ಕನ್ನಡ ಭಾಷೆ-ಸಾಹಿತ್ಯ, ಕಲೆ ಉಳಿವಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ
ಹಾಸನ

ಕನ್ನಡ ಭಾಷೆ-ಸಾಹಿತ್ಯ, ಕಲೆ ಉಳಿವಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ

September 9, 2018

ಹಾಸನ: ಹತ್ತೊಂಬತ್ತನೇ ಶತಮಾನದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರಾಂತ್ಯಗಳನ್ನು ಒಗ್ಗೂಡಿಸಿದ ಮೈಸೂರು ಸಂಸ್ಥಾನ, ಭಾಷೆ-ಸಾಹಿತ್ಯ, ಕಲೆ ಉಳಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಮೈಸೂರಿನ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾ ಪೂರ್ವ ಮತ್ತು ನಂತರದ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮೈಸೂರು ಮಹಾಸಂಸ್ಥಾನ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದೆ. ನಮ್ಮ ಕಲೆ, ಸಾಹಿತ್ಯ ಮತ್ತು ಪರಂಪರೆ ಉಳಿಸಿ ಕೊಳ್ಳಲು ಪ್ರತಿ ವರ್ಷ ಸಮ್ಮೇಳನ ನಡೆಸುತ್ತಾ ಬಂದಿತ್ತು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಲಾಯಿತು. ಮೈಸೂರಿನ ಒಡೆಯರ ಸಹಕಾರದಿಂದ ಹೆಚ್.ವಿ.ನಂಜುಂಡಯ್ಯ ಅಂದು ಕಸಾಪ ಸ್ಥಾಪಿಸಿದರು. ಇದು ಇಂದು ಭಾಷೆಯ ಉಳಿವು, ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ದ ಲಿಂಗರಾಜೇ ಅರಸು ಮಾತನಾಡಿ, ಮೈಸೂರು ಸಂಸ್ಥಾನ ಉತ್ತಮ ಆಡಳಿತ ನೀಡುವ ಮೂಲಕ ಇಡೀ ದೇಶದಲ್ಲೇ ಹೆಸರು ವಾಸಿಯಾಗಿದೆ ಎಂದು ಸ್ಮರಿಸಿದರು.

ಜಿಲ್ಲಾ ಕಸಾಪ ಗೌರವಾಧ್ಯಕ್ಷ ರವಿ ನಾಕಲಗೂಡು ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರತಿ ವರ್ಷವೂ ಕಸಾಪದಿಂದ ವಿನೂತನ ಕಾರ್ಯಕ್ರಮ ಆಯೋಜಿಸಿ ಕೊಂಡು ಬಂದಿದ್ದು, ಈ ಬಾರಿ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮ ಇಷ್ಟೊಂದು ಯಶಸ್ಸಿಗೆ ಮೈಸೂರಿನ ಯುವ ರಾಜರು ಆಗಮಿಸಿರುವುದು ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಇಂತಹ ಅದ್ಭುತ ಮತ್ತು ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಆಯೋ ಜಿಸಿರುವುದರಿಂದ ಮೈಸೂರಿನ ಯುವ ರಾಜರನ್ನು ಜಿಲ್ಲೆಯ ಜನ ಕಣ್ತುಂಬಿಕೊಂಡಿ ದ್ದಾರೆ. ಕರ್ನಾಟಕಕ್ಕೆ ಮೈಸೂರು ಮಹಾ ರಾಜರ ಕೊಡುಗೆ ಅಪಾರ ಎಂದರು.

ಕಸಾಪ ಜಿಲ್ಲಾಧ್ಯಕ್ಷ ನಾ.ಮಂಜೇಗೌಡ, ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ್ ಗುರೂಜಿ ಮಾತನಾ ಡಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಮಂಟೇ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಎಂ.ಎಲ್. ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಅವರನ್ನು ಸನ್ಮಾನಿಸಲಾಯಿತು.

Translate »