ಜಿಲ್ಲಾ ಕ್ರೀಡಾಂಗಣಕ್ಕೆ ಸಂಸದ ಧ್ರುವನಾರಾಯಣ್ ದಿಢೀರ್ ಭೇಟಿ
ಚಾಮರಾಜನಗರ

ಜಿಲ್ಲಾ ಕ್ರೀಡಾಂಗಣಕ್ಕೆ ಸಂಸದ ಧ್ರುವನಾರಾಯಣ್ ದಿಢೀರ್ ಭೇಟಿ

July 12, 2018

ಚಾಮರಾಜನಗರ: ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಮಂಗಳವಾರ ಸಂಜೆ ಸಂಸದ ಆರ್.ಧ್ರುವನಾರಾಯಣ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಕ್ರೀಡಾಂಗಣದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ಶೀಘ್ರದಲ್ಲಿಯೇ ಉದ್ಘಾಟಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚೆಲುವಯ್ಯ ಅವರಿಗೆ ಸೂಚಿಸಿದರು.

ಕ್ರೀಡಾಂಗಣದ ಸುತ್ತಲೂ ಆಡಿಟರ್ ಆಗಿರುವ ಸಿ.ಎಂ.ವೆಂಕಟೇಶ್ ಹಾಕಿರುವ ಗಿಡಗಳನ್ನು ಸಂರಕ್ಷಿಸುವಂತೆ ಹಾಗೂ ಸೂಕ್ತ ಭದ್ರತೆ ಕೈಗೊಳ್ಳುವಂತೆ ಸಂಸದರು ಇದೇ ವೇಳೆ ಸೂಚಿಸಿದರು. ಇದಲ್ಲದೇ ನಗರದ ಬಹುತೇಕ ಕಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಸಿ.ಎಂ.ವೆಂಕಟೇಶ್ ಅವರಿಗೆ ಮೊಬೈಲ್‍ನಲ್ಲಿ ಧ್ರುವನಾರಾಯಣ್ ಅಭಿನಂದನೆ ಸಲ್ಲಿಸಿದರು.

ಕ್ರೀಡಾಂಗಣದ ಸುತ್ತಲೂ ಚರಂಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಮೊಬೈಲ್ ಮೂಲಕ ಸೂಚಿಸಿದರು. ಇದಲ್ಲದೇ ಖಾಸಗಿ ಬಸ್ ನಿಲ್ದಾಣದ ಕಡೆಯಿಂದ ಕ್ರೀಡಾಂಗಣಕ್ಕೆ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್‍ನ್ನು ಸ್ವಲ್ಪ ಪ್ರಮಾಣದಲ್ಲಿ ಕೆಡವು ಹಾಕಲಾಗಿತ್ತು. ಇದನ್ನು ನಿರ್ಮಿಸುವಂತೆ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರಿಗೆ ಸೂಚಿಸಿದರು. ಸ್ಥಳ ದಲ್ಲಿಯೇ ಇದ್ದ ರಾಜಣ್ಣ ಇನ್ನೊಂದು ವಾರ ದಲ್ಲಿ ಕಾಂಪೌಂಡ್ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಹೆಬ್ಬಸೂರು ವೀರಭದ್ರಸ್ವಾಮಿ, ಸಂಸದರ ಆಪ್ತ ಕಾರ್ಯ ದರ್ಶಿ ನಾಗೇಶ್ ಈ ವೇಳೆ ಹಾಜರಿದ್ದರು.

Translate »