ಹೊಸಕೋಟೆ ಕೈ ಅಭ್ಯರ್ಥಿ ಟೀಕಿಸಿದ ಎಂಟಿಬಿ ನಾಗರಾಜ್ ಕ್ಷಮೆಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷರ ಆಗ್ರಹ
ಮೈಸೂರು

ಹೊಸಕೋಟೆ ಕೈ ಅಭ್ಯರ್ಥಿ ಟೀಕಿಸಿದ ಎಂಟಿಬಿ ನಾಗರಾಜ್ ಕ್ಷಮೆಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷರ ಆಗ್ರಹ

November 24, 2019

ಮೈಸೂರು, ನ.23(ಪಿಎಂ)-ಹೊಸಕೋಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಬಗ್ಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಲಘುವಾಗಿ ಮಾತ ನಾಡಿದ್ದಾರೆ ಎಂದು ಖಂಡಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎಂಟಿಬಿ ನಾಗರಾಜ್ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಚುನಾವಣಾ ಪ್ರಚಾರ ಮಾಡುತ್ತಿದ್ದ ಎಂಟಿಬಿ ನಾಗರಾಜ್ `ಮಹಿಳೆಯಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ’ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರನ್ನು ಟೀಕಿಸಿದ್ದಾರೆ. ಆ ಮೂಲಕ ಒಬ್ಬ ಹೆಣ್ಣು ಮಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ತಮಿಳುನಾಡಿನ ಮುಖ್ಯಮಂತ್ರಿ ಯಾಗಿದ್ದ ಜಯಲಲಿತಾ, ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾದೀಕ್ಷಿತ್ ಹಲವು ಮಹಿಳೆಯರು ದಕ್ಷರಾಗಿ ಆಡಳಿತ ನಡೆಸಿಲ್ಲವೇ? ಅವರದೇ ಪಕ್ಷದಲ್ಲಿ ಮಹಿಳೆಯರು ಉನ್ನತ ಸ್ಥಾನ ನಿಭಾಯಿಸಿಲ್ಲವೇ? ಎಂದು ಪ್ರಶ್ನಿಸಿದರು. ಉಪಚುನಾವಣೆ ಸಂಬಂಧಿಸಿದಂತೆ ಅನರ್ಹರು ಬೇಕಾ ಇಲ್ಲ, ಸ್ವಾಭಿಮಾನಿ ಕಾಂಗ್ರೆಸ್ ಬೇಕಾ ಎಂದು ಜನತೆ ತೀರ್ಮಾನಿಸ ಬೇಕಿದೆ. 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ಶಾಸಕರಾದ ಎ.ಹೆಚ್.ವಿಶ್ವನಾಥ್ ವರ್ಷ ಕಾಲ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ, ಅಭಿವೃದ್ಧಿಯೂ ಮಾಡಿಲ್ಲ. ಆದರೂ ಬಿಜೆಪಿ ಸೇರಿ ಸ್ಪರ್ಧಿಸಿದ್ದು, ಇವರಿಗೆ ಜನರೇ ಬುದ್ಧಿಕಲಿಸಬೇಕು ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ನಗರ ಉಪಾಧ್ಯಕ್ಷೆ ಸುಜಾತ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »