ಗ್ರಾಪಂ ಸದಸ್ಯನ ಬರ್ಬರ ಹತ್ಯೆ
ಮೈಸೂರು

ಗ್ರಾಪಂ ಸದಸ್ಯನ ಬರ್ಬರ ಹತ್ಯೆ

August 30, 2018

ಹುಣಸೂರು: ಹಾಡ ಹಗಲೇ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಣಸೂರು ತಾಲೂಕು ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿ ಇಂದು ಬೆಳಿಗ್ಗೆ ನಡೆದಿದ್ದು, ವಿವಾಹಿತ ಯುವತಿ ನಾಪತ್ತೆ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಕುಟ್ಟವಾಡಿ ಗ್ರಾಮದ ನಾಗರಾಜು (35) ಹತ್ಯೆಗೀಡಾದವರಾ ಗಿದ್ದು, ಇವರು ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿ ಶಾಮಿಯಾನ ಅಂಗಡಿ ನಡೆಸುತ್ತಿದ್ದರು.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿನಲ್ಲಿ ನಾಗರಾಜು ತನ್ನ ಶಾಮಿಯಾನ ಅಂಗಡಿಯಲ್ಲಿದ್ದಾಗ ಅಸ್ವಾಳ್ ಗ್ರಾಮದ ಕಾರ್ತಿಕ್ ಎಂಬಾತ ಎರಡು ಬೈಕ್‍ಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಬಂದು ಹಠಾತ್ತನೆ ಮಾರಕಾಸ್ತ್ರಗಳಿಂದ ತಲೆ ಹಾಗೂ ಕುತ್ತಿಗೆಗೆ ಹೊಡೆದು, ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನಾಗರಾಜುವನ್ನು ಆತನ ಸಹೋದರ ಚಂದ್ರು ನೆರೆ-ಹೊರೆಯವರ ಸಹಕಾರದೊಂದಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲ ಕಾರಿಯಾಗದೇ ನಾಗರಾಜು ಮೃತಪಟ್ಟಿದ್ದಾರೆ.

ಹಿನ್ನೆಲೆ: ಅಸ್ವಾಳ್ ಗ್ರಾಮದ ಯುವತಿ ಯನ್ನು ಶ್ರೀರಂಗಪಟ್ಟಣ ತಾಲೂಕು ಅಜ್ಜನ ಹಳ್ಳಿ ಗ್ರಾಮದ ಯುವಕನಿಗೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಆಕೆ ನಾಪತ್ತೆಯಾಗಿದ್ದು, ಆ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾಗಿದ್ದ ಯುವತಿ ನಾಗರಾಜು ಜೊತೆ ಇರುವುದನ್ನು ಪತ್ತೆ ಹಚ್ಚಿದ್ದ ಶ್ರೀರಂಗಪಟ್ಟಣ ಪೊಲೀಸರು, ಅವರಿಬ್ಬರನ್ನು ಠಾಣೆಗೆ ಕರೆತಂದು ನಾಗರಾಜು ಮತ್ತು ಯುವತಿಗೆ ಬುದ್ಧಿವಾದ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಆಕೆಯನ್ನು ಪತಿ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಕಳೆದ 2-3 ದಿನಗಳ ಹಿಂದೆ ಮತ್ತೆ ಆಕೆ ನಾಪತ್ತೆಯಾಗಿದ್ದು, ಆಕೆಯನ್ನು
ನಾಗರಾಜುವೇ ಕರೆದುಕೊಂಡು ಹೋಗಿರಬಹುದೆಂದು ಶಂಕಿಸಿ ಯುವತಿಯ ಸಹೋದರ ಕಾರ್ತಿಕ್ ತನ್ನ ಸ್ನೇಹಿತರೊಂದಿಗೆ ಕೆಂಡಗಣ್ಣ ಸ್ವಾಮಿ ಗದ್ದಿಗೆಗೆ ಬಂದು ಶಾಮಿಯಾನ ಅಂಗಡಿಯಲ್ಲಿದ್ದ ನಾಗರಾಜು ವನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮಧ್ವನಾಯಕ ಅವರು ಕಾರ್ತಿಕ್ ಮತ್ತು ಸ್ನೇಹಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಹಂತಕರಿಗಾಗಿ ಶೋಧ ಕಾರ್ಯ ನಡೆಸು ತ್ತಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಮಿತ್ ಸಿಂಗ್, ಹುಣಸೂರು ಡಿವೈಎಸ್‍ಪಿ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »