ಮೂಲಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲ
ಮಂಡ್ಯ

ಮೂಲಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲ

November 5, 2018
  •  ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್ ಆರೋಪ
  • ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ ಸಮರ್ಪಕ ನಿರ್ವಹಣೆಗೆ ಆಗ್ರಹ

ಕೆ.ಆರ್.ಪೇಟೆ:  ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿ ದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಕಾಪಾಡುವಿಕೆ, ಬೀದಿ ದೀಪಗಳ ನಿರ್ವಹಣೆಯ ವೈಫಲ್ಯದಿಂದÀ ನಾಗರಿಕರು ಹಲವು ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸ ಬೇಕಾದ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಹೆಚ್.ಆರ್. ಲೋಕೇಶ್ ಆರೋಪ ಮಾಡಿದರು.

ಪಟ್ಟಣದಲ್ಲಿ ಕಲುಷಿತ ನೀರನ್ನು ಪತ್ರಕರ್ತರ ಮುಂದೆ ಪ್ರದರ್ಶನ ಮಾಡಿ ಮಾತನಾಡಿದ ಅವರು, ಕೆ.ಆರ್.ಪೇಟೆ-ಹೊಸ ಹೊಳಲು ಅವಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ವಾಗಿದೆ. ವಾರಕ್ಕೊಮ್ಮೆ ನೀರು ಸರಬರಾಜು ಮಾಡುವ ಸ್ಥಿತಿ ಉಂಟಾಗಿದೆ. ಇದರಿಂದ ನಾಗರಿಕರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ತಿಳಿಸಿದರು.

ಕಿರು ನೀರು ಸರಬರಾಜು ಘಟಕ ಹಾಗೂ ಮೋಟಾರ್‍ಗಳು ಕೆಟ್ಟು ಹಲವು ತಿಂಗಳುಗಳು ಕಳೆದಿವೆ. ಕೆಲವೆಡೆ ಪೈಪ್ ಲೈನ್‍ಗಳು ಒಡೆದು ನೀರು ಸೋರಿಕೆಯಾಗುತ್ತಿದೆ. ನೀರು ಸರಬರಾಜು ಮಾಡುವ ವಾಲ್ವ್‍ಗಳು ಕೆಟ್ಟು ನಿಂತಿವೆ. ಇದರೊಳಗೆ ಕೊಳಚೆ ನೀರು ಸೇರಿ ಸಾರ್ವಜನಿಕರಿಗೆ ಕೊಳಚೆ ನೀರು ಸರಬರಾಜು ಆಗುತ್ತಿದೆ ಎಂದು ದೂರಿದರು. ನಾಗರಿಕರ ಮನವಿಗೆ ಅಧಿಕಾರಿ ಗಳು ಸ್ಪಂದಿಸುತ್ತಿಲ್ಲ. ಎಲ್ಲಾ ಬಡಾವಣೆಗಳಲ್ಲೂ ಕಸದ ರಾಶಿ ಬಿದ್ದಿದ್ದು, ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ. ಕಸ ಎತ್ತುವ ವಾಹನಗಳನ್ನು ನಿಲುಗಡೆ ಮಾಡಲಾಗಿದೆ. ಇದರಿಂದ ಪಟ್ಟಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ ಎಂದರು.

ಪುರಸಭೆ ಕಚೇರಿಯಲ್ಲಿ ಖಾತೆ ಬದಲಾವಣೆ ಮಾಡಲು ಹಾಗೂ ಇ-ಸ್ವತ್ತು ಪ್ರತಿ ಪಡೆಯಲು ನಾಗರಿಕರನ್ನು ತಿಂಗಳು ಗಟ್ಟಲೇ ಅಲೆಸಲಾಗುತ್ತಿದೆ. ಹಣ ಕೊಟ್ಟರೆ ಮಾತ್ರ ಕೆಲಸ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಾಗರಿಕರು ಪ್ರತಿದಿನ ಪುರ ಸಭೆಗೆ ಹಿಡಿ ಶಾಪ ಹಾಕುತ್ತಿದ್ದರೂ ಸಹ ಆಡಳಿತಾಧಿಕಾರಿಗಳಾದ ಪಾಂಡವಪುರ ಉಪವಿಭಾಗಾಧಿಕಾರಿಗಳು ಪುರಸಭೆ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಗಮನ ನೀಡದೇ ಇರುವುದರಿಂದ ಸಾರ್ವಜನಿಕರು ಪ್ರತಿದಿನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಜನರು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸಬೇಕು. ಶುದ್ಧ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Translate »