‘ದಳ’ಪತಿಗಳ ವಾಗ್ಬಾಣಕ್ಕೆ ‘ಕೈ’ ನಾಯಕರು ಕಂಗಾಲು
ಮೈಸೂರು

‘ದಳ’ಪತಿಗಳ ವಾಗ್ಬಾಣಕ್ಕೆ ‘ಕೈ’ ನಾಯಕರು ಕಂಗಾಲು

May 14, 2019

ಬೆಂಗಳೂರು: ಕೊಡಗಿನ ಇಬ್ಬನಿ ರೆಸಾರ್ಟ್‍ನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ರಾಂತಿ ಪಡೆದರೋ ಅಥವಾ ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ತಂತ್ರಗಾರಿಕೆ ಅಸ್ತ್ರ ರೂಪಿಸಿದರೋ ಎಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ನಡುಕ ಆರಂಭವಾಗಿದೆ. ಈ ವಾಸ್ತವ್ಯದ ನಂತರವೇ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಸಂಸದ ಕುಪೇಂದ್ರ ರೆಡ್ಡಿ ಮತ್ತು ಕುಮಾರಸ್ವಾಮಿ ಬೆಂಬಲಿಗರು, ಕಾಂಗ್ರೆಸ್ ಮತ್ತು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಮಾತಿನ ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ. ಕಳೆದ 1 ವರ್ಷದ ಮೈತ್ರಿ ಆಡಳಿತಾವಧಿಯಲ್ಲಿ ತಮ್ಮ ನಾಯಕ ಕುಮಾರಸ್ವಾಮಿ ವಿರುದ್ಧ ಹಾದಿಬೀದಿಯಲ್ಲಿ ಕಾಂಗ್ರೆಸ್‍ನ ಸಚಿವ, ಶಾಸಕರು, ಮುಖಂಡರು ಹರಿಹಾಯ್ದರೂ, ಇದುವರೆಗೂ ಜೆಡಿಎಸ್‍ನ ಯಾರೊಬ್ಬರೂ ಪ್ರತಿಯಾಗಿ ಮಾತನಾಡಿರಲಿಲ್ಲ.

ಆದರೆ ಇದೀಗ ವಿಶ್ವನಾಥ್, ಬಹಿರಂಗವಾಗಿ ಸಿದ್ದರಾಮಯ್ಯ ವಿರುದ್ಧ ಪದೇ ಪದೆ ಟೀಕೆ ಮಾಡು ತ್ತಿದ್ದಂತೆ, ಕುಮಾರಸ್ವಾಮಿ ಬೆಂಬಲಿಗರು, ತಾವೂ ಏನೂ ಕಮ್ಮಿ ಇಲ್ಲ ಎಂಬಂತೆ, ನಮಗೆ ಕಾಂಗ್ರೆಸ್ ಸಹವಾಸವೇ ಬೇಡ ಎಂಬ ಮಟ್ಟಕ್ಕೆ ಇಳಿದಿದ್ದಾರೆ. ಜೆಡಿಎಸ್‍ನ ಬಹುಮಂದಿ ವಿಶ್ವನಾಥ್ ಬೆಂಬಲಕ್ಕೆ ನಿಂತಿದ್ದಾರೆ. ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್, ಇದೇ 23ರಂದು ಕಾಂಗ್ರೆಸ್‍ನ ಸಮಾನ ಮನಸ್ಕರ ಸಭೆ ಕರೆದಿದ್ದಾರೆ. ಈ ಸಭೆ ಹಿಂದಿನ ರೂವಾರಿ ಬೇರೆಯೇ ವ್ಯಕ್ತಿ ಎಂಬುದನ್ನು ಮನಗಂಡಿರುವ ಜೆಡಿಎಸ್ ನಾಯಕರು, ಇದೀಗ ತಾವೂ ಬೀದಿಗಿಳಿದಿದ್ದಾರೆ. ಬೆದರಿಕೆ ನಡುವೆ ಸರ್ಕಾರ ನಡೆಸಲು ಸಾಧ್ಯವಿಲ್ಲ, ನಾವು ಯಾವುದೇ ಅಭಿವೃದ್ಧಿ ಕೆಲಸ ಕೈಗೊಂಡರೂ ಕಾಂಗ್ರೆಸ್‍ನ ಒಂದು ಗುಂಪಿನವರ ಅಪಪ್ರಚಾರದಿಂದ ಜನರಿಗೆ ವಿಷಯ ತಲುಪುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು
ಮತ್ತು ಆಡಳಿತವನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಇಂತಹ ಸಭೆ ಮಾಡಲು ಹೊರಟಿದ್ದಾರೆ. ನಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ನೀವು ಹೀಗೇ ಮುಂದುವರೆದರೆ ನಿಮ್ಮ ಸಹವಾಸವೇ ಬೇಡ ಎಂದು ಮುಖ್ಯಮಂತ್ರಿ, ತಮ್ಮ ಆಪ್ತ ಸಂಸದರ ಮೂಲಕ ಹೇಳಿಕೆ ನೀಡಿ ಸಭೆ ನಡೆಸುವವರ ಮೇಲೆ ಪ್ರತಿ ಅಸ್ತ್ರ ಪ್ರಯೋಗಿಸಿದ್ದಾರೆ. ವಿಶ್ವನಾಥ್ ಹೇಳಿಕೆ ಸಿದ್ದರಾಮಯ್ಯ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ, ಅವರನ್ನು ರಕ್ಷಿಸಲು ಅವರ ಬೆಂಬಲಿಗರು ಹೇಳಿಕೆಗಳ ಸುರಿಮಳೆ ಮಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಮಾತ್ರ ಇಬ್ಬನಿ ರೆಸಾರ್ಟ್‍ನಲ್ಲಿ ತಣ್ಣನೆ ರಾಜಕೀಯ ಮಾಡಿ ಹೊರಬಂದು, ಇದಾವುದರ ಬಗ್ಗೆ ತಮಗೇನೂ ಗೊತ್ತಿಲ್ಲ ಎಂಬಂತಿದ್ದಾರೆ.

Translate »