ಶಾಲಾ ಬಾಲಕನನ್ನು ರಕ್ಷಿಸಲು ಹೋಗಿ ಬಸ್ ಪಲ್ಟಿ, ಓರ್ವ ಸಾವು 35ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಡ್ಯ

ಶಾಲಾ ಬಾಲಕನನ್ನು ರಕ್ಷಿಸಲು ಹೋಗಿ ಬಸ್ ಪಲ್ಟಿ, ಓರ್ವ ಸಾವು 35ಕ್ಕೂ ಹೆಚ್ಚು ಮಂದಿಗೆ ಗಾಯ

July 27, 2018

ಮಳವಳ್ಳಿ:  ಶಾಲಾ ಬಾಲಕನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, 35ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬುಳ್ಳಿಕೆಂಪನದೊಡ್ಡಿ ಬಳಿಯ ಮೈಸೂರು-ಮಳವಳ್ಳಿ ಹೆದ್ದಾರಿಯಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿನ ಕುಳ್ಳಯ್ಯನದೊಡ್ಡಿ ಗ್ರಾಮದ ಲೆ.ರಾಜಣ್ಣ ಎಂಬುವರ ಪುತ್ರ ಮಹೇಶ್ (38) ಸಾವನ್ನಪ್ಪಿದವರು. ತೀವ್ರ ಗಾಯಗೊಂಡಿದ್ದ ಬಸಮ್ಮಣ್ಣಿ, ಬಸವರಾಜು, ಲಕ್ಕೇಗೌಡ ಎಂಬುವ ರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಗಾಯಾಳುಗಳಾದ ತಿ.ನರಸೀಪುರ ತಾಲೂಕಿನ ವ್ಯಾಸರಾಜನಪುರ ಗ್ರಾಮದ ಕೃಷ್ಣ, ಮಹಾಲಕ್ಷ್ಮಿ, ಕೇತುಪುರ ಬಸವರಾಜು, ಕೆಬ್ಬೆ ಗ್ರಾಮದ ಮಹದೇವ, ದೊಡ್ಡಪುರ ರೇಚಪ್ಪ, ನಂಜಾಪುರ ಶಂಕರಾಚಾರಿ, ನಾಗೇಶ, ಟಿ.ನರಸೀಪುರ ಶಿವಣ್ಣ, ಸೋಸಲೆ ಗ್ರಾಮದ ಬಸವರಾಜು, ತಾಯೂರು ಸುಶೀಲಮ್ಮ, ಕುಪ್ಪೇಗಾಲ ಚಿಕ್ಕತಾಯಮ್ಮ, ಬಸಮ್ಮಣ್ಣಿ, ಬಾಣಳ್ಳಿ ಮರಿಸ್ವಾಮಿ, ಹೊಸದೊಡ್ಡಿ ನಾಗೇಶ, ಬೆಂಡರವಾಡಿ ಜಯ ಪ್ರಕಾಶ, ಸಿದ್ದರಾಮನ ಹುಂಡಿ ಮಂಜು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.

ಘಟನೆ ವಿವರ: ನಂಜನಗೂಡು ತಾಲೂಕಿನ ತಾಯೂರು ಗ್ರಾಮದಿಂದ ಬೆಂಗಳೂರಿಗೆ ತೆರಳು ತ್ತಿದ್ದ ಖಾಸಗಿ ಬಸ್ ಕಿರುಗಾವಲು ಸಮೀಪದ ಬುಳ್ಳಿ ಕೆಂಪನದೊಡ್ಡಿ ಬಳಿ ಬರುತ್ತಿದ್ದ ವೇಳೆ ಸೈಕಲ್‍ನಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆಯು ವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.

ಕೂಡಲೇ ಸ್ಥಳೀಯರು ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ್ದು, ತಲೆಯ ಭಾಗಕ್ಕೆ ಪೆಟ್ಟು ಬಿದ್ದು ತೀವ್ರಗಾಯಗೊಂಡಿದ್ದ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತುರ್ತು ಚಿಕಿತ್ಸಾ ವಾಹನದ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಯ ತಿಳಿದ ಕೂಡಲೇ ಅಪಘಾತ ಸ್ಥಳಕ್ಕೆ ತಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್ ಕುಮಾರ್, ಶಾಸಕ ಡಾ. ಕೆ.ಅನ್ನದಾನಿ, ಎಎಸ್ಪಿ ಲಾವಣ್ಯ, ಡಿವೈಎಸ್‍ಪಿ ಸಿ.ಮಲ್ಲಿಕ್, ಸಿಪಿಐ ಶ್ರೀಕಾಂತ್ ಭೇಟಿ ನೀಡಿ ಪರಿಶೀಲಿಸಿ ಗಾಯಾಳುಗಳ ನೆರವಿಗೆ ಸಹಕರಿ ಸಿದರು. ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »