ಮುಂಗಾರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಲಭ್ಯ
ಮೈಸೂರು

ಮುಂಗಾರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಲಭ್ಯ

May 4, 2019

ಮೈಸೂರು: ವರ್ಷದ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಲಭ್ಯವಿದ್ದು, ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಇನ್ನೂ ಕೃಷಿ ಚಟುವಟಿಕೆ ಚುರುಕುಗೊಂಡಿಲ್ಲ. ಪ್ರಸಕ್ತ ವರ್ಷದ ಜನವರಿಯಿಂದ ಈ ದಿನದವರೆಗೆ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಕಳೆದ ವರ್ಷದ ಈ ದಿನದವರೆಗಿನ ಪ್ರಮಾಣಕ್ಕಿಂತ ಸುಮಾರು 21 ಮಿ.ಮೀ ಹೆಚ್ಚಾಗಿ ರುವುದು ಸಮಾಧಾನದ ಸಂಗತಿಯಾಗಿದೆ. ಪ್ರಸಕ್ತ ಜನವರಿಯಿಂದ ಮೇ 3ರ ವರೆಗೆ 92.3 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು.

ಆದರೆ ಜನವರಿಯಲ್ಲಿ 1.3, ಫೆಬ್ರವರಿಯಲ್ಲಿ 9.4, ಮಾರ್ಚ್‍ನಲ್ಲಿ 1.2, ಏಪ್ರಿಲ್‍ನಲ್ಲಿ 58.8 ಹಾಗೂ ಮೇ 3ರವರೆಗೆ 74.8 ಮಿ.ಮೀ ಸೇರಿದಂತೆ ಒಟ್ಟು 85.4 ಮಿ.ಮೀ ಮಳೆಯಾಗಿದೆ.

ಮಾರ್ಚ್‍ನಲ್ಲಿ ಸೋತ ಮಳೆ: ಕಳೆದ ನಾಲ್ಕು ತಿಂಗಳ ಮಳೆ ಪ್ರಮಾಣ ಗಮನಿಸಿದರೆ ಮಾರ್ಚ್‍ನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ವಾಡಿಕೆಯ 12.9 ಮಿ.ಮೀ.ನಲ್ಲಿ ಕೇವಲ 1.2 ಮಿ.ಮೀ ಮಾತ್ರ ಮಳೆಯಾಗಿತ್ತು. ಜನವರಿಯಲ್ಲಿ 0.8 ಮಿ.ಮೀ ಮಳೆ ಕಡಿಮೆಯಾಗಿತ್ತು. ಆದರೆ ಫೆಬ್ರವರಿಯಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿತ್ತು. ವಾಡಿಕೆಯ 4.5 ಮಿ.ಮೀ.ಗಿಂತ ಹೆಚ್ಚು ಅಂದರೆ 9.4 ಮಿ.ಮೀ ಮಳೆ ಸುರಿದಿತ್ತು. ಇನ್ನು ಏಪ್ರಿಲ್‍ನಲ್ಲಿ 3.1 ಮಿ.ಮೀ ಹಾಗೂ ಮೇ 3ರವರೆಗೆ 10.9 ಮಿ.ಮೀ ಮಳೆ ಪ್ರಮಾಣ ಕಡಿಮೆಯಾಗಿದೆ.

ಪಿ.ಪಟ್ಟಣದಲ್ಲಿ ಹೆಚ್ಚು ಮಳೆ: ತಾಲೂಕುವಾರು ಗಮನಿಸಿದರೆ ಪಿರಿಯಾಪಟ್ಟಣ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜನವರಿಯಿಂದ ಮೇ 3ರವರೆಗೆ 77.5 ಮಿ.ಮೀ ವಾಡಿಕೆ ಮಳೆಗಿಂತ 49 ಮಿ.ಮೀ ಹೆಚ್ಚಾಗಿದೆ. ಅಂದರೆ ಈವರೆಗೆ 115.4 ಮಿ.ಮೀ ಮಳೆಯಾಗಿದೆ. ಹೆಚ್.ಡಿ.ಕೋಟೆಯಲ್ಲಿ 111.3, ಹುಣಸೂರಿನಲ್ಲಿ 95.2, ಕೆ.ಆರ್.ನಗರದಲ್ಲಿ 80.4 ಮಿ.ಮೀ. ಮಳೆಯಾಗಿದೆ. ಈ ನಾಲ್ಕು ತಾಲೂಕುಗಳಲ್ಲಿ ವಾಡಿಕೆ ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲೇ ಮಳೆಯಾಗಿದೆ. ಇನ್ನುಳಿದ 3 ತಾಲೂಕುಗಳಲ್ಲಿ ಮಳೆಯ ಕೊರತೆ ಹೆಚ್ಚಾಗಿದ್ದು, ಕೃಷಿ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರಿದೆ. ಮೈಸೂರು ತಾಲೂಕಿನಲ್ಲಿ ವಾಡಿಕೆಗಿಂತ 39 ಮಿ.ಮೀ ಕಡಿಮೆ ಅಂದರೆ 55.2 ಮಿ.ಮೀ, ನಂಜನಗೂಡಿನಲ್ಲಿ ಶೇ.59.7 ಮಿ.ಮೀ(32 ಮಿ.ಮೀ ಕಡಿಮೆ) ಹಾಗೂ ತಿ.ನರಸೀಪುರದಲ್ಲಿ 48.3 ಮಿ.ಮೀ(44 ಮಿ.ಮೀ ಕಡಿಮೆ) ಮಳೆ ಬಿದ್ದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿಯಿಂದ ತಿಳಿದುಬಂದಿದೆ.

ಶೇ.1ರಷ್ಟು ಬಿತ್ತನೆ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 2,86,220 ಮಳೆ ಆಶ್ರಿತ ಹಾಗೂ 1,14,100 ನೀರಾವರಿ ಸೇರಿ ಒಟ್ಟು 4,00,320 ಹೆಕ್ಟೇರ್ ಬಿತ್ತನೆ ಗುರಿ ಕ್ಷೇತ್ರವಾಗಿದೆ. ಆದರೆ 3,866 ಹೆಕ್ಟೇರ್ ಮಳೆ ಆಶ್ರಿತ ಕ್ಷೇತ್ರದಲ್ಲಿ ಬಿತ್ತನೆಯಾಗಿದ್ದು, ನೀರಾವರಿ ಕ್ಷೇತ್ರದಲ್ಲಿ ಶೂನ್ಯ ಸಾಧನೆಯಾಗಿದೆ. ಇದರಲ್ಲಿ ರಾಗಿ 10, ಮುಸುಕಿನಜೋಳ 87, ಜೋಳ 235, ತೊಗರಿ 42, ಅಲಸಂದೆ 1248, ಹೆಸರು 184, ಉದ್ದು 383, ಅವರೆ 5, ನೆಲಗಡಲೆ 52, ಎಳ್ಳು 150, ಹತ್ತಿ 900, ಹೊಗೆಸೊಪ್ಪು 515, ಕಬ್ಬು 30 ಹಾಗೂ ಇತರೆ ಬೆಳೆ 25 ಹೆಕ್ಟೇರ್‍ಗಳಲ್ಲಿ ಬಿತ್ತನೆಯಾಗಿದೆ. ಹೆಚ್.ಡಿ.ಕೋಟೆಯಲ್ಲಿ ಶೇ.1, ಹುಣಸೂರಿನಲ್ಲಿ ಶೇ.0.86, ಕೆ.ಆರ್.ನಗರ ಶೇ.1.53, ಮೈಸೂರು ತಾಲೂಕಿನಲ್ಲಿ ಶೇ.0.74, ನಂಜನಗೂಡು ಶೇ.1.43, ಪಿರಿಯಾಪಟ್ಟಣ ಶೇ.0.43 ಹಾಗೂ ತಿ.ನರಸೀಪುರದಲ್ಲಿ ಶೇ.0.48 ಕ್ಷೇತ್ರದಲ್ಲಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಶೇ.1ರಷ್ಟು ಮಾತ್ರ ಬಿತ್ತನೆ ಮಾಡಲಾ ಗಿದ್ದು, ಇನ್ನೊಂದು ಬಾರಿ ಉತ್ತಮ ಮಳೆಯಾದರೆ ಬಿತ್ತನೆ ಪ್ರಮಾಣ ಹೆಚ್ಚಾಗಲಿದೆ.

Translate »