ಕಾಂಗ್ರೆಸ್ ಮತ್ತು ದೇಶದ್ರೋಹ ಹೊಕ್ಕಳ ಬಳ್ಳಿಯಂತೆ ಅಂಟಿಕೊಂಡಿದೆ
ಮೈಸೂರು

ಕಾಂಗ್ರೆಸ್ ಮತ್ತು ದೇಶದ್ರೋಹ ಹೊಕ್ಕಳ ಬಳ್ಳಿಯಂತೆ ಅಂಟಿಕೊಂಡಿದೆ

March 4, 2019

ಮೈಸೂರು: ಕಾಂಗ್ರೆಸ್ ಮತ್ತು ದೇಶದ್ರೋಹ ಹೊಕ್ಕಳ ಬಳ್ಳಿಯಂತೆ ಅಂಟಿಕೊಂಡಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಪಾಕಿಸ್ತಾನ ಉಗ್ರರ ವಿರುದ್ಧದ ದಾಳಿಯನ್ನು ಬಿಜೆಪಿ ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಲದರ್ಶಿನಿಯ ತಮ್ಮ ಕಚೇರಿ ಎದುರು ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತ ನಾಡುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಯೋಧರು ನೆತ್ತರು ಹರಿಸಿಯಾದರೂ ಸ್ವಾತಂತ್ರ್ಯ ಪಡೆಯಬೇಕೆಂದು ಹೊರಟಿದ್ದರೆ, ಕಾಂಗ್ರೆಸ್‍ನವರು ಬ್ರಿಟಿಷ ರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಅನುಭವಿಸಿದವರು ಎಂದು ವಾಗ್ದಾಳಿ ನಡೆಸಿದರು.

ಸರ್ಜಿಕಲ್ ಸ್ಟ್ರೈಕ್ ಬಳಿಕವೂ ಕಾಂಗ್ರೆಸ್‍ನವರು ಹೀಗೆ ವರ್ತಿಸಿದ್ದರು. ಅದಕ್ಕೆ ಸೂಕ್ತ ಉತ್ತರ ಸಿಕ್ಕ ಬಳಿಕ ಬಾಯಿ ಮುಚ್ಚಿದರು. 2008ರಲ್ಲಿ ಮುಂಬೈನಲ್ಲಿ ಉಗ್ರರು ದಾಳಿ ನಡೆಸಿ ದಾಗ ನೂರಾರು ಜನ ಭಾರತೀಯರು ಸಾವನ್ನಪ್ಪಿದರು. ಆಗ ದೇಶಾದ್ಯಂತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಒಕ್ಕೊರಲ ಆಗ್ರಹ ವ್ಯಕ್ತವಾಗಿತ್ತು. ಆದರೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿಯವರಿಗೆ ಗಡಿ ದಾಟಿ ಉಗ್ರರ ವಿರುದ್ಧ ಸಮರ ಸಾರುವ ಎದೆಗಾರಿಕೆ ಇರಲಿಲ್ಲ. 2014ರಲ್ಲೂ ಭಾರತೀಯರ ಸೈನಿಕರ ಶಿರಚ್ಛೇದ ನಡೆಸಿದಾಗಲೂ ಅಂದಿನ ಯುಪಿಎ ಸರ್ಕಾರ ಕೈಕಟ್ಟಿ ಕುಳಿತಿತ್ತು. ಇದೀಗ ಪುಲ್ವಾಮ ದಾಳಿ ಬಳಿಕ ಪ್ರಧಾನಿ ಮೋದಿಯವರು ಉಗ್ರರ ನೆಲೆಗಳ ಮೇಲೆ ವಾಯು ದಾಳಿ ನಡೆಸಿ 350ಕ್ಕೂ ಹೆಚ್ಚು ಉಗ್ರರನ್ನು ಬಲಿ ಹಾಕುವ ಮೂಲಕ ದೇಶದ ಜನತೆಯ ಪ್ರೀತಿ ಪಾತ್ರರಾಗಿದ್ದಾರೆ ಎಂದು ನುಡಿದರು.

ಮೋದಿ ಅವರ ಎದೆಗಾರಿಕೆ ಹಿನ್ನೆಲೆಯಲ್ಲಿ ಅವರು ಮತ್ತೆ ಪ್ರಧಾನಿ ಆಗಬೇಕು. ಅವರ ನಾಯಕತ್ವದಲ್ಲೇ ದೇಶ ಮುನ್ನಡೆಯಬೇಕೆಂಬ ಭಾವನೆ ದೇಶದ ಜನತೆಯಲ್ಲಿದ್ದು, ಇದನ್ನೇ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಇದನ್ನು ಕಾಂಗ್ರೆಸ್‍ನವರು ತಿರುಚಲು ಹೊರಟಿದ್ದಾರೆ. ಅದಕ್ಕಾಗಿಯೇ ಹೀಗೆ ಅಸಂಬದ್ಧವಾಗಿ ಮಾತನಾಡು ತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಅದಕ್ಕಾಗಿ ಮೈಸೂರು-ಕೊಡಗು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಪ್ರತಾಪ್ ಸಿಂಹ ಮತ್ತೆ ಆಯ್ಕೆಯಾಗಬೇಕು ಎಂಬುದು ಕ್ಷೇತ್ರದ ಜನತೆ ಭಾವನೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 1990ರಿಂದ 2014ರವರೆಗೆ ಕ್ಷೇತ್ರದಲ್ಲಿ ಸಂಸದರಾಗಿದ್ದವರು ಮಾಡಿದ ಕೆಲಸಗಳನ್ನು ಹಾಗೂ ನಾನು ಮೋದಿಯವರ ಆಡಳಿತದಲ್ಲಿ ಕ್ಷೇತ್ರಕ್ಕೆ ತಂಡ ಕೊಡುಗೆಗಳನ್ನು ಪ್ರತ್ಯೇಕ ಪಟ್ಟಿ ಮಾಡಿದರೆ ಸಾಕು, ನಾನೇನು ಮಾಡಿದ್ದೇನೆ ಎಂದು ಅರ್ಥವಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿ ಮಾಡಿಕೊಂಡರೂ ಹಾಗೂ ಆ ಪಕ್ಷದ ಯಾರೇ ಅಭ್ಯರ್ಥಿಗಳಾದರೂ ನನಗೆ ಚಿಂತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Translate »