾವಿರ ರೂ. ಹಂಚಿಕೆಯಾಗುತ್ತಿದೆ. ಬೆಳ್ಳಿ ಪದಾರ್ಥಗಳನ್ನು ಉಡುಗೊರೆಯಾಗಿ ನೀಡಿ, ಮತ ಖರೀದಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಈ ಮಾತುಗಳು ಅಲ್ಲಿ ಇಲ್ಲಿ ಕೇಳಿ ಬರುತ್ತಿವೆಯಷ್ಟೇ. ಈವರೆಗೂ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಹೊರತಾಗಿ ಬೇರ್ಯಾವ ಖಚಿತ ದೂರುಗಳು ಬಂದಿಲ್ಲ. ಆದರೆ ಸುಳ್ಳು ಮಾಹಿತಿಯಿಂದ ಚುನಾವಣಾಧಿಕಾರಿಗಳು ಗಸ್ತು ತಿರುಗಿ ಬೇಸ್ತು ಬಿದ್ದಿರುವ ಪ್ರಸಂಗಗಳು ಸಾಕಷ್ಟು ನಡೆದಿವೆ.

ರಾಮಕೃಷ್ಣನಗರ 58ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಕೃಷ್ಣ ಅವರ ಪರವಾಗಿ ಉಡುಗೊರೆ ಹಾಗೂ ಹಣವನ್ನು ಹಂಚಲಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಆರೋಪ ಸಾಬೀತಾಗಿದೆ. 3 ಬೆಳ್ಳಿ ದೀಪ ಹಾಗೂ 1670 ರೂ. ಹಣವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೆಯೇ ಲಷ್ಕರ್‍ಮೊಹಲ್ಲಾ 40ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್, ಅವಧಿ ಮುಗಿದ ನಂತರವೂ ಬಹಿರಂಗ ಪ್ರಚಾರ ಮಾಡಿದ್ದರ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ಇವುಗಳಲ್ಲದೆ ಇನ್ನೂ ಅನೇಕ ದೂರುಗಳು ಕೇಳಿ ಬಂದಿದ್ದರೂ ಸಾಬೀತಾಗಿಲ್ಲ.

ಚಾಮುಂಡಿಪುರಂನಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ. ಬಿಸಿಲು ಮಾರಮ್ಮ ದೇವಾಲಯದ ಬಳಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಹೀಗೆ ಅನೇಕ ದೂರುಗಳು ಕೇಳಿ ಬಂದಿವೆ. ಆದರೆ ಚುನಾವಣಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಂದರ್ಭದಲ್ಲಿ ಅಂತಹ ಯಾವುದೇ ಚಟುವಟಿಕೆಗಳು ಕಂಡು ಬಂದಿಲ್ಲ. ಬೇಕಂತಲೇ ಸುಳ್ಳು ಮಾಹಿತಿ ನೀಡಿ, ಅಧಿಕಾರಿಗಳನ್ನು ಬೇಸ್ತು ಬೀಳಿಸಿ, ತಮಾಷೆ ನೋಡುವ ಪ್ರಸಂಗಗಳೂ ಸಾಕಷ್ಟು ನಡೆದಿವೆ.

Translate »