ಮಂಡ್ಯ ಜನತೆಗಾಗಿ ನನ್ನ ಸ್ಪರ್ಧೆ
ಮೈಸೂರು

ಮಂಡ್ಯ ಜನತೆಗಾಗಿ ನನ್ನ ಸ್ಪರ್ಧೆ

March 21, 2019

ಮಂಡ್ಯ: ಅಂಬರೀಷ್ ತಮ್ಮ ಜೀವನದಲ್ಲಿ ಯಾರ ಬಳಿಯೂ ಕೈಚಾಚಿಲ್ಲ. ಶತ್ರುಗಳಿಗೂ ಕೊಡುತ್ತಿದ್ದ ಕೊಡುಗೈ ದಾನಿ ಅವರು. ಆದರೆ ಅವರ ಧರ್ಮಪತ್ನಿಯಾಗಿ ನಾನು ನಿಮ್ಮ ಬಳಿ ಕೈಚಾಚುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ. ಜೀವನ ಪೂರ್ತಿ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮನ್ನು ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭಾವುಕರಾಗಿ ನುಡಿದರು. ಇಂದು ಬೆಳಿಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಧ್ಯಾಹ್ನ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡುವಾಗ ಅವರು ಭಾವುಕರಾದರು. ಕೆಲ ಸೆಕೆಂಡ್‍ಗಳ ಕಾಲ ತಮ್ಮ ಭಾಷಣ ನಿಲ್ಲಿಸಿದ ನಂತರ ಸಾವರಿಸಿಕೊಂಡು `ನಾನು ಅಳಲ್ಲ. ನಿಮ್ಮೆಲ್ಲರ ಪ್ರೀತಿ ಇರುವಾಗ ನಾನು ಅಳಲ್ಲ….’ ಎಂದು ಹೇಳುತ್ತಾ ಕರಘೋಷದ ನಡುವೆ ಮಾತು ಮುಂದುವರೆಸಿದರು. ಮಂಡ್ಯ ಜನರು ಮುಗ್ಧರು. ಆದರೆ ಮುಠ್ಠಾಳರಲ್ಲ… ಎಂದು ಅಂಬರೀಷ್ ಹೇಳು ತ್ತಿದ್ದರು. ಅದು ನಿಜ. ಈಗ ಸ್ವಾಭಿಮಾನದ ಹೋರಾಟ ನಡೆಯುತ್ತಿದೆ. ಮಂಡ್ಯ ಜನರ ಸ್ವಾಭಿಮಾನ ಏನು ಎಂಬುದನ್ನು ನೀವು ತೋರಿಸಿಕೊಡಬೇಕು. ಅಂಬ ರೀಷ್ ಅವರನ್ನು ಎಲ್ಲರೂ `ಮಹಾರಾಜ’ ಎಂದು ಕರೆಯುತ್ತಿದ್ದರು. ಅವರನ್ನು ಮಹಾರಾಜರಾಗಿಯೇ ಕಳುಹಿಸಿಕೊಟ್ಟ ಜನ ನೀವು. ನಿಮ್ಮ ಆ ಋಣ ನನ್ನ ಮೇಲಿದೆ. ಅದು ನನ್ನ ಕರ್ತವ್ಯವೂ ಹೌದು. ಅಂಬ ರೀಷ್ ಮೇಲೆ ಪ್ರೀತಿ ಇಟ್ಟಿರುವ ಮಂಡ್ಯದ ಜನರಿಗಾಗಿ ನಾನು ಹೋರಾಟ ನಡೆಸುತ್ತಿದ್ದೇನೆ.
ಅದರಲ್ಲಿ ನೀವೂ ಕೈಜೋಡಿಸಿ ಎಂದು ಮನವಿ ಮಾಡಿದರು. ಆರಂಭದಲ್ಲಿ ತಮ್ಮನ್ನು ತಾವೇ ಪರಿಚಯಿಸಿಕೊಂಡ ಸುಮಲತಾ ಅವರು, `ನಾನು 40 ವರ್ಷ ಚಿತ್ರರಂಗದಲ್ಲಿದ್ದೆ. 5 ಭಾಷೆಗಳಲ್ಲಿ ನಟಿಸಿದ್ದೀನಿ. 27 ವರ್ಷ ಅಂಬರೀಷ್ ಅವರ ಧರ್ಮಪತ್ನಿಯಾಗಿ ಅವರ ಜೊತೆ ಇದ್ದೆ. ಇಂದು ನನ್ನ ಜೀವನದ ಮಹತ್ವದ ದಿನ. ಹೊಸ ಹೋರಾಟಕ್ಕೆ ಮೊದಲ ಹೆಜ್ಜೆ ಹಾಕಿದ ದಿನ ಎಂದರು.

ನಾನು ನಿಮ್ಮ ಮಳವಳ್ಳಿ ಹುಚ್ಚೇಗೌಡರ ಸೊಸೆ. ಈ ಮಣ್ಣಿನ ಸೊಸೆ. ಅಭಿಷೇಕ್ ಗೌಡನ ತಾಯಿ, ಈ ಮಣ್ಣಿನ ತಾಯಿ. ಅಂಬರೀಷ್ ಪತ್ನಿ. ಈ ಮಣ್ಣಿನ ಮಗಳು. ಮಂಡ್ಯದ ಸೊಸೆಯಾದ ನನ್ನನ್ನು ಯಾರು ಎಂದು ಕೇಳುವವರಿಗೆ ನಿಮ್ಮ ಉತ್ತರ ಕಾದಿದೆ ಎಂದು ತಿಳಿದಿದ್ದೇನೆ ಎಂದು ಹೇಳುವ ಮೂಲಕ ತಾನೂ ಮಂಡ್ಯದವಳೇ ಎಂದು ಸ್ಪಷ್ಟಪಡಿಸಿದರು. ಕಳೆದ 4 ತಿಂಗಳಲ್ಲಿ ನಾನು ಯಾವ ಮನಃಸ್ಥಿತಿಯಲ್ಲಿದ್ದೆ ಎಂಬುದು ಯಾವುದೇ ಹೆಣ್ಣು ಮಗಳು ಅರ್ಥಮಾಡಿಕೊಳ್ಳುತ್ತಾಳೆ. ಜೀವನದಲ್ಲಿ ಕತ್ತಲು ಆವರಿಸಿದ ಆ ದಿನಗಳಲ್ಲಿ ಮಂಡ್ಯದಿಂದ ಸಾವಿರಾರು ಜನರು ಬಂದು ಧೈರ್ಯ ಹೇಳಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ ಎಂಬ ಮಾತುಗಳು ನನಗೆ ಧೈರ್ಯ ತುಂಬಿತು. ಆಗ ನೀವು ಧೈರ್ಯ ತುಂಬದಿದ್ದರೆ ನಾನು ಏನಾಗುತ್ತಿದ್ದೇನೋ ಗೊತ್ತಿಲ್ಲ ಎಂದು ಅವರು ಹೇಳಿದರು. ಸಾವಿರಾರು ಅಂಬರೀಷ್ ಅಭಿಮಾನಿಗಳು ಬಂದು ನಾವು ನಿಮ್ಮ ಜೊತೆ ಇರುತ್ತೇವೆ. ನೀವೂ ನಮ್ಮ ಜೊತೆ ಇರಬೇಕು. ನಮ್ಮನ್ನು ಕೈಬಿಡಬಾರದು. ನೀವು ಕೈಬಿಟ್ಟರೆ ಮಂಡ್ಯದ ಸೊಸೆಯೇ ಅಲ್ಲ ಎಂದು ಹೇಳಿದ್ದರು. ಆದರೆ ನನಗೆ ರಾಜಕೀಯದ ಎಬಿಸಿಡಿ ಗೊತ್ತಿಲ್ಲ. ನನಗೆ ಏನು ಅರ್ಹತೆ ಇದೆ ಎಂದು ನನ್ನನ್ನು ರಾಜಕೀಯಕ್ಕೆ ಕರೆಯುತ್ತೀರಿ ಎಂದು ಕೇಳಿದಾಗ ಅಂಬರೀಷ್ ಅವರು ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ನೀವು ಆ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೀರಿ. ಅಂಬರೀಷ್ ಅವರ ಕನಸು ನಿಮ್ಮ ಮೂಲಕ ನನಸು ಮಾಡಬೇಕಾಗಿದೆ ಎಂದು ಹೇಳಿ ನನ್ನನ್ನು ರಾಜಕಾರಣಕ್ಕೆ ಕರೆದುಕೊಂಡು ಬಂದವರು ನೀವು. ಕಳೆದ ಮೂರು ವಾರದಿಂದ ಮಂಡ್ಯದ ಮೂಲೆ ಮೂಲೆಗೂ ತೆರಳಿ ಜನರ ಅಭಿಪ್ರಾಯ ಕೇಳಿದಾಗ ಎಲ್ಲರೂ ನನ್ನನ್ನು ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ನಾನು ಸ್ಪಂದಿಸಿದ್ದೇನೆ ಎಂದರು.

ನಾನು ಮತ್ತು ಅಭಿಷೇಕ್ ಮನೆಯಲ್ಲಿ ಆರಾಮವಾಗಿ ಕುಳಿತು ನೆಮ್ಮದಿಯ ಜೀವನ ಸಾಗಿಸಬಹುದಿತ್ತು. ಇಂದು ಅಂಬರೀಷ್ ಇಲ್ಲ. ಆದರೆ ಜೀವನ ಪೂರ್ತಿ ನೆಮ್ಮದಿಯಾಗಿ ಇರುವುದಕ್ಕೆ ಏನೇನು ಮಾಡಬೇಕೋ ಎಲ್ಲವನ್ನು ಅವರು ಮಾಡಿಕೊಟ್ಟಿದ್ದಾರೆ. 40 ವರ್ಷ ಚಿತ್ರರಂಗದಲ್ಲಿದ್ದು, 5 ಭಾಷೆಗಳಲ್ಲಿ 200 ಚಿತ್ರಗಳಲ್ಲಿ ಅಭಿನಯಿಸಿರುವವಳು ನಾನು. ನನಗೆ ಅಸ್ತಿತ್ವವಿದೆ. ಅಂಬರೀಷ್ ಹೆಸರು ನನ್ನ ಜೊತೆಗಿದೆ. ರಾಜಕೀಯಕ್ಕೆ ಬಂದು ನಾನು ಹೆಸರು ಮಾಡಬೇಕಾಗಿಲ್ಲ. ಆದರೆ ನಿಮ್ಮ ಪರವಾಗಿ ನಿಲ್ಲುವ ಕಠಿಣ ಹಾದಿ ತುಳಿದಿದ್ದೇನೆ. ಇದರಿಂದ ಏನೇನು ಕಷ್ಟವಿದೆ, ಯಾವ್ಯಾವ ಮಾತುಗಳನ್ನು ಕೇಳಬೇಕಾಗಿದೆ, ಎಷ್ಟು ಅವಮಾನ ಅನುಭವಿಸಬೇಕಾಗಿದೆ ಎಂಬುದೂ ನನಗೆ ಗೊತ್ತು. ಆದರೆ ಸುಲಭವಾಗಿ ಜೀವನ ಸಾಗಿಸುವುದಕ್ಕಿಂತ ಅಂಬರೀಷ್ ಅವರ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲು ಇಚ್ಛಿಸದ ಜನರ ಪರವಾಗಿ ನಿಲ್ಲುವುದು ಸರಿಯಾದ ದಾರಿ ಎಂದು ರಾಜಕೀಯಕ್ಕೆ ಬಂದಿದ್ದೇನೆ ಎಂದರು. ಅಂಬರೀಷ್ ಕಾಂಗ್ರೆಸ್‍ನಲ್ಲಿದ್ದು, ಹಲವಾರು ವರ್ಷ ಆ ಪಕ್ಷಕ್ಕಾಗಿ ದುಡಿದಿದ್ದಾರೆ. ಆ ಕಾರಣದಿಂದಾಗಿ ಕಾಂಗ್ರೆಸ್ ಬಾಗಿಲು ತಟ್ಟಿದೆ. ಮಂಡ್ಯ ಜನರ ಅಭಿಪ್ರಾಯವನ್ನು ಅವರ ಮುಂದೆ ಇಟ್ಟೆ. ನಿಮಗೆ ಮಂಡ್ಯ ಜನರು ಬೇಡವೇ? ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಚಿಂತೆ ಇಲ್ಲವೇ? ಎಂದು ಪ್ರಶ್ನಿಸಿದೆ. ಆದರೆ ಅವರು ನಾವು ನಿಸ್ಸಹಾಯಕರು. ಏನೂ ಮಾಡಲು ಆಗುವುದಿಲ್ಲ. `ಮೈತ್ರಿ ಧರ್ಮ’ ಎಂದು ಹೇಳಿದರು. ಆದರೆ ಈಗ ಮೈತ್ರಿ ಧರ್ಮವನ್ನು ಯಾರು, ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೀರಿ. ಕಾರ್ಯಕರ್ತರಿಗೆ ಮತ್ತು ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದೆಲ್ಲಾ ನಡೆಯುತ್ತಾ ಎಂದು ಸುಮಲತಾ ಪ್ರಶ್ನಿಸಿದಾಗ ನೆರೆದಿದ್ದ ಜನರು `ನಡೆಯುವುದಿಲ್ಲಾ’ ಎಂದು ಕೂಗಿದರು.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ನನ್ನ ವಿರುದ್ಧ ಮಾತುಗಳು ಬಾಣಗಳಂತೆ ಬರಲು ಶುರುವಾಯಿತು. ಅವರ ಮಾತುಗಳಿಗೆ ನಾನು ಉತ್ತರ ಕೊಡಲ್ಲ. ಅದಕ್ಕೆ ಅಂಬರೀಷ್ ಅವರ ಜನರು ಇದ್ದಾರೆ. ಇನ್ನು ಮುಂದೆ ಛಾಲೆಂಜ್ ಇದೆ. ಆಗಲೂ ನಾನು ಮಾತನಾಡಲ್ಲ. ನನ್ನ ಪರವಾಗಿ ನೀವೇ ಮಾತನಾಡಬೇಕು ಎಂಬ ಬಯಕೆ ನನ್ನದು ಎಂದು ಹೇಳಿದರು. ಇಂದು ಈ ಸಮಾವೇಶದ ಸುದ್ದಿ ಜನರಿಗೆ ತಲುಪಬಾರದು ಎಂದು ಮಂಡ್ಯದಲ್ಲಿ ಕೇಬಲ್ ಕಟ್ ಮಾಡಿದ್ದಾರೆ. ಆದರೆ ಇವರು ಜನರ ಪ್ರೀತಿಯನ್ನು ಕಟ್ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Translate »