ಮೈಸೂರು: ಆಗಸ್ಟ್ 31ರಂದು ನಡೆಯಲಿರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್‍ಗಳ ಚುನಾವಣೆಗೆ ಒಟ್ಟು 725 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಡಿಷನಲ್ ಡಿಸಿ ಟಿ.ಯೋಗೇಶ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 3,97,692 ಮಹಿಳೆಯರೂ ಸೇರಿದಂತೆ ಒಟ್ಟು 7,99,422 ಮತದಾರರು ಹಕ್ಕು ಚಲಾಯಿಸಲಿದ್ದು, ವಿಧಾನಸಭಾ ಚುನಾವಣೆ ವೇಳೆ ಪರಿಷ್ಕರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಹೆಸರಿರುವವರೆಲ್ಲರೂ ಪಾಲಿಕೆ ಚುನಾವಣೆಯಲ್ಲಿ ಮತ ಹಾಕಲು ಹಕ್ಕುಳ್ಳವರಾಗಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತೀ ಮತಗಟ್ಟೆಗೆ ಓರ್ವ ಅಧ್ಯಕ್ಷಾಧಿಕಾರಿ (Returning Officer) ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
21 ವರ್ಷ ಮೇಲ್ಟಟ್ಟವರು ಚುನಾವಣೆಗೆ ಸ್ಪರ್ಧಿಸಬಹುದಾಗಿದ್ದು, ಅಭ್ಯರ್ಥಿಗಳಾಗ ಬಯಸುವವರು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬರು, ಪಕ್ಷೇತರ ಅಭ್ಯರ್ಥಿಗಳಿಗೆ 6 ಮಂದಿ ಸೂಚಕರಾಗಿ ಸಹಿ ಮಾಡಬೇಕು. ಆದರೆ ಸೂಚಕರು ಆಯಾ ವ್ಯಾಪ್ತಿಯ ವಾರ್ಡ್ ನಿವಾಸಿಯಾಗಿರಬೇಕು.
ಸಾಮಾನ್ಯ ವರ್ಗದವರು 5000 ರೂ. ಹಾಗೂ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳು 2500 ರೂ. ಠೇವಣಿ ಕಟ್ಟಬೇಕು. ನಮೂನೆ-2ರಲ್ಲಿ ನಾಮಪತ್ರ ಮತ್ತು ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ (ಅಫಿಡವಿಟ್)ಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಯೋಗೇಶ್ ತಿಳಿಸಿದರು.
ಇದೇ ಪ್ರಥಮ ಬಾರಿಗೆ ಮತ ಪತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಮುದ್ರಿಸಬೇಕಾಗಿರುವುದರಿಂದ ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರವನ್ನು ಅಭ್ಯರ್ಥಿಗಳಾಗಬಯಸುವವರು ನಾಮಪತ್ರದೊಂದಿಗೆ ಸಲ್ಲಿಸಬೇಕಾಗಿದೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿಯನ್ನೊಳಗಂಡಂತೆ ಒಟ್ಟು 5 ಮಂದಿ ಮಾತ್ರ ಚುನಾವಣಾಧಿಕಾರಿ ಕಚೇರಿಗೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸಿದ ದಿನದಿಂದ ಫಲಿತಾಂಶ ಘೋಷಣೆಯಾಗುವ ದಿನಾಂಕದವರೆಗೆ ಮೈಸೂರು ಮಹಾನಗರ ಪಾಲಿಕೆ ಅಭ್ಯರ್ಥಿಗಳು 3 ಲಕ್ಷ ರೂ.ವರೆಗೆ ಮಾತ್ರ ವೆಚ್ಚ ಮಾಡಬಹುದು. ವೆಚ್ಚದ ಮೇಲೆ ನಿಗಾ ಇಡಲು ಮತ್ತು ಅವರು ಬಳಸುವ ವಾಹನಗಳು, ಕರಪತ್ರ, ಪ್ರಕಟಣೆ, ಪೋಸ್ಟರ್‍ಗಳು ಬ್ಯಾನರ್‍ಗಳ ಪರಿಶೀಲನೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿದ್ಯುನ್ಮಾನ ಯಂತ್ರಗಳನ್ನು ಬಳಸುತ್ತಿದ್ದು, ಈ ಭಾರಿ ಮತ ಪತ್ರದಲ್ಲಿ NOTA ಗೆ ಅವಕಾಶ ಕಲ್ಪಿಸಲಾಗಿದೆ. ನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ ಹಾಗೂ ವಾರ್ತಾ ಇಲಾಖೆ ಸಹಾಯ ನಿರ್ದೇಶಕ ರಾಜು ಅವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.