ಭಾರತೀನಗರ: ಕಾನೂನು ಬಾಹಿರವಾಗಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರನ್ನು ಗೂಡ್ಸ್ ಹಾಗೂ ಆಟೋಗಳಲ್ಲಿ ತುಂಬಿ ಕೊಂಡು ಹೋಗುತ್ತಿ ರುವುದಕ್ಕೆ ಕಡಿವಾಣ ಹಾಕುವಂತೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದ ಆಗಬಹು ದಾದ ಅನಾಹುತ ತಪ್ಪಿಸಬಹುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮದ್ದೂರು ತಾಲೂಕಿನಲ್ಲಿರುವ ಗಾರ್ಮೆಂಟ್ಸ್‍ಗಳಿಗೆ ಮಂಡ್ಯ, ಮದ್ದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ಕಾನೂನು ಬಾಹಿರವಾಗಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರನ್ನು ಗೂಡ್ಸ್ ಹಾಗೂ ಆಟೋಗಳಲ್ಲಿ ಕರೆದೊಯ್ಯ ಲಾಗುತ್ತಿದೆ. ಅವರ ಸುರಕ್ಷತೆಗಾಗಿ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಸ್‍ಗಳನ್ನು ಬಳಸಿಕೊಳ್ಳುವಲ್ಲಿ ವಿಫಲ: ಗೂಡ್ಸ್ ವಾಹನಗಳಲ್ಲಿ ಮಹಿಳೆಯರನ್ನು ಕುರಿಗಳಂತೆ ತುಂಬಿಕೊಂಡು ಹೋಗುವುದ ರಿಂದ ಅವರ ಸುರಕ್ಷತೆಗೆ ಧಕ್ಕೆಯಾಗುತ್ತದೆ. ಈ ಹಿಂದೆ ಹಲವು ಅಪಘಾತಗಳು ನಡೆದು ಸಾವು-ನೋವುಗಳು ಸಂಭವಿಸಿವೆ. ತಾವು ಶಾಸಕರಾಗಿದ್ದಾಗ ಗಾರ್ಮೆಂಟ್ಸ್ ಆಡಳಿತ ಮಂಡಳಿಗೆ ತಿಳಿ ಹೇಳಿ ಸ್ವಂತ ವಾಹನಗಳನ್ನು ಬಳಸಿ ಇಲ್ಲವೇ, ಸಾರಿಗೆ ಸಂಸ್ಥೆ ಬಸ್ಸುಗಳನ್ನು ಬಳಸುವಂತೆ ಸಲಹೆ ನೀಡಿದ್ದೆ. ಜೊತೆಗೆ ಅದಕ್ಕೆ ಸಂಬಂಧಿಸಿದಂತೆ ಅನುಮತಿ ದೊರಕಿಸಿ ಕೊಡಲು ಭರವಸೆ ನೀಡಿದ್ದೆ. ಆದರೆ ಈವರೆ ವಿಗೂ ಸ್ವಂತ ವಾಹನ ಬಳಕೆ ಮಾಡಲು ಮುಂದಾಗಿಲ್ಲ ಎಂದರು.
ತಮ್ಮ ಸಲಹೆಯಿಂದ ಎಚ್ಚೆತ್ತ ಕಾರ್ಖಾನೆ ಆಡಳಿತ ಮಂಡಳಿ ಕಾಲಾವಕಾಶ ಕೇಳಿತ್ತು. ಅಲ್ಲದೇ ಸಾರಿಗೆ ಬಸ್ಸುಗಳನ್ನು ಒದಗಿಸು ವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾವು ಅಂದು ಸಾರಿಗೆ ಜಿಲ್ಲಾ ವ್ಯವಸ್ಥಾಪಕರಿಗೆ ಸಾಯಿ ಗಾರ್ಮೆಂಟ್ಸ್‍ಗೆ ಬಸ್ಸುಗಳನ್ನು ಒದಗಿಸುವಂತೆ ಸೂಚಿಸಿದ್ದೆ. ಆದರೆ ಅಲ್ಲಿನ ಕಾರ್ಮಿಕರು ಅದನ್ನೂ ಬಳಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಹಕರಿಸುವಂತೆ ಮನವಿ: ತಾಲೂಕಿನ ಗಾರ್ಮೆಂಟ್ಸ್‍ಗಳಿಗೆ ಅಗತ್ಯ ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರನ್ನು ಕರೆತರುವ ಗೂಡ್ಸ್ ಹಾಗೂ ಆಟೋ ಚಾಲಕರು ಕೆಲ ವೇಳೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತ ಸಂಭವಿಸಿದರೇ ಸಾರಿಗೆ ಸಚಿವರಾದ ತಮಗೇ ಕೆಟ್ಟ ಹೆಸರು ಬರುತ್ತದೆ. ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಕಾನೂನು ಬಾಹಿರವಾಗಿ ಗೂಡ್ಸ್ ವಾಹನಗಳ ಸಂಚಾರ ಎಂದು ಮಾಧ್ಯಮಗಳು ಸೇರಿದಂತೆ ಸಾರ್ವಜನಿಕರು ಆರೋಪಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಕಾರ್ಮಿಕರು ಸರ್ಕಾರದೊಂದಿಗೆ ಸಹಕಾರಿಸುವುದು ಒಳ್ಳೆಯದು ಎಂದು ತಿಳಿಸಿದರು.
ಕಡಿಮೆ ಸಂಬಳ ಅಧಿಕ ಲಾಭ: ಗಾರ್ಮೆಂಟ್ಸ್ ನಲ್ಲಿ ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಯಾವುದೇ ಕಾರ್ಖಾನೆಗಳಾಗಲೀ, ತಮ್ಮ ಕಾರ್ಮಿಕರನ್ನು ಕರೆತರಲು ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಂಡಿರುತ್ತವೆ. ಆದರೆ ಇಲ್ಲಿನ ಗಾರ್ಮೆಂಟ್ಸ್ ಆಡಳಿತ ಮಂಡಳಿಗಳು ಇದಕ್ಕೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟಿಸುವುದು ಸರಿಯಲ್ಲ: ಗೂಡ್ಸ್ ಆಟೋಗಳಲ್ಲಿ ಜನರನ್ನು ಸಾಗಿಸಬಾರದು ಎಂಬ ನಿಯಮವಿದೆ. ಹೀಗಿರುವಾಗ ಇದಕ್ಕೆ ಅವಕಾಶ ನೀಡಬೇಕು ಎಂದು ಪ್ರತಿಭಟನೆ, ನಿರಶನ ಮಾಡುವುದು ಸರಿಯಲ್ಲ, ಇದನ್ನು ತಾವು ಬದಲಾಯಿಸಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ, ಮಹಿಳೆಯರು ಮತ್ತು ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ಹಿತದೃಷ್ಠಿಯಿಂದ ಇನ್ನಾದರೂ ಕಾರ್ಖಾನೆ ಆಡಳಿತ ಮಂಡಳಿ ಸ್ವಂತ ವಾಹನ ಬಳಸಿ, ಇಲ್ಲವೇ ಸಾರಿಗೆ ಇಲಾಖೆಯಿಂದ ಎರವಲು ಸೇವೆ ಪಡೆದು ಉಪಯೋಗಿಸುವಂತೆ ಸಲಹೆ ನೀಡಿದರು.
ರಾಜ್ಯದ ಯಾವುದೇ ಭಾಗದಲ್ಲಾಗಲೀ ಗೂಡ್ಸ್ ವಾಹನ ಅಥವಾ ಆಟೋಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕರೆತರು ವುದನ್ನು ಮುಂದುವರಿಸಿದಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಗಳು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.