ವಿರಾಜಪೇಟೆ: ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಭವನದಲ್ಲಿ ನ.5 ರಂದು ನಡೆದ ಸಭೆಯಲ್ಲಿ ಅಂಕಣಕಾರ ಸಂತೋಷ್ ತಮ್ಮಯ್ಯ ಎಂಬುವರು ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡುವುದರೊಂದಿಗೆ ಇಲ್ಲಿನ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ವಿರಾಜಪೇಟೆ ಯೂತ್ ಫ್ರೆಂಡ್ಸ್ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರಲ್ಲದೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ್ದ ತಹಶಿಲ್ದಾರ್ ಆರ್.ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಯೂತ್ ಫ್ರೆಂಡ್ಸ್ ಅಧ್ಯಕ್ಷ ಎಜಾಸ್, ಕಾರ್ಯದರ್ಶಿ ಸಾಬಿತ್, ರಾಫಿ, ಎಸ್‍ಡಿಪಿಐ ಸದಸ್ಯರಾದ ರಫ್‍ಶೀರ್, ಶರೀಫ್, ಇಮ್‍ತ್ಯಾಜ್, ಅಬ್ಬಾಸ್, ಮುಖ್ತಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಸಂದರ್ಭ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದಕ್ಕೂ ಮೊದಲು ಮುಸ್ಲಿಂ ಜಮಾಹತೆ ವತಿಯಿಂದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಗೋಣಿಕೊಪ್ಪಲಿನಲ್ಲಿ ಅವಹೇಳನಕಾರಿ ಭಾಷಣ ಮಾಡಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಿದ ಸಂತೋಷ್ ತಮ್ಮಯ್ಯನ ಬಗ್ಗೆ ಕ್ರಮ ಕೈಗೊಳ್ಳುವಂತೆಯು ಆಗ್ರಹಿಸಿದರು. ಈ ಪ್ರತಿಭಟನೆ ಸಂದರ್ಭ ಎಸ್.ಹೆಚ್.ಮೈನುದ್ಧಿನ್, ಕನ್ನಡಿಯಂಡ ಜುಬೇರ್, ಎಸ್.ಹೆಚ್ ಮತೀನ್, ಸುಹೇಬ್, ಅಲೀಲ್ ಮುಂತಾದವರಿದ್ದರು.