ಮಂಡ್ಯದಲ್ಲಿ ಲಾಕಪ್ ಡೆತ್
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಲಾಕಪ್ ಡೆತ್

July 14, 2018

ಮಂಡ್ಯ: ಬೈಕ್ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಅನುಮಾನಾಸ್ಪದ ರೀತಿ ಠಾಣೆ ಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮೂಲತಃ ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ನಿವಾಸಿ ಬೆಟ್ಟಯ್ಯ ಎಂಬುವವರ ಪುತ್ರ ಮೂರ್ತಿ(45) ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಆರೋಪಿ.

ಕಳೆದ ಸೋಮವಾರ ಬೈಕ್ ಕಳ್ಳತನ ಆರೋಪದ ಮೇಲೆ ನಗರದ ಪಶ್ಚಿಮ ಠಾಣೆಯ ಪೊಲೀಸರು ಈತನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆದರೆ ಇಂದು ಬೆಳಿಗ್ಗೆ ಠಾಣೆಯ ಬಾತ್‍ರೂಂನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೂರ್ತಿಯ ಮೃತದೇಹ ಪತ್ತೆಯಾಗಿದೆ. ಠಾಣೆಯ ಮೂಲಗಳ ಪ್ರಕಾರ, ಬೈಕ್ ಕಳ್ಳತನ ಆರೋಪದಡಿ ಸೋಮವಾರ ಮೂರ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಇಬ್ಬರನ್ನು ಮೌಕಿಕ ವಿಚಾರಣೆಯ ಮೇಲೆ ಬಿಟ್ಟು ಕಳುಹಿಸ ಲಾಗಿದ್ದು, ಮೂರ್ತಿಯನ್ನು ಮಾತ್ರ ಠಾಣೆಯಲ್ಲೇ ಇರಿಸಿ ಕೊಳ್ಳಲಾಗಿತ್ತು. ಆದರೆ ಇಂದು ಬೆಳಿಗ್ಗೆಮೂರ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬಾತ್‍ರೂಂನಲ್ಲಿ ಪತ್ತೆಯಾಗಿದೆ.

ಮ್ಯಾಜಿಸ್ಟ್ರೇಟರ್‍ರಿಂದ ಪರಿಶೀಲನೆ: ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳಿಗ್ಗೆಯೇ ಠಾಣೆ ಮುಂದೆ ಜಮಾಯಿಸಿದ ದಲಿತ ಸಂಘರ್ಷ ಸಮಿತಿಯ ಮುಖಂಡರು ಮತ್ತು ಕುಟುಂಬಸ್ಥರು ಮೂರ್ತಿ ಮೇಲೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಇದೊಂದು ಲಾಕಪ್ ಡೆತ್ ಎಂದು ಆರೋಪಿಸಿ ಠಾಣೆಯ ಎದುರೇ ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜ್ಯೋತಿ ಅವರ ಮೂಲಕ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ಬಳಿಕ ಮೃತದೇಹವನ್ನು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.

ಪೋಷಕರ ಪ್ರತಿಭಟನೆ: ಶವಾಗಾರದ ಬಳಿ ಜಮಾಯಿಸಿದ ಕುಟುಂಬಸ್ಥರು ಹಾಗೂ ನೂರಾರು ಮಂದಿ ದಲಿತ ಸಂಘಟನೆಗಳ ಮುಖಂಡರು, ಮಂಡ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮೃತನ ಕುಟುಂಬಕ್ಕೆ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಶವಾಗಾರಕ್ಕೆ ಖುದ್ದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಆಗಮಿಸಿ, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಈ ವೇಳೆ, ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದಾಗಿ ಜಿಲ್ಲಾಧಿಕಾರಿ ಗಳು ಭರವಸೆ ನೀಡಿದರು. ಅಲ್ಲದೇ, ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವುದಾಗಿಯೂ ತಿಳಿಸಿದರು.

ಜಿಲ್ಲಾಧಿಕಾರಿಗಳು ನೀಡಿದ ಭರವಸೆಗೆ ಒಪ್ಪದ ಪ್ರತಿಭಟನಾಕಾರರು ಸ್ಥಳದಲ್ಲೇ ಪರಿಹಾರ ಘೋಷಿಸುವಂತೆ ಬಿಗಿಪಟ್ಟು ಹಿಡಿದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಈಗಾಗಲೇ ಎಸ್‍ಐ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ತಿಳಿಸಿದರು. ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಒಂದು ವೇಳೆ ತನಿಖೆಯಲ್ಲಿ ಲೋಪಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ರಾಧಿಕಾ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಬಳಿಕ ಶವದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ದೇಹವನ್ನು ಹಸ್ತಾಂತರಿಸಲಾಯಿತು.

ಪ್ರಕರಣ ಸಿಐಡಿ ತನಿಖೆಗೆ

ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಂಭವಿಸಿರುವ ವ್ಯಕ್ತಿಯ ಅಸಹಜ ಸಾವಿನ ಪ್ರಕರಣ ಕುರಿತಂತೆ ಸಿಐಡಿಯಿಂದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಜಿ.ರಾಧಿಕಾ `ಮೈಸೂರುಮಿತ್ರ’ನಿಗೆ ತಿಳಿಸಿದರು.

ಯಾವುದೇ ಪೊಲೀಸ್ ಠಾಣೆಯ ಸಾವಿನ ಪ್ರಕರಣ ವನ್ನು ಸ್ಥಳೀಯ ಪೊಲೀಸರು ಮಾಡುವುದಿಲ್ಲ. ಮರಣೋತ್ತರ ವರದಿ ಬಂದ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅವರೇ ಎಲ್ಲಾ ರೀತಿಯ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸುತ್ತಾರೆ. ಇನ್ನೆರಡು ದಿನಗಳಲ್ಲಿ ಸಿಐಡಿಗೆ ಪ್ರಕರಣ ಹಸ್ತಾಂತರಗೊಳ್ಳಲಿದೆ. ಎಲ್ಲಾ ಹಂತಗಳಲ್ಲೂ ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂದರು.

ನಾಲ್ವರ ಅಮಾನತು: ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯು ಕಳೆದ ರಾತ್ರಿ ಕರ್ತವ್ಯದಲ್ಲಿದ್ದ ಪಶ್ಚಿಮ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆನಂದ್, ಎಸ್‍ಹೆಚ್‍ಓ ಮಾದೇಶ್, ಲಾಕಪ್ ಗಾರ್ಡ್ ಡ್ಯೂಟಿಯಲ್ಲಿದ್ದ ಮಲ್ಲಿಕಾರ್ಜುನ ಝಳಕಿ ಹಾಗೂ ಸೆಂಟ್ರಿ ಡ್ಯೂಟಿಯಲ್ಲಿದ್ದ ವರದರಾಜು ಅವರನ್ನು ಅಮಾನತುಗೊಳಿಸಲಾಗಿದೆ ಎಂದುತಿಳಿಸಿದರು. ಮೃತನ ಮಾವ ಪುಟ್ಟರಾಮಣ್ಣ ಮಾತನಾಡಿ, ಮೂರ್ತಿ ಕಟ್ಟಡ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮದುವೆಯಾಗಿ 30 ವರ್ಷ ಕಳೆದಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ. ಆತ ಯಾವುದೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ ಎಂದರು. ಮೂರು ದಿನಗಳಿಂದಲೂ ಪೊಲೀಸ್ ಠಾಣೆಗೆ ಅಲೆದಾಡು ತ್ತಿದ್ದೇನೆ. ಪೊಲೀಸರು ಮೂರ್ತಿಯನ್ನು ಕರೆತಂದಿಲ್ಲ ಎನ್ನುತ್ತಿದ್ದರು. ಇಂದು ಗ್ರಾಮದಿಂದ ದೂರವಾಣ ಮಾಡಿದ್ದ ಸಂಬಂಧಿಕರು ಮೂರ್ತಿ ಠಾಣೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೋಗಿ ನೋಡಿ ಎಂದರು. ನಾನು ಬಂದು ವಿಚಾರಿಸಲಾಗಿ ಪೊಲೀಸರು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುತ್ತಿದ್ದಾರೆ. ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ದೂರಿದರು.

ಪೊಲೀಸರು ಹೊಡೆಯುತ್ತಿದ್ದರು: ಮೂರ್ತಿ ಅವರೊಂದಿಗೆ ಪೊಲೀಸರ ವಶದಲ್ಲಿದ್ದ ಮದ್ದೂರು ತಾಲೂಕು ಅಂತರಹಳ್ಳಿಯ ನಾಗರಾಜು, ಪೊಲೀಸರು ನಮಗೆ ಹೊಡೆಯು ತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕಳೆದ ಸೋಮವಾರ ಮೂರ್ತಿ ಜತೆ ನಾನು ಸೇರಿದಂತೆ ಮೂವರನ್ನು ಠಾಣೆಗೆ ಕರೆ ತಂದಿದ್ದರು. ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಒಡೆಯುತ್ತಿದ್ದರು ಎಂಬುದಾಗಿ ಬಾಯಿ ಬಿಟ್ಟಿದ್ದಾರೆ. ನನ್ನನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದರು. ಜಾಮೀನಿನ ಮೇಲೆ ನಾನು ಬಿಡುಗಡೆಯಾಗಿ ಬಂದೆ. ಮೂರ್ತಿ ಸಾವಿನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Translate »