ಬಹುತೇಕ ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲ
ಮೈಸೂರು

ಬಹುತೇಕ ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲ

November 4, 2019

ಮೈಸೂರು, ನ.೩(ಆರ್‌ಕೆ)- ನಮ್ಮಲ್ಲಿ ಬಹುತೇಕ ರಾಜಕಾರಣಿಗಳಿಗೆ ಕನ್ನಡ ಭಾಷೆ ಬಗ್ಗೆ ಅಭಿ ಮಾನವೇ ಇಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗ ವಾನ್ ಅವರು ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಕೆ.ಜಿ.ಕೊಪ್ಪಲು ಬಳಿ ಕೋರ್ಟ್ ಮುಂಭಾ ಗದ ನೇಗಿಲಯೋಗಿ ಮರಳೇಶ್ವರ ಸೇವಾ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವೇದಿಕೆ ಮೇಲೆ ಕನ್ನಡದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬಹುತೇಕ ರಾಜಕಾರಣಿಗಳಿಗೆ ಮಾತೃಭಾಷೆ ಮೇಲೆ ಪ್ರೀತಿ, ಅಭಿ ಮಾನವೇ ಇಲ್ಲದಿರುವುದು ವಿಷಾದನೀಯ ಎಂದರು.

ಭಾಷೆಗಳ ಉಳಿವಿಗಾಗಿ ರಾಜ್ಯಗಳನ್ನು ಭಾಷಾ ವಾರು ಪ್ರಾಂತಗಳಾಗಿ ನಂತರ ಆಯಾ ಭಾಷೆಗಳ ಹೆಸರಲ್ಲಿ ರಾಜ್ಯಗಳು ಸ್ಥಾಪನೆಯಾದವು. ದೇಶಾದ್ಯಂತ ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿತ್ತಾ ದರೂ, ಅದಕ್ಕೆ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಆಯಾ ಮಾತೃಭಾಷೆಗಳು ಪ್ರಧಾನವಾಗಿ ಉಳಿದವು ಎಂದು ಅವರು ತಿಳಿಸಿದರು.

ತಮಿಳುನಾಡಿನಲ್ಲಿ ಅವರ ಭಾಷೆ ಬಗ್ಗೆ ಬದ್ಧತೆ, ಅಭಿಮಾನವಿದೆ. ಆದರೆ ನಮ್ಮ ರಾಜ್ಯದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬೇರೆ ರಾಜ್ಯದವರು ಇಲ್ಲಿಗೆ ಬಂದರೆ ನಾವೇ ಅವರ ಭಾಷೆ ಮಾತನಾಡುತ್ತಿದ್ದೇವೆ. ಅದು ನಮ್ಮ ದೊಡ್ಡತನವೋ, ದಡ್ಡತನವೋ ಗೊತ್ತಿಲ್ಲ. ಕೇವಲ ನವೆಂಬರ್‌ನಲ್ಲಿ ಮಾತ್ರ ಕನ್ನಡಿಗರಾದರೆ ಸಾಲದು, ಹೊಸ ಚಿಂತನೆ, ವಿಷಯಗಳಿಂದ ಮಾತ್ರ ಮಾತೃಭಾಷೆ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

೨೦ನೇ ಶತಮಾನದಲ್ಲಿ ಶರಣರು ಸಮಾನತೆ, ಮಾನ ವೀಯತೆಯಂತಹ ಸಂದೇಶ ಸಾರಿದರು. ಕುವೆಂಪು ಅವರು ನಿರಂಕುಶಮತಿಗಳಾಗಿ ಎಂದಿದ್ದರು. ಅಂತಹ ಸಾರ್ವತ್ರಿಕ ವಿಚಾರಗಳಿದ್ದರೆ ಮಾತ್ರ ಕನ್ನಡ ಭಾಷೆ ಬೆಳೆ ಯುತ್ತದೆ ಎಂದ ಪ್ರೊ.ಭಗವಾನ್, ಸಾಹಿತಿಗಳು ಕನ್ನಡ ಭಾಷೆಯ ಇತಿಹಾಸ, ಕೃತಿಗಳ ಬಗ್ಗೆ ಇಂದಿನ ಯುವ ಸಮೂಹಕ್ಕೆ ಪರಿಚಯಿಸಬೇಕಿದೆ ಎಂದರು.

ಕೇAದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಸೌಭಾಗ್ಯವತಿ ಅವರು ‘ಕನ್ನಡ ಬದುಕಿನ ಸಬಲೀಕರಣ ಸವಾಲುಗಳು ಮತ್ತು ಸಾಧ್ಯತೆ’ ಕುರಿತು ಮಾತನಾಡಿದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಟಿ.ಸತೀಶ್ ಜವರೇಗೌಡ, ಸಿಸಿಬಿ ಎಸಿಪಿ ವಿ.ಮರಿಯಪ್ಪ, ಸಾಹಿತಿ ರಂಗನಾಥ ಮೈಸೂರು, ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಬಿ.ಬಸವರಾಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಂತರ ನಡೆದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಡಾ.ಎ.ಆರ್.ಮದನ್‌ಕುಮಾರ್, ಡಾ.ಜಿ.ಮಾದಪ್ಪ, ಎಸ್.ಶಿವರಂಜಿನಿ, ಹೆಚ್.ಎಸ್.ಸೌಮ್ಯ ಸೇರಿದಂತೆ ಹಲವು ಕವಿಗಳು ಕವನ ವಾಚನ ಮಾಡಿದರು.

Translate »