ಸುಮಲತಾ ನಾಮಪತ್ರ ಸಲ್ಲಿಕೆ
ಮೈಸೂರು

ಸುಮಲತಾ ನಾಮಪತ್ರ ಸಲ್ಲಿಕೆ

March 21, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿ ಸಿದ ಸುಮಲತಾ ಅಂಬರೀಷ್ ಅವರು, ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರು, ಅಂಬರೀಷ್ ಅಭಿಮಾನಿ ಗಳಲ್ಲದೆ ಎಲ್ಲಾ ಸಮಾಜದ ಜನಸಾಗರದ ನಡುವೆ ಬೃಹತ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು.

ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ, ಬೆಳಿಗ್ಗೆ 11.20ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಗಂಗಾಮತ ಸಮಾಜದ ಬಸ್ ನಂಜುಂಡಪ್ಪ, ದಲಿತ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮುಸ್ಲಿಂ ಮುಖಂಡ ಅನ್ವರ್ ಪಾಷಾ, ಒಕ್ಕಲಿಗ ಮುಖಂಡ ಮಧುಸೂದನ್ ಹಾಜರಿದ್ದರು. ಹೀಗೆ ನಾಲ್ಕು ಜನಾಂಗದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ನಾಯ ಕರ `ಅಹಿಂದ’ ತತ್ವ ಪಾಲನೆಗೆ ಸೆಡ್ಡು ಹೊಡೆದರು.

ನಂತರ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಕಾವೇರಿ ವಿದ್ಯಾವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನ ರಾಂ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ಸುಮಲತಾ ಅವರು ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆಯೇ ಸಾಗರೋಪಾದಿ ನೆರೆದಿದ್ದ ಅಂಬ ರೀಷ್ ಅಭಿಮಾನಿಗಳು, ಕಾಂಗ್ರೆಸ್ ಮತ್ತು ರೈತ ಸಂಘದ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸುಮಲತಾ ತೆರೆದ ವಾಹನದಲ್ಲಿ ರ್ಯಾಲಿ ಆರಂಭಿಸಿದರು. ರ್ಯಾಲಿ ಯಲ್ಲಿ ಅಂಬರೀಷ್ ಅವರ ಭಾವಚಿತ್ರ ರಾರಾಜಿಸು ತ್ತಿದ್ದವು. ಅವರಿಗೆ ಚಿತ್ರನಟರಾದ ಯಶ್, ದರ್ಶನ್, ದೊಡ್ಡಣ್ಣ, ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಂಬರೀಷ್ ಪುತ್ರ ಅಭಿಷೇಕ್ ಸಾಥ್ ನೀಡಿದರು. ವರ್ಣರಂಜಿತ ರ್ಯಾಲಿಗೆ ಕಂಸಾಳೆ, ಡೊಳ್ಳು ಕುಣಿತ ಸೇರಿದಂತೆ ನಾನಾ ಜಾನಪದ ಕಲಾತಂಡಗಳು ಮೆರಗು ನೀಡಿದವು. ಮದ್ದೂರು, ಮಳವಳ್ಳಿ, ನಾಗಮಂಗಲ, ಮೇಲುಕೋಟೆ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ಕೆ.ಆರ್.ನಗರದಿಂದ ಆಗಮಿಸಿದ್ದ ಸಾವಿರಾರು ಕಾರ್ಯ ಕರ್ತರು ಅಂಬರೀಷ್, ಸುಮಲತಾ, ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ, ಚಿತ್ರನಟರಾದ ಯಶ್ ಮತ್ತು ದರ್ಶನ್ ಹಾಗೂ ಅಭಿಷೇಕ್ ಪರ ಜೈಕಾರ ಮೊಳಗಿಸಿದರು.

ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆ ಯದೇ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಬಹು ಸಂಖ್ಯೆ ಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕೆಲವರಂತೂ ಕಾಂಗ್ರೆಸ್ ಧ್ವಜ ಹಿಡಿದು ರ್ಯಾಲಿಯಲ್ಲಿ ಸಾಗಿದರು. ರೈತ ಸಂಘದ ಕಾರ್ಯಕರ್ತರೂ ಸಂಘದ ಧ್ವಜ ಹಿಡಿದು ಹಸಿರು ಟವಲ್ ಪ್ರದರ್ಶಿಸುತ್ತಾ, ರ್ಯಾಲಿ ಯಲ್ಲಿ ಮುನ್ನಡೆದರು. ಅಂಬರೀಷ್ ಚಿತ್ರಗಳ ಹಾಡು ಗಳು ಮೊಳಗುತ್ತಿದ್ದು, `ಮಂಡ್ಯದ ಗಂಡು ಮುತ್ತಿನ ಚೆಂಡು’ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿ ಸಿದರು. ಮದ್ದೂರು ಮತ್ತು ಶ್ರೀರಂಗಪಟ್ಟಣದಿಂದ ಸುಮಾರು ಸಾವಿರಕ್ಕೂ ಹೆಚ್ಚು ಯುವಕರು ಸುಮ ಲತಾ ಪರ ಮಂಡ್ಯವರೆಗೆ ಬೈಕ್ ರ್ಯಾಲಿ ನಡೆಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸುಮಲತಾ ಇಂಡು ವಾಳು ಗ್ರಾಮದಲ್ಲಿರುವ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ನಿವಾಸಕ್ಕೆ ತೆರಳಿದ್ದರು. ಅಲ್ಲಿಗೆ ಚಿತ್ರನಟರಾದ ಯಶ್ ಮತ್ತು ದರ್ಶನ್ ಕೂಡ ಆಗಮಿಸಿದ್ದರು. ಸುದ್ದಿಗಾರರ ಜೊತೆ ಮಾತನಾಡಿದ ಇಂಡುವಾಳು ಸಚ್ಚಿದಾನಂದ, `ಈ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸುಮಲತಾ ಅವರನ್ನು ಬೆಂಬಲಿಸುತ್ತಿದ್ದು, ಸಂಧಾನ ಕ್ಕಾಗಿ ಪಕ್ಷದ ವರಿಷ್ಠರು ಜಿಲ್ಲೆಗೆ ಬರುವುದು ಬೇಡ. ಜಿಲ್ಲೆಯಲ್ಲಿ ಪಕ್ಷದ ಉಳಿವಿಗಾಗಿ ಸುಮಲತಾ ಅವರನ್ನು ಬೆಂಬಲಿಸುತ್ತಿದ್ದೇವೆ’ ಎಂದರು.

Translate »