ನಗರಸಭೆ: ಸದ್ದು ಮಾಡಿದ ಬೀದಿ ನಾಯಿ ಹಾವಳಿ
ಮಂಡ್ಯ

ನಗರಸಭೆ: ಸದ್ದು ಮಾಡಿದ ಬೀದಿ ನಾಯಿ ಹಾವಳಿ

July 27, 2018
  • ಸಮರ್ಪಕ ಕಸ ವಿಲೇವಾರಿಗೆ ಆಗ್ರಹ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು

ಮಂಡ್ಯ : ಬೀದಿ ನಾಯಿಯ ಹಾವಳಿ ಅಧಿಕವಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಸಮರ್ಪಕವಾಗಿ ಕಸವಿಲೇವಾರಿಯಾಗದೆ ವಾರ್ಡ್‍ಗಳು ಗಬ್ಬು ನಾರುತ್ತಿದ್ದು, ಸಾಂಕ್ರಾ ಮಿಕ ಕಾಯಿಲೆಗಳ ಭೀತಿ ಎದುರಾಗಿದೆ ಸೇರಿದಂತೆ ನಗರದ ವಾರ್ಡ್‍ಗಳಲ್ಲಿ ಪ್ರಮುಖ ಮೂಲ ಸೌಲಭ್ಯದ ಕೊರತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ನಗರಸಭಾಧ್ಯಕ್ಷೆ ಷಹಜಹಾನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ನಗರಸಭಾ ಸದಸ್ಯರು ತಮ್ಮ ವಾರ್ಡ್‍ಗಳಲ್ಲಿನ ಕಸದ ಸಮಸ್ಯೆ ಸರಿ ಪಡಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಅರುಣ್, ಪುಷ್ಪಾವತಿ, ಕೆ.ಸಿ. ರವೀಂದ್ರ ಮಂಡ್ಯದ ಬೀದಿ ಗಳು ಕಸ ಮತ್ತು ನಾಯಿಗಳಿಂದ ತುಂಬಿ ತುಳುಕುತ್ತಿವೆ. ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾಯಿಗಳನ್ನು ಹಿಡಿದು ಪುರದ ಹೊರಗೆ ಬಿಟ್ಟರೆ ಪ್ರಾಣಿದಯಾ ಸಂಘದವರು ಓಡಿ ಬರು ತ್ತಾರೆ. ನಾಯಿಗಳು ಕಚ್ಚಿದರೆ ಆಸ್ಪತ್ರೆಗಳಲ್ಲಿ ಇಂಜೆಕ್ಷನ್ನೂ ಸಿಗ್ತಿಲ್ಲ. ಜನರ ಸಾಮಾನ್ಯ ಒಕ್ಕೊರಳಿನ ಕೂಗು ಎಂದರೆ ನಾಯಿಗಳ ಹಾವಳಿ ತಪ್ಪಿಸಿ ಇಲ್ಲದಿದ್ದರೆ ನೀವುಗಳೂ ಒಂದು ಸಾರಿ ನಾಯಿಗಳಿಂದ ಕಚ್ಚಿಸಿ ಕೊಳ್ಳಿ ಎಂದು ಉಚಿತ ಸಲಹೆ ನೀಡುವುದು ತೀರಾ ನುಂಗಲಾರದ ತುತ್ತಾಗಿದೆ ಎಂದು ಸಭೆಯಲ್ಲಿ ಅವಲತ್ತುಕೊಂಡರು.

ಸದಸ್ಯರ ನೋವು, ನಿರಾಶೆ, ಹತಾ ಶಯದ ಪ್ರಶ್ನೆಗಳಿಗೆ ಉತ್ತರಿಸಿದ ಪರಿಸರ ಇಂಜಿನಿಯರ್ ಸುಬ್ರಹ್ಮಣಿ, ನಾಯಿಗಳ ನಿಯಂತ್ರಣಕ್ಕೆ ನಾವು ಐದು ಬಾರಿ ಟೆಂಡರ್  ಕರೆದಿದ್ದೆವೆ. ಅದು ಸಿಂಗಲ್ ಟೆಂಡರ್ ಆಗಿದೆ. ಶೀಘ್ರ ಟೆಂಡರ್‍ಗೆ ಕಳುಹಿಸುತ್ತೇವೆ ಎಂದು ಉತ್ತರಿಸಿದರು.

ಅಧಿಕಾರಿ ಸುಬ್ರಹ್ಮಣಿ ಉತ್ತರದಿಂದ ಆಕ್ರೋಶಗೊಂಡ ಸದಸ್ಯ ಸೋಮ ಶೇಖರ್ ಕೆರಗೋಡು, 5 ತಿಂಗಳಿನಿಂದ ಟೆಂಡರ್ ಅನ್ನು ಏಕೆ ಕಳುಹಿಸಿಲ್ಲ. ಇದರಲ್ಲೇ ನಿಮ್ಮ ಬೇಜವಾಬ್ದಾರಿತನ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿ ಕೊಟ್ಟು ಅನುಮೋದನೆ ಪಡೆಯಬಹುದಿ ತ್ತಲ್ಲವೇ ಎಂದು ಮರು ಪ್ರಶ್ನಿಸಿದರು.

ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಣ್ಣ ಮಧ್ಯ ಪ್ರವೇಶಿಸಿ, ಹೊಸ ಕಾನೂನಿನಲ್ಲಿ ಸಿಂಗಲ್ ಟೆಂಡರ್ ಆದಲ್ಲಿ ಅದನ್ನು ಮರು ಟೆಂಡರ್ ಮಾಡ ಬೇಕೆಂಬ ನಿಯಮವಿದೆ. ಜೊತೆಗೆ ಫೆÉಬ್ರವರಿ ನಂತರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ವಿಳಂಬವಾಯಿತು. ಈಗ ಮರು ಟೆಂಡರ್ ಮಾಡುವುದಾಗಿ ಹೇಳಿ ಸಮಜಾಯಿಷಿ ನೀಡಲು ಮುಂದಾದರು.

ತಪ್ಪು ಮಾಹಿತಿ ನೀಡಬೇಡಿ : ಆಗ ಸದಸ್ಯ ಅನಿಲ್ ಕುಮಾರ್ ಮಧ್ಯ ಪ್ರವೇಶಿಸಿ ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ವಿಶೇಷ ಪ್ರಕರಣಗಳಲ್ಲಿ ನಿಖರವಾದ ಕಾರಣ ಕೊಟ್ಟು ಅನುಮೋದನೆ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಕೆಲಸ ಮಾಡುವ ಇಚ್ಛಾಶಕ್ತಿ ನಿಮಗಿಲ್ಲ. ಒಂದೆರಡು ದಿನದಲ್ಲಿ ಮಾಡಬಹುದು. ಇಲ್ಲದಿದ್ದರೆ 2 ವರ್ಷ ಕೂಡ ಮಾಡಬಹುದು ಎಂದು ನೇರವಾಗಿ ನುಡಿದರು. ಈ ಹಂತದಲ್ಲಿ ಸದಸ್ಯ ಮಹೇಶ್ ಕೃಷ್ಣ ಮಾತನಾಡಿ, ನಾಯಿಗಳನ್ನು ಹಿಡಿದು ಒಂದೆಡೆ ಸಂಗ್ರಹಿಸೋಣ. ಅವು ಗಳನ್ನು ಸಾಯಿಸುವುದು ಬೇಡ. ಸಾಯಿಸಿ ದರೆ ಪ್ರಾಣಿದಯಾ ಸಂಘದವರು ಓಡಿ ಬರ್ತಾರೆ. ನಾಯಿಗಳನ್ನೆಲ್ಲಾ ಹಿಡಿದ ನಂತರ ಪ್ರಾಣಿ ದಯಾ ಸಂಘದವರಿಗೆ ಪತ್ರ ಬರೆಯೋಣ. ಅವರೇ ಬಂದು ನಾಯಿಗಳಿಗೆ ಊಟ ಹಾಕಲಿ ಎಂದು ಛೇಡಿಸಿದರು.

ನಗರದಲ್ಲಿರುವ ಎಲ್ಲಾ ನಾಯಿಗಳನ್ನು ಹಿಡಿಯುವ ಹೊತ್ತಿಗೆ ನಾಲ್ವರು ಅಧ್ಯಕ್ಷರು ಬದಲಾದರು. ನಾಯಿಗಳ ಸಂಖ್ಯೆ ಬದಲಾಗ ಲಿಲ್ಲ. ಈಗಿರುವ ಐದನೇ ಅಧ್ಯಕ್ಷರೂ ಹಿಡಿ ತಾರೋ ಇಲ್ಲವೋ ಗೊತ್ತಿಲ್ಲ. ಈ ಟೆಂಡರ್ ಆಗೋವಷ್ಟರಲ್ಲಿ ನಗರಸಭಾ ಸದಸ್ಯರ ಅವಧಿ ಅಂತ್ಯಗೊಳ್ಳುತ್ತದೆ. ಮುಂದಿನ ಕೌನ್ಸಿಲ್‍ಗೆ ನೀವು ಇದೇ ಉತ್ತರ ಕೊಡ್ತೀರಿ. ಅವ್ರು ಹೀಗೆ ಕಾಲ ಕಳೆದುಕೊಂಡು ಹೋಗ್ತಾರೆ ಎಂದು ಸದಸ್ಯ ಮಹೇಶ್ ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸುಜಾತಮಣಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂಧನ್ ಇದ್ದರು.

Translate »