ಮೂರನೇ ಬಾರಿಯೂ ಮುಡಾ ಸಭೆ ರದ್ದು
ಮೈಸೂರು

ಮೂರನೇ ಬಾರಿಯೂ ಮುಡಾ ಸಭೆ ರದ್ದು

July 30, 2019

ಮೈಸೂರು,ಜು.29(ಆರ್‍ಕೆ)-ಸಮ್ಮಿಶ್ರ ಸರ್ಕಾರದ ಅನಿಶ್ಚಿತತೆಯಿಂದಾಗಿ ಇಂದು ನಿಗದಿಯಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸಾಮಾನ್ಯ ಸಭೆ ರದ್ದಾಯಿತು. ಆ ಮೂಲಕ 3ನೇ ಬಾರಿ ಸಭೆ ರದ್ದಾದಂತಾಗಿದ್ದು, ನಾಗರಿಕ ಸೌಕರ್ಯ (ಸಿಎ) ನಿವೇಶನಗಳ ಹಂಚಿಕೆ ಪ್ರಕ್ರಿಯೆ ಜನ ಸಾಮಾನ್ಯ ರಿಗೆ ಕೈಗೆಟಕುವ ಬೆಲೆಯಲ್ಲಿ ಗುಂಪು ಮನೆ ನಿರ್ಮಿಸಿ ಕೊಡುವುದು, ಹೊಸ 5 ಬಡಾವಣೆಗಳಿಗೆ ಅನುಮೋ ದನೆ ಪಡೆಯುವುದು, ಬಲ್ಲಹಳ್ಳಿ ವಸತಿ ಬಡಾವಣೆಗೆ ಭೂಮಿ ಪಡೆಯುವ ಪ್ರಕ್ರಿಯೆ ಸೇರಿದಂತೆ ಹಲವು ಮಹತ್ವದ ಯೋಜನೆಗಳು ನೆನೆಗುದಿಗೆ ಬಿದ್ದಂತಾಗಿವೆ.

ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ಆರಂಭ ವಾಗಿ ಸರ್ಕಾರ ಪತನದ ಅಂಚಿಗೆ ಬಂದು ಕಡೆಗೆ ವಿಶ್ವಾಸಮತದಲ್ಲಿ ವಿಫಲವಾದ ಕಾರಣ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡು, ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮುಡಾ ಸಭೆ ಮೂರು ಬಾರಿಯೂ ರದ್ದಾಗಿದೆ.

ಈ ಹಿಂದೆ ಜುಲೈ 6, ಜುಲೈ 20ರಂದು ಸಭೆ ನಡೆಯಬೇಕಾಗಿತ್ತಾದರೂ, ಮುಡಾ ಸದಸ್ಯರೂ ಆದ ಶಾಸಕರುಗಳು ಲಭ್ಯವಿಲ್ಲದ ಕಾರಣ ನಿಗದಿತ ಸಭೆ ಗಳು ರದ್ದಾಗಿದ್ದವು. ಕಡೆಗೆ ಹೊಸ ಸರ್ಕಾರ ಬಂದ ಕಾರಣ, ಇಂದು (ಜು.29) ನಿಗದಿಯಾಗಿದ್ದ ಪ್ರಾಧಿ ಕಾರದ ಸಭೆಯೂ ಸಹ ರದ್ದಾಯಿತು.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಮೈತ್ರಿ ಸರ್ಕಾರದಲ್ಲಿ ನೇಮಕಗೊಂಡಿದ್ದ ಮುಡಾ ಅಧ್ಯಕ್ಷ ಹೆಚ್.ಎನ್.ವಿಜಯ್ ಸಹ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶವಿಲ್ಲದ ಕಾರಣ, ಸೋಮವಾರ ನಡೆಯಬೇಕಿದ್ದ ಪ್ರಾಧಿಕಾರದ ಸಭೆಯೂ ನಡೆಯಲಿಲ್ಲ. ನಿವೇಶನ ಶಾಖೆಯ 46, ವಿಶೇಷ ಭೂಸ್ವಾಧೀನ ಶಾಖೆಯ 8, ಕಾನೂನು ಶಾಖೆಯ 1, ತಾಂತ್ರಿಕ ಶಾಖೆಯ 24, ನಗರ ಯೋಜನಾ ಶಾಖೆಯ 140 ಸೇರಿದಂತೆ ಒಟ್ಟು 219 ವಿಷಯ ಗಳನ್ನು ಇಂದಿನ ಸಭೆಗೆ ಮಂಡಿಸಲು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಸಿದ್ಧಪಡಿಸಿದ್ದರು.

ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ವಿವಿಧ ಅಳತೆಯ ಸಿಎ(ನಾಗರಿಕ ಸೌಲಭ್ಯ) ನಿವೇಶನಗಳ ಹಂಚಿಕೆಗಾಗಿ ಉಪಸಮಿತಿ ರಚಿಸುವುದು, ಗುಂಪು ಮನೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದು ಇದೀಗ ಮತ್ತೆ ನೆನೆಗುದಿಗೆ ಬಿದ್ದಂತಾಗಿದೆ.

Translate »