ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ನವಜಾತ ಶಿಶುಗಳ ಸಾವು
ಚಾಮರಾಜನಗರ

ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ನವಜಾತ ಶಿಶುಗಳ ಸಾವು

November 4, 2018

ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ನವಜಾತ ಶಿಶುಗಳು ಮೃತ ಪಟ್ಟಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.ನಗರದ ಭಗೀರಥ ನಗರದ ನಿವಾಸಿ ಹೇಮಂತ್ ಅವರ ಪತ್ನಿ ರಂಜಿತಾ(19) ಹಾಗೂ ಆಕೆಯ ಎರಡು ನವ ಜಾತ ಶಿಶುಗಳು ಮೃತಪಟ್ಟಿದ್ದಾರೆ. ತುಂಬು ಗರ್ಭಿಣಿ ಯಾಗಿದ್ದ ರಂಜಿತಾ ಶುಕ್ರವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ ತಪಾಸಣೆಗೆ ಒಳಗಾಗಿ ಮನೆಗೆ ತೆರಳಿದ್ದರು. ಆದರೆ ಶನಿವಾರ ಬೆಳಗಿನ ಜಾವ ತೀವ್ರ ಕೆಮ್ಮು ಕಾಣಿಸಿಕೊಂಡ ಕಾರಣ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ತಪಾಸಣೆ ನಡೆ ಸಿದ ವೈದ್ಯರು ರಂಜಿತಾಳನ್ನು ಹೆರಿಗೆ ಕೊಠಡಿಗೆ ಕರೆದೊಯ್ಯುತ್ತಿದ್ದಾಗ ಆಕೆ ಕುಸಿದು ಬಿದ್ದು ಹೆರಿಗೆ ನೋವು ಕಾಣಿಸಿಕೊಂಡಿದೆ. ಅಲ್ಲದೇ ಹೆರಿಗೆ ಸಮಯದಲ್ಲಿ ಒಂದು ಮಗು ಹೊಟ್ಟೆ ಯಲ್ಲೇ ಸಾವನ್ನಪ್ಪಿತ್ತು. ತಾಯಿಯೂ ಮೃತಪಟ್ಟಿದ್ದರು.

ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿತು ಎಂದು ಜಿಲ್ಲಾಸ್ಪತ್ರೆ ಮುಖ್ಯ ಸರ್ಜನ್ ಡಾ.ರಘು ರಾಮ್ ಸರ್ವೇಗಾರ್ ತಿಳಿಸಿದರು. ಗರ್ಭೀಣಿಯಾಗಿದ್ದ ರಂಜಿತಾ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಈಕೆಗೆ 9 ತಿಂಗಳು ಪೂರ್ಣಗೊಳ್ಳಲು ಇನ್ನೂ 15ದಿನಗಳು ಬೇಕಾಗಿತ್ತು. ಅವಧಿಗೂ ಮುನ್ನಾ ಹೆರಿಗೆ ಆಗಿದ್ದಕ್ಕೆ ಹಾಗೂ ಥೈರಾಯ್ಡ್ ಸಮಸ್ಯೆ ಇದ್ದ ಕಾರಣ ತಾಯಿ ಹಾಗೂ ನವಜಾತ ಅವಳಿ ಶಿಶುಗಳು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

Translate »