ಮೈಸೂರು ನಗರಪಾಲಿಕೆ ಅನುದಾನ ಸರ್ಕಾರದ ಮಾರ್ಗಸೂಚಿಯಂತೇ ಬಳಕೆ
ಮೈಸೂರು

ಮೈಸೂರು ನಗರಪಾಲಿಕೆ ಅನುದಾನ ಸರ್ಕಾರದ ಮಾರ್ಗಸೂಚಿಯಂತೇ ಬಳಕೆ

June 15, 2019

ಮೈಸೂರು: ಮೈಸೂರು ನಗರ ಪಾಲಿಕೆಗೆ ಬರುವ ಅನುದಾನ ಸಮರ್ಪಕವಾಗಿ ಬಳಕೆ ಯಾಗುತ್ತಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಅವರ ಆರೋಪಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರತಿ ಕ್ರಿಯಿಸಿದ್ದು, ಸರ್ಕಾರದ ಮಾರ್ಗಸೂಚಿಯಂತೆಯೇ ಅನುದಾನ ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಬುಧವಾರ ಮೈಸೂರಿನ ವಿಜಯನಗರದಲ್ಲಿ ನವೀಕೃತ ಅತ್ಯಾಧುನಿಕ ಬೃಹತ್ ಜಲ ಸಂಗ್ರಹಾರ ವೀಕ್ಷಿಸಿದ ಸಂಸದ ಪ್ರತಾಪ್ ಸಿಂಹ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಾಲಿಕೆಗೆ ಬರುವ ಅನುದಾನದಲ್ಲಿ ಬಹು ಪಾಲು ಹಿರಿಯ ಕಾರ್ಪೊರೇಟರ್‍ಗಳ ಪಾಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗು ತ್ತಿದೆ. ಅಲ್ಲದೆ ಕುಡಿಯುವ ನೀರು ಯೋಜನೆಗಳಿಗೆ ಆದ್ಯ ತಾನುಸಾರ ಅನುದಾನ ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದರು.

14ನೇ ಹಣಕಾಸು ಆಯೋಗದ 68.29 ಕೋಟಿ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಕಲ್ಯಾಣಕ್ಕಿರುವ 24.10 ಅನುದಾನದ 28.39 ಕೋಟಿ ರೂ. ಹಣವನ್ನು ಸರ್ಕಾ ರದ ಮಾರ್ಗಸೂಚಿಯಂತೆಯೇ ಹಂಚಿಕೆ ಮಾಡಲಾ ಗಿದೆ. ಯುಜಿಡಿಗೆ ಶೇ.22, ಕುಡಿಯುವ ನೀರಿಗೆ ಶೇ.13, ಸಾರ್ವಜನಿಕ ಶೌಚಾಲಯಕ್ಕೆ ಶೇ.5, ಮಳೆ ನೀರು ಚರಂಡಿಗೆ ಶೇ.15, ಉದ್ಯಾನಗಳಿಗೆ ಶೇ.5, ಬೀದಿ ದೀಪಗಳಿಗೆ ಶೇ.5 ಹೀಗೆ ನಿಯಮಾನುಸಾರ ಅನುದಾನ ನಿಗದಿ ಮಾಡಿಕೊಳ್ಳಲಾಗಿದೆ. ಒಟ್ಟು ಅನುದಾನದಲ್ಲಿ ಪ್ರತಿ ವಾರ್ಡ್‍ಗೆ ಕನಿಷ್ಠ 75 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಸ್ಮಶಾನ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ಶುದ್ಧ ಕುಡಿಯುವ ನೀರು ಘಟಕದ ಅಗತ್ಯವಿರುವ ವಾರ್ಡ್‍ಗಳು, 24.10 ಅನುದಾನಕ್ಕೆ ಒಳಪಡುವ ವಾರ್ಡ್‍ಗಳು, ವಕ್ರ್ಸ್ ಕಮಿಟಿ ಸದಸ್ಯರಿಗೆ 1.20ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಮೇಯರ್ ಅನುದಾನವಾಗಿ 2 ಕೋಟಿ ರೂ. ಮೀಸ ಲಿಡಲು ಅವಕಾಶವಿದೆ. ಆದರೆ ನಾನು ಪ್ರತಿನಿಧಿಸುವ ವಾರ್ಡ್‍ಗೆ ಪಡೆದಿರುವುದು 1.30 ಕೋಟಿ ರೂ. ಮಾತ್ರ. ಉಪಮೇಯರ್ ಷಫೀ ಅಹಮದ್ ಪ್ರತಿನಿಧಿಸುವ ವಾರ್ಡ್‍ಗೆ 1.15 ಕೋಟಿ, ಮಾಜಿ ಮೇಯರ್ ಅಯೂಬ್ ಖಾನ್ ಅವರ ವಾರ್ಡ್‍ಗೆ 85 ಲಕ್ಷ ರೂ. ನೀಡ ಲಾಗಿದೆ. ಬಿಜೆಪಿ ಸದಸ್ಯರಾದ ಶಿವಕುಮಾರ್ ವಾರ್ಡ್‍ಗೆ 1.20 ಕೋಟಿ, ಉಷಾ ನಾರಾಯಣ್ ವಾರ್ಡ್‍ಗೆ 1.20 ಕೋಟಿ, ಗಾಡಿಚೌಕದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಾಣದ ಅಂದಾಜು ಮೊತ್ತ ಸೇರಿದಂತೆ ಪ್ರಮಿಳಾ ಭರತ್ ಪ್ರತಿನಿಧಿಸುವ 23ನೇ ವಾರ್ಡ್‍ಗೆ ಒಟ್ಟು 2.30 ಕೋಟಿ ರೂ. ಅನುದಾನ ನೀಡಲಾಗಿದೆ. ವಕ್ರ್ಸ್ ಹಾಗೂ ಹೆಲ್ತ್ ಕಮಿಟಿ ಮೂಲಕವೇ ಅಗತ್ಯಕ್ಕೆ ಅನುಸಾರ ವಾಗಿಯೇ ಅನುದಾನ ಹಂಚಿಕೆ ಮಾಡಲಾಗಿದೆ. ಇದ ರಲ್ಲಿ ಯಾವುದೇ ರೀತಿಯ ತಾರತಮ್ಯವಾಗಲೀ, ಪಕ್ಷಪಾತ ವಾಗಲೀ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಮೇಯರ್, ತಪ್ಪು ಮಾಹಿತಿಯಿಂದಾಗಿ ಸಂಸದ ಪ್ರತಾಪ್ ಸಿಂಹ ಅವರು ನಗರಪಾಲಿಕೆ ವಿರುದ್ಧ ಆರೋಪಿಸಿರಬಹುದು. ಅವರೂ ಸಹ ಕೌನ್ಸಿಲ್ ಸದಸ್ಯರಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿ ಪ್ರಶ್ನಿಸುವ ಅಧಿಕಾರ ಅವರಿಗಿದೆ. ಆದರೆ ಈವರೆಗಿನ 7ರಲ್ಲಿ ಒಂದೇ ಒಂದು ಕೌನ್ಸಿಲ್ ಸಭೆ ಯಲ್ಲೂ ಪಾಲ್ಗೊಂಡಿಲ್ಲ. ಹೀಗೆ ಸಮರ್ಪಕ ಮಾಹಿತಿ ಯಿಲ್ಲದೆ ಪಾಲಿಕೆ ವಿರುದ್ಧ ಆರೋಪಿಸುವುದು ಉಚಿತವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪಮೇಯರ್ ಷಫೀ ಅಹಮದ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಸುನಿಲ್, ಸಮಿತಿ ಸದಸ್ಯರೂ ಜೆಡಿಎಸ್ ನಾಯಕಿಯೂ ಆದ ಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮಣಿ ರಮೇಶ್, ವಕ್ರ್ಸ್ ಕಮಿಟಿ ಸದಸ್ಯ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

Translate »