ಉದ್ಘಾಟನೆಗೊಂಡು ವರ್ಷವಾದರೂ ಕಾರ್ಯಾರಂಭವಾಗದ ಮೈಸೂರು ಹೊಸ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ
ಮೈಸೂರು

ಉದ್ಘಾಟನೆಗೊಂಡು ವರ್ಷವಾದರೂ ಕಾರ್ಯಾರಂಭವಾಗದ ಮೈಸೂರು ಹೊಸ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ

May 14, 2019

ಮೈಸೂರು: ಮಹದುದ್ದೇಶ ಹಾಗೂ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸ ಲಾದ ಬಹುಕೋಟಿ ವೆಚ್ಚದ ಮೈಸೂರು ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ ಬೃಹತ್ ಕಟ್ಟಡ ಉದ್ಘಾಟನೆಗೊಂಡು 14 ತಿಂಗಳಾದರೂ, ಬಳಕೆಯಾಗದೇ ಖಾಲಿ ಬಿದ್ದಿದೆ. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಾಗಿದ್ದಾಗ ತವರು ಜಿಲ್ಲೆಗೆ ಸುಸ ಜ್ಜಿತ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ ಕಟ್ಟಡವನ್ನು ನಿರ್ಮಿಸಿ ಮೈಸೂರಿನ ಪಾರಂ ಪರಿಕ ಕಟ್ಟಡದಲ್ಲಿರುವ ಹಾಲಿ ಜಿಲ್ಲಾಧಿ ಕಾರಿ ಕಚೇರಿ ಹಾಗೂ ಮೈಸೂರಿನ ವಿವಿಧೆಡೆ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ನಾನಾ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಿ ಒಂದೇ ಸೂರಿನಡಿ ತರ ಬೇಕೆಂಬ ಉದ್ದೇಶದಿಂದ ಈ ಬೃಹತ್ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿದ್ದರು.

ಕೇಂದ್ರ ಸರ್ಕಾರ ಅಧೀನದ ಜರ್ಮನ್ ಪ್ರೆಸ್‍ಗೆ ನೀಡಿದ್ದ ಭೂಮಿಯು ಗುತ್ತಿಗೆ ಅವಧಿ ಮುಕ್ತಾಯವಾದ ಕಾರಣ ಸಂಸದ ಪ್ರತಾಪ್ ಸಿಂಹ, ಆಗ ಶಾಸಕರಾಗಿದ್ದ ವಾಸು ಹಾಗೂ ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಆಸಕ್ತಿ ವಹಿಸಿ ಸಿದ್ಧಾರ್ಥ ಬಡಾವಣೆ ಬಳಿ ಬನ್ನೂರು ರಸ್ತೆಯ ಈ ಜಾಗವನ್ನು ಜಿಲ್ಲಾಡಳಿತದ ಕಂದಾಯ ಇಲಾಖೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಸಿದ್ದು ಕನಸಿನ ಕೂಸು: ಎರಡೂವರೆ ವರ್ಷಗಳ ಹಿಂದೆ ಮೈಸೂರು-ಹುಣ ಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯು ಕ್ತರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಒಂದು ಸುಸಜ್ಜಿತ ಜಿಲ್ಲಾ ಕಚೇರಿ ಗಳ ಸಂಕೀರ್ಣ ಕಟ್ಟಡ ನಿರ್ಮಿಸಿ, ಎಲ್ಲಾ ಇಲಾಖೆಗಳೂ ಒಂದೇ ಸೂರಿನಡಿ ಕೆಲಸ ಮಾಡುವಂತೆ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.

ಸೂಕ್ತ ಜಾಗ ಹುಡುಕಿ, ಕಂದಾಯ ಇಲಾಖೆಯಿಂದ ಹಣ ನೀಡಿ ಲೋಕೋಪ ಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಿಂದ ನೂತನ ಕಟ್ಟಡ ನಿರ್ಮಿಸಿ ಎಂದು ಸೂಚನೆ ನೀಡಿದ್ದ ಸಿದ್ದ ರಾಮಯ್ಯ, ಆದಷ್ಟು ಬೇಗ ಯೋಜನೆ ಕೈಗೆತ್ತಿಕೊಂಡು
ಪೂರ್ಣಗೊಳಿಸಿ ಎಂದು ಆದೇಶಿಸಿದ್ದರು. ನಂತರ ಅವರೇ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ನಾನೇ ಉದ್ಘಾಟನೆಯನ್ನೂ ಮಾಡುವಂತೆ ತ್ವರಿತವಾಗಿ ಕಾಮ ಗಾರಿ ಮುಗಿಸುವಂತೆಯೂ ತಾಕೀತು ಮಾಡಿದ್ದರು.

ಜಿಲ್ಲಾ ಮಂತ್ರಿ ಆಸಕ್ತಿ: ಸಿದ್ದರಾಮಯ್ಯ ಯೋಜನೆಯಂತೆ ಅಂದಿನ ಲೋಕೋಪ ಯೋಗಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಇಲಾಖೆಯಿಂದ 59 ಕೋಟಿ ರೂ.ಗಳ ಅಂದಾಜು ಪ್ರಸ್ತಾಪ ತಯಾರಿಸಿ ಡಿಪಿಆರ್‍ಗೆ ಸರ್ಕಾರದಿಂದ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನಮೋದನೆ ಪಡೆದು ಕಾಮಗಾರಿಗೆ ಗ್ರೀನ್ ಸಿಗ್ನಲ್ ಪಡೆದಿದ್ದರು.

ಶಿಲಾನ್ಯಾಸ: ಗ್ಲೋಬಲ್ ಟೆಂಡರ್ ಮೂಲಕ ಯೋಜನೆಯನ್ನು ಪುಣೆ ಮೂಲದ ಬಿ.ಜಿ. ಶಿರ್ಕೆ ಕನ್‍ಸ್ಟ್ರಕ್ಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‍ಗೆ ಕಾಮಗಾರಿ ವಹಿಸಿ 2016ರ ಡಿಸೆಂಬರ್ 15 ರಂದು ಸಿದ್ದರಾಮಯ್ಯ ಅವರೇ ಶಿಲಾನ್ಯಾಸ ನೆರವೇರಿಸಿ ದ್ದರೂ, ಗುತ್ತಿಗೆ ಅವಧಿ (18 ತಿಂಗಳು)ಯೊಳಗೆ ಪೂರ್ಣಗೊಂಡ ಲಲಿತ ಮಹಲ್ ಹೋಟೆಲ್ ಪ್ಯಾಲೇಸ್ ಹೋಲುವ ಇಂಡೋ ಸಾರ್ಸನಿಕ್ ಶೈಲಿಯ ಹೊಸ ಬೃಹತ್ ಕಟ್ಟಡವನ್ನು 2018ರ ಮಾರ್ಚ್ 10ರಂದು ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು.

22,920 ಚ.ಮೀ. ವಿಸ್ತೀರ್ಣ: ತಳಮಹಡಿ 9,150 ಚ.ಮೀ, ನೆಲ ಮಹಡಿ 4,720 ಚ.ಮೀ., ಮೊದಲನೇ ಮಹಡಿ 4,500 ಚ.ಮೀ. ಹಾಗೂ ಎರಡನೇ ಮಹಡಿ 4,550 ಚ.ಮೀ. ಸೇರಿ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ ಕಟ್ಟಡ ಒಟ್ಟು 22,920 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಅದು ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಅದರ ಒಟ್ಟು ವೆಚ್ಚ 84.66 ಕೋಟಿ ರೂ. ತಲುಪಿತು.

11 ಇಲಾಖೆಗಳಿಗೆ ಅವಕಾಶ: ಹೊಸ ಕಟ್ಟಡದಲ್ಲಿ ಒಟ್ಟು 11 ಇಲಾಖೆಗಳಿಗೆ ಸ್ಥಳಾವ ಕಾಶ ಕಲ್ಪಿಸಲಾಗಿದ್ದು, ತಳಮಹಡಿಯಲ್ಲಿ ವಾಹನ ನಿಲುಗಡೆ, ನೆಲಮಹಡಿಯಲ್ಲಿ ಜಿಲ್ಲಾ ಖಜಾನೆ ಹಾಗೂ ಮುಜರಾಯಿ ಇಲಾಖೆ, ಮೊದಲ ಮಹಡಿಯಲ್ಲಿ ಜಿಲ್ಲಾಧಿ ಕಾರಿ ಕಚೇರಿ ಹಾಗೂ ಎರಡನೇ ಮಹಡಿಯಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಮೀನುಗಾರಿಕಾ ಇಲಾಖೆ, ಅಬಕಾರಿ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ನಿಗಮಕ್ಕೆ ಅವಕಾಶ ಕಲ್ಪಿಸಲಾಗಿದೆ. 12 ಮಂದಿ ಸಾಮಥ್ರ್ಯದ 2 ಹಾಗೂ ಕ್ಯಾಪ್ಸೂಲ್ ಮಾದರಿಯ 1 ಗಾಜಿನ ಲಿಫ್ಟ್ ಅನ್ನು ಕಟ್ಟಡಕ್ಕೆ ಅಳವಡಿಸಲಾಗಿದೆ. ಆದರೆ ಕಳೆದ 14 ತಿಂಗಳಿಂದ ಈ ಲಿಫ್ಟ್‍ಗಳು ಕಾರ್ಯಾಚರಿಸಿಲ್ಲ.

ಬಳಕೆಯಾಗಲಿಲ್ಲ: ಕಟ್ಟಡ ಪೂರ್ಣಗೊಂಡರೂ, ಸರ್ಕಾರಿ ವಿವಿಧ ಇಲಾಖೆ ಹಾಗೂ ಡಿಸಿ ಕಚೇರಿಗಳು ಸ್ಥಳಾಂತರಗೊಳ್ಳದ ಕಾರಣ 84.66 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಹೊಸ ಸಂಕೀರ್ಣ ಕಟ್ಟಡ ಖಾಲಿ ಬಿದ್ದಿದೆ. ಪರಿಣಾಮ ಕಸ ಗುಡಿಸಿ ನಿರ್ವಹಣೆ ಮಾಡದ ಕಾರಣ ಕಟ್ಟಡದ ಹಲವೆಡೆ ಪಕ್ಷಿಗಳು ಗೂಡು ಕಟ್ಟಿಕೊಂಡಿವೆ. ಆವರಣದಲ್ಲಿ ಗಿಡಗಂಟಿ ಬೆಳೆದುಕೊಂಡು ಕಾಡು ಕೊಂಪೆಯಂತೆ ಕಾಣಿಸುತ್ತಿದೆ.
2ನೇ ಹಂತದ ಕಾಮಗಾರಿ: ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದರೂ ಬಳಕೆಯಾಗಿಲ್ಲ. ಈಗ ಎರಡನೇ ಹಂತದ ವಿಸ್ತøತ ಯೋಜನೆಗೆ ಲೋಕೋಪಯೋಗಿ ಇಲಾಖೆಯು 38 ಕೋಟಿ ರೂ.ಗಳಿಗೆ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದೆ. ಈ ಕಟ್ಟಡ ಪೂರ್ಣಗೊಂಡರೆ ಉಳಿದ 17 ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳು ಸ್ಥಳಾಂತರಗೊಳ್ಳಬೇಕಾಗಿದೆ. ಲೋಕೋಪಯೋಗಿ ಇಲಾಖೆ ಮಾಜಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಸತ್ಯನಾರಾಯಣ, ಕಟ್ಟಡ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಚಂದ್ರ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಕೃಷ್ಣ, ಅಸಿಸ್ಟೆಂಟ್ ಇಂಜಿನಿಯರ್ ಗಳಾದ ಎಸ್.ವಿ. ಭಾಸ್ಕರ್, ವಾಸು ಇತರರು ಯೋಜನೆಯ ಮೇಲ್ವಿಚಾರಣೆ ನಡೆಸಿದ್ದರು.

ಎಸ್.ಟಿ. ರವಿಕುಮಾರ್

Translate »