ಎಂ.ಆರ್.ರವಿಕುಮಾರ್ ಮೈಸೂರು ನಗರ ಪಾಲಿಕೆ ನೂತನ ಕಮೀಷ್ನರ್
ಮೈಸೂರು

ಎಂ.ಆರ್.ರವಿಕುಮಾರ್ ಮೈಸೂರು ನಗರ ಪಾಲಿಕೆ ನೂತನ ಕಮೀಷ್ನರ್

July 14, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಆಗಿ ಐಎಎಸ್ ಅಧಿಕಾರಿ ಎಂ.ಆರ್.ರವಿಕುಮಾರ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ವೃತ್ತಿ ಮತ್ತು ತರಬೇತಿ ವಿಭಾಗದ ಆಯುಕ್ತರನ್ನಾಗಿ ವರ್ಗಾಹಿಸಲಾಗಿದೆ.

ರಾಜ್ಯ ಸರ್ಕಾರ ಇಂದು ಒಟ್ಟು 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ರವಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತಾದರೂ, ಸ್ಥಳ ನಿಯೋಜಿಸದ ಕಾರಣ ಡಿಪಿಆರ್ ನಲ್ಲಿ ವರದಿ ಮಾಡಿಕೊಂಡಿದ್ದರು. ಇದೀಗ ಸಮ್ಮಿಶ್ರ ಸರ್ಕಾರವು ಅವರನ್ನು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಹಾಲಿ ಕಮೀಷ್ನರ್ ಕೆ.ಹೆಚ್. ಜಗದೀಶ ಅವರಿಗೆ ಸ್ಥಳ ನಿಯೋಜಿಸಿಲ್ಲ.

1998ರ ಬ್ಯಾಚಿನ ಕೆಎಎಸ್ ಅಧಿಕಾರಿಯಾದ ರವಿಕುಮಾರ್ ತುಮಕೂರು ಉಪ ವಿಭಾಗಾಧಿಕಾರಿಯಾಗಿ, ಕರ್ನಾಟಕ ಗೃಹ ಮಂಡಳಿ ಭೂ ಸ್ವಾಧೀನಾಧಿಕಾರಿಯಾಗಿ, ಮುಡಾ ಕಾರ್ಯದರ್ಶಿಯಾಗಿ, ಬೆಂಗಳೂರು ಮೆಡಿಕಲ್ ಕಾಲೇಜು ಮುಖ್ಯ ಆಡಳಿತಾಧಿಕಾರಿಯಾಗಿ, ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೊರೇಷನ್ ಪ್ರಧಾನ ವ್ಯವಸ್ಥಾಪಕರಾಗಿ ಹಾಗೂ ಬೆಳಗಾಂ ನಗರ ಪಾಲಿಕೆ ಕಮೀಷ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ನಂತರ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದ ಅವರು, ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಡೈರೆಕ್ಟರ್ ಆಫ್ ಮುನಿಸಿಪಲ್ ಅಡ್ಮಿನಿಸ್ಟ್ರೇಷನ್ (ಡಿಎಂಎ) ಕೇಡರ್ ಅಧಿಕಾರಿಯಾಗಿರುವ ರವಿಕುಮಾರ್ ಅವರನ್ನು ಮೈಸೂರು ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿರುವು ದರಿಂದ ಅವರು ಅಧಿಕಾರ ವಹಿಸಿಕೊಳ್ಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

Translate »